Fact Check: ಏರ್ ಇಂಡಿಯಾದಲ್ಲಿ 3 ಪಟ್ಟು ಹಣ ವಸೂಲಿ ಮಾಡಲಾಯ್ತಾ?
ಅಮೆರಿಕದ ಚಿಕಾಗೋದಿಂದ ದೆಹಲಿಗೆ ಬಂದ ಏರ್‌ಇಂಡಿಯಾ ವಿಮಾನದಲ್ಲಿ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲಾಗಿದೆ ಮತ್ತು ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಜಗಳ ಮಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಐತಿಹಾಸಿಕ ಏರ್‌ಲಿಫ್ಟ್‌ಗೆ ಭಾರತ ಸಜ್ಜಾಗಿದೆ. ಈಗಾಗಲೇ ಈ ಕಾರ್ಯಾಚರಣೆ ಆರಂಭವಾಗಿದೆ.
ಆದರೆ ಅಮೆರಿಕದ ಚಿಕಾಗೋದಿಂದ ದೆಹಲಿಗೆ ಬಂದ ಏರ್‌ಇಂಡಿಯಾ ವಿಮಾನದಲ್ಲಿ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲಾಗಿದೆ ಮತ್ತು ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಜಗಳ ಮಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಇಂಥ ಸಮಯದಲ್ಲಿ ಏರ್ ಇಂಡಿಯಾ ಸಂಸ್ಥೆ ಮೂರು ಪಟ್ಟು ದುಡ್ಡು ವಸೂಲಿಗಿಳಿದಿತ್ತೇ ಎಂದು ಪರಿಶೀಲಿಸಿದಾಗ, ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ‘ಇದು ಸುಳ್ಳು ಸುದ್ದಿಯಾಗಿದ್ದು, ಬೇರೊಂದು ದೇಶದ ವಿಮಾನಯಾನ ಸಂಸ್ಥೆಯಲ್ಲಿ ನಡೆದ ಘಟನೆಯನ್ನು ಭಾರತದ್ದೆಂದು ತಪ್ಪಾಗಿ ಬಿಂಬಿಸಲಾಗಿದೆ’ ಎನ್ನಲಾಗಿದೆ.
ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವಾಲಯವೂ ವೈರಲ್ ವಿಡಿಯೋದಲ್ಲಿರುವ ವಿಮಾನ ಏರ್‌ಇಂಡಿಯಾ ಅಲ್ಲ. ಹಾಗೆಯೇ ವಿದೇಶಗಳಿಂದ ಕರೆತರುತ್ತಿರುವ ಭಾರತೀಯರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿಲ್ಲ ಎಂದು ವಿವರಣೆ ನೀಡಿದೆ. ಇಂಡಿಯಾ ಟುಡೇ ಸುದ್ದಿವಾಹಿನಿಯು, ವೈರಲ್ ವಿಡಿಯೋ ಪಾಕಿಸ್ತಾನಕ್ಕೆ ಸಂಬಂಧಿಸಿದ್ದಾಗಿದ್ದು, ಪಾಕ್ ಪ್ರಜೆಯೊಬ್ಬರು ವಿಮಾನದಲ್ಲಿ ಸಾಮಾಜಿಕ ಅಂತರ ಕಾಪಾಡದಿರುವುದರ ಬಗ್ಗೆ ದೂರಿರುವುದಾಗಿದೆ ಎಂದು ಖಚಿತಪಡಿಸಿದೆ.
- ವೈರಲ್ ಚೆಕ್