Fact Check| ಡಾ. ದೇವಿ ಶೆಟ್ಟಿ ನೀಡಿದ 22 ಸಲಹೆಗಳು!
ಸದ್ಯ ನಾರಾಯಣ ಹೃದಯಾಲಯದ ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಡಾ.ದೇವಿಶೆಟ್ಟಿಅವರ ಹೆಸರಿನಲ್ಲಿ ಕೊರೋನಾದಿಂದ ರಕ್ಷಿಸಿಕೊಳ್ಳುವ ಸಲಹೆಗಳನ್ನು ನೀಡಲಾಗಿದೆ ಎಂಬ ಸಂದೇಶ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
ನವದೆಹಲಿ(ಮೇ.21): ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ವಿರುದ್ಧ ಯಾವುದೇ ಲಸಿಕೆ ಇಲ್ಲದ ಕಾರಣ ಕೊರೋನಾದಿಂದ ರಕ್ಷಿಸಿಕೊಳ್ಳುವ ಬಗೆ ಹೇಗೆ ಎಂಬ ಬಗ್ಗೆ ಜಾಲತಾಣಗಳಲ್ಲಿ ನಾನಾ ರೀತಿಯ ಸಲಹೆಗಳು ಕೇಳಿಬರುತ್ತವೆ. ಸದ್ಯ ನಾರಾಯಣ ಹೃದಯಾಲಯದ ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಡಾ.ದೇವಿಶೆಟ್ಟಿಅವರ ಹೆಸರಿನಲ್ಲಿ ಕೊರೋನಾದಿಂದ ರಕ್ಷಿಸಿಕೊಳ್ಳುವ ಸಲಹೆಗಳನ್ನು ನೀಡಲಾಗಿದೆ.
ವೈರಲ್ ಸಂದೇಶದಲ್ಲಿ ಚಪ್ಪಲಿ ಅಥವಾ ಶೂಗಳನ್ನು ಮನೆಯಿಂದ ಹೊರಗಿಡುವಂತೆ, ಕರ್ಚೀಫ್ ಬದಲಿಗೆ ಸ್ಯಾನಿಟೈಸರ್ ಬಳಸುವಂತೆ, ಹೊರಗಿನ ಆಹಾರವನ್ನು ಆದಷ್ಟುಕಡಿಮೆ ಮಾಡುವಂತೆ ವಿವಿಧ 22 ಸಲಹೆಗಳನ್ನು ನೀಡಲಾಗಿದೆ.
ಬಿಸ್ವದೇವ್ ಚಟ್ಟೋಪಾಧ್ಯಾಯ ಎಂಬುವರು ಮೊದಲಿಗೆ ಡಾ.ದೇವಿಶೆಟ್ಟಿಅವರ ಫೋಟೋದೊಂದಿಗೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಇದನ್ನು ಪೋಸ್ಟ್ ಮಾಡಿ, ‘ ನಾರಾಯಣ ಹೃದಯಾಲಯದ ಸಂಸ್ಥಾಪಕರು ಮತ್ತು 1500ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿರುವ ಡಾ.ದೇವಿಶೆಟ್ಟಿಅವರ ಈ ಸುಲಭ ಸಲಹೆಗಳನ್ನು ಒಂದು ವರ್ಷ ಪಾಲಿಸೋಣ’ ಎಂದು ಬರೆದಿದ್ದಾರೆ. ಈ ಪೋಸ್ಟ್ 56,000 ಬಾರಿ ಶೇರ್ ಆಗಿದೆ.
ಆದರೆ ಇದರ ಸತ್ಯಾಸತ್ಯ ಪರಿಶೀಲಿಸಿದಾಗ ವೈರಲ್ ಪೋಸ್ಟ್ ಡಾ.ದೇವಿಶೆಟ್ಟಿಹೆಸರಿನ ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಸ್ವತಃ ದೇವಿಶೆಟ್ಟಿಅವರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಇದು ಸುಳ್ಳುಸುದ್ದಿ. ನಾವೆಲ್ಲರೂ ಅನುಭವಿಸುತ್ತಿರುವ ನೋವಿನಿಂದ ಲಾಭ ಪಡೆಯುತ್ತಿರುವುದು ನೋವಿನ ಸಂಗತಿ’ ಎಂದು ಸ್ಪಷ್ಟನೆ ನೀಡಿದ್ದಾರೆ.