ನವದೆಹಲಿ[ಮಾ.05]: ಸೋಷಿಯಲ್‌ ಮೀಡಿಯಾಗಳಲ್ಲಿ ದೈನಿಕ್‌ ಜಾಗರಣ್‌ ಪತ್ರಿಕೆಯ ಜಾಹೀರಾತು ಎನ್ನಲಾದ ತುಣುಕೊಂಡು ವ್ಯಾಪಕವಾಗಿ ವೈರಲ್‌ ಆಗಿದೆ. ಅದರಲ್ಲಿ, ಆಮ್‌ ಆದ್ಮಿ ಪಕ್ಷವು ದೆಹಲಿಯ ದಂಗೆಯಲ್ಲಿ ಸಂತ್ರಸ್ತರಾದ ಮುಸ್ಲಿಮರಿಗೆ ಮಾತ್ರ ಪರಿಹಾರ ನೀಡುತ್ತಿದೆ ಎಂದು ಹೇಳಲಾಗಿದೆ.

ನಮೋ ಇಂಡಿಯಾ ಎಂಬ ಫೇಸ್‌ಬುಕ್‌ ಪುಟವೂ ಸೇರಿದಂತೆ ಹಲವಾರು ಫೇಸ್‌ಬುಕ್‌ ಪುಟಗಳು ಮತ್ತು ಟ್ವೀಟರ್‌ ಹ್ಯಾಂಡಲ್‌ಗಳು ಇದನ್ನು ಶೇರ್‌ ಮಾಡಿವೆ. ಅವುಗಳಿಗೆ ಪ್ರತಿಕ್ರಿಯಿಸಿರುವ ಜನರು, ಆಮ್‌ ಆದ್ಮಿ ಪಕ್ಷದ ಮುಖವಾಡ ಕೊನೆಗೂ ಬಯಲಾಗಿದೆ. ದೆಹಲಿ ದಂಗೆಯಲ್ಲಿ ಹಿಂದು, ಮುಸ್ಲಿಮರಿಬ್ಬರೂ ಸಂತ್ರಸ್ತರಾಗಿದ್ದಾರೆ. ಆದರೆ, ದೆಹಲಿ ಸರ್ಕಾರ ಹೇಗೆ ಮುಸ್ಲಿಮರಿಗೆ ಮಾತ್ರ ಪರಿಹಾರ ನೀಡುತ್ತದೆ? ಹಿಂದುಗಳು ಅಸ್ಪೃಶ್ಯರೇ? ಹೀಗೆ ಧರ್ಮಾಧಾರಿತವಾಗಿ ಪರಿಹಾರ ನೀಡುವುದನ್ನು ಸಂವಿಧಾನ ಒಪ್ಪುತ್ತದೆಯೇ ಎಂದೆಲ್ಲ ತರಾಟೆ ತೆಗೆದುಕೊಂಡಿದ್ದಾರೆ.

ಈ ಕುರಿತು ಕ್ವಿಂಟ್‌ ಮತ್ತು ಆಲ್ಟ್‌ನ್ಯೂಸ್‌ ಸಂಸ್ಥೆಗಳು ಹುಡುಕಾಡಿದಾಗ ಫೆ.29ರಂದು ದೈನಿಕ್‌ ಜಾಗರಣ್‌ ಪತ್ರಿಕೆಯಲ್ಲಿ ದೆಹಲಿ ಸರ್ಕಾರ ನೀಡಿದ ಜಾಹೀರಾತು ದೊರೆತಿದೆ. ಕಿಡಿಗೇಡಿಗಳು ಈ ಜಾಹೀರಾತಿನ ಹೆಡ್ಡಿಂಗ್‌ ಪಕ್ಕದಲ್ಲಿ ಫೋಟೋಶಾಪ್‌ ಮಾಡಿ, ಆವರಣದಲ್ಲಿ ಮುಸ್ಲಿಂ ಎಂದು ಸೇರಿಸಿ ವೈರಲ್‌ ಮಾಡಿದ್ದಾರೆ.

ಆಗ ಮುಸ್ಲಿಮರಿಗೆ ಮಾತ್ರ ಸರ್ಕಾರ ಪರಿಹಾರ ನೀಡುತ್ತದೆ ಎಂಬ ಅರ್ಥ ಬರುತ್ತದೆ. ಮೂಲ ಜಾಹೀರಾತಿನಲ್ಲಿ ದಂಗೆ ಪೀಡಿತರಿಗೆ ಪರಿಹಾರ ಎಂಬ ಶೀರ್ಷಿಕೆಯಷ್ಟೇ ಇದೆ. ಮುಸ್ಲಿಮರಿಗೆ ಮಾತ್ರ ಎಂದು ಎಲ್ಲೂ ಇಲ್ಲ. ಹೀಗಾಗಿ ವೈರಲ್‌ ಆಗಿರುವ ಸುದ್ದಿ ಸುಳ್ಳು.