ಮೇಲ್ಸೇತುವೆಯೊಂದು ಕುಸಿದು ಬಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದು ಬೆಂಗಳೂರಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ಸತ್ಯ
ಬೆಂಗಳೂರು(ಆ.27): ಮೇಲ್ಸೇತುವೆಯೊಂದು ಕುಸಿದು ಬಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದು ಬೆಂಗಳೂರಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಇನ್ನೂ ಕೆಲವರು ಈ ಘಟನೆ ನಡೆದಿದ್ದು ಅಹಮದಾಬಾದ್‌ನಲ್ಲಿ ಎಂದೂ, ಮತ್ತೆ ಕೆಲವರು ಮುಂಬೈನಲ್ಲಿ ಎಂದೂ ಹೇಳುತ್ತಿದ್ದಾರೆ.
ನೆಟ್ಟಿಗರು ಫ್ಲೈಓವರ್ ಎರಡು ಭಾಗವಾಗಿ ಕುಸಿದು ಬಿದ್ದಿರುವ ಫೋಟೋಗಳನ್ನು ಪೋಸ್ಟ್ ಮಾಡಿ ‘ಬೆಂಗಳೂರಿನ ವೈಟ್‌ಫೀಲ್ಡ್ ಸಮೀಪದಲ್ಲಿ ಕಾಮಗಾರಿ ಹಂತದಲ್ಲಿದ್ದ ಮೆಟ್ರೋ ಫ್ಲೈ ಓವರ್ ಮುರಿದುಬಿದ್ದಿದೆ’ ಎಂದು ಬರೆದುಕೊಂಡಿದ್ದಾರೆ.
ಆದರೆ ನಿಜಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಎಂದು ಬೂಮ್ ಲೈವ್ ಪರಿಶೀಲಿಸಿದಾಗ ಇದು ಬೆಂಗಳೂರಿನಲ್ಲೂ ನಡೆದಿಲ್ಲ, ಅಹಮದಾಬಾದ್, ಮುಂಬೈನಲ್ಲೂ ನಡೆದಿದ್ದಲ್ಲ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಆಗಸ್ಟ್ 22, 2020ರಂದು ಗುರುಗ್ರಾಮದ ಶೋಹ್ನ ರಸ್ತೆಯಲ್ಲಿ ಮೇಲ್ಸೇತುವೆ ಕುಸಿದು ಬಿದ್ದಿರುವುದಾಗಿ ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿರುವುದು ಕಂಡುಬಂದಿದೆ.
ಎಎನ್‌ಐ ನ್ಯೂಸ್ ಏಜೆನ್ಸಿ ಈ ಬಗ್ಗೆ ಫೋಟೋ ಸಮೇತ ಟ್ವೀಟ್ ಸಹ ಮಾಡಿರುವುದು ಪತ್ತೆಯಾಗಿದೆ. ಆ ಎಲ್ಲಾ ವರದಿಗಳ ಪ್ರಕಾರ ಫ್ಲೈಓವರ್ ಕಾಮಗಾರಿ 2018ರಂದು ಆರಂಭವಾಗಿದ್ದು, ಆಗಸ್ಟ್ 22ರ ರಾತ್ರಿ 10 ಗಂಟೆ ಸುಮಾರಿಗೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಬಿಟ್ಟರೆ ಬೇರಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದಿದೆ. ಹಾಗಾಗಿ ಬೆಂಗಳೂರಿನಲ್ಲಿ ಫ್ಲೈ ಓವರ್ ಕುಸಿದು ಬಿದ್ದಿದೆ ಎಂಬುದು ಸುಳ್ಳುಸುದ್ದಿ.
