Fact Check: ಬಿಜೆಪಿ ಕಚೇರಿಯಿಂದಲೇ 'ಸಾಮ್ರಾಟ್ ಪೃಥ್ವಿರಾಜ್' ಪ್ರಮೋಷನ್? ಅಕ್ಷಯ್-ಶಾ ವೈರಲ್ ಫೋಟೋ ಸತ್ಯಾಂಶವೇನು?
‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾವನ್ನು ಬಿಜೆಪಿ ಕಚೇರಿಯಿಂದಲೇ ಪ್ರಚಾರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ. ಆದರೆ ಇದು ದಾರಿ ತಪ್ಪಿಸುವ ಮಾಹಿತಿಯಾಗಿದೆ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ.
Fact Check: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' (Samrat prithviraj) ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಅಕ್ಷಯ್ ಕುಮಾರ್ ಮತ್ತು ಅವರಿಗೆ ಸಂಬಂಧಿಸಿದ ನಕಲಿ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅಕ್ಷಯ ಕುಮಾರ್ ಸಿನಿಮಾಗೆ ಸಂಬಂಧಿಸಿದ ಹಲವು ಸುಳ್ಳು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ನುಡವೆ ಅಕ್ಷಯ್ ಹೊಸ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್' ಸಂಬಂಧಿಸಿದಂತೆ ಇದೇ ರೀತಿಯ ಹೇಳಿಕೆಗಳೂ ವೈರಲ್ ಆಗುತ್ತಿವೆ. ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾವನ್ನು ಬಿಜೆಪಿ ಕಚೇರಿಯಿಂದಲೇ ಪ್ರಚಾರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ. ಆದರೆ ಇದು ದಾರಿ ತಪ್ಪಿಸುವ ಮಾಹಿತಿಯಾಗಿದೆ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ.
Claim: ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್, ಗೃಹ ಸಚಿವ ಅಮಿತ್ ಶಾ ಮತ್ತು ನಟಿ ಮಾನುಷಿ ಚಿಲ್ಲರ್ ಅವರ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಲಾಗಿದೆ. 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾವನ್ನು ಬಿಜೆಪಿ ಕಚೇರಿಯಿಂದ ಪ್ರಚಾರ ಮಾಡಲಾಗುತ್ತಿದೆ ಎಂದು ಪೋಸ್ಟಿನಲ್ಲಿ ಹೇಳಲಾಗಿದೆ.
ಇದೇ ಸಮಯದಲ್ಲಿ ಅಮಿತ್ ಶಾ ಅವರ ಕೈಯಲ್ಲಿ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಸ್ವೀಕರಿಸಿಬಹುದಿತ್ತು ಎಂದು ಸಹ ಉಲ್ಲೇಖಿಸಲಾಗಿದೆ. ಪೋಸ್ಟ್ ಮಾಡಿದ ಫೋಟೋದಲ್ಲಿ ಅಕ್ಷಯ್ ಕುಮಾರ್ ಮತ್ತು ಅಮಿತ್ ಶಾ ಭೇಟಿಯಾಗಿದ್ದಾರೆ. ಜೊತೆಗೆ ಹಿಂಬದಿಯಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದ ಪೋಸ್ಟರ್ ನೋಡಬಹುದು.
Fact Check: ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಪರೀಶಿಲಿಸಿದಾಗ ಈ ಫೋಟೋದ ಹಲವು ಲಿಂಕ್ ಲಭ್ಯವಾಗುತ್ತವೆ. ಈ ಲಿಂಕ್‌ಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್‌ಗೆ ಅಮಿತ್ ಶಾ ಹಾಜರಾಗಿದ್ದರು ಎಂದು ಬಹುತೇಕ ಸುದ್ದಿಗಳಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿಯ ಚಿತ್ರಮಂದಿರವೊಂದರಲ್ಲಿ ಅಮಿತ್ ಶಾ ಅವರಿಗಾಗಿ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದು ದೇಶದ ಬಹುತೇಕ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ. ವೈರಲ್ ಪೋಸ್ಟ್‌ನಲ್ಲಿ ಬಳಸಲಾದ ಫೋಟೋ ನಟಿ ಮಾನುಷಿ ಚಿಲ್ಲರ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಯೂ ಪೋಸ್ಟ್ ಮಾಡಲಾಗಿದೆ.
ನಟಿ ಮಾನುಷಿ ಚಿಲ್ಲರ್ ಜೂನ್ 1, 2022 ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. "ಭಾರತದ ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಜಿ ಮತ್ತು ಇತರ ಎಲ್ಲ ಗಣ್ಯರು ಇಂದು ನವದೆಹಲಿಯಲ್ಲಿ 'ಸಾಮ್ರಾಟ್ ಪೃಥ್ವಿರಾಜ್' ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು" ಎಂದು ಶೀರ್ಷಿಕೆ ನೀಡಿದ್ದಾರೆ. ಹೀಗಾಗಿ ಸಂಬಂಧಪಟ್ಟ ಫೋಟೋ ಬಿಜೆಪಿ ಕಚೇರಿಯದ್ದಲ್ಲ ಎಂದು ತಿಳಿದುಬಂದಿದೆ.
ಇನ್ನು ಈ ಬಗ್ಗೆ ಇಂಡಿಯನ್ ಎಕ್ಸಪ್ರೆಸ್ (Link) ಕೂಡ ವರದಿ ಮಾಡಿದ್ದು, "ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ರಾತ್ರಿ ನಡೆದ ವಿಶೇಷ ಪ್ರದರ್ಶನದಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಚಲನಚಿತ್ರವನ್ನು ವೀಕ್ಷಿಸಿದ ನಂತರ ಭಾಷಣದಲ್ಲಿ "ಹಲವಾರು ಪ್ರತಿಕೂಲಗಳನ್ನು ನಿವಾರಿಸಿದ ನಂತರ, ಈ ಜಗತ್ತಿಗೆ ದಾರಿ ತೋರಿಸಿದ್ದ ಭಾರತದ ಹೆಮ್ಮೆ, ಸಂಸ್ಕೃತಿ ಮತ್ತು ಸಹಜ ನಂಬಿಕೆಯು ಈಗ ಮರಳಿದೆ" ಎಂದು ಹೇಳಿದ್ದಾರೆ" ಎಂದು ಹೇಳಲಾಗಿದೆ.
ಹೀಗಾಗಿ ಗೃಹ ಸಚಿವ ಅಮಿತ್ ಶಾ ಮತ್ತು ಅಕ್ಷಯ್ ಕುಮಾರ್ ಅವರ ಭೇಟಿಯ ಫೋಟೋ ಬಿಜೆಪಿ ಕಚೇರಿಯದ್ದಲ್ಲ, ಆದರೆ ದೆಹಲಿಯ ಚಿತ್ರಮಂದಿರದಲ್ಲಿ 'ಸಾಮ್ರಾಟ್ ಪೃಥ್ವಿರಾಜ್' ವಿಶೇಷ ಪ್ರದರ್ಶನದ ಚಿತ್ರ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿದುಬಂದಿದೆ.