ಇತ್ತೀಚಿಗೆ ಬಂದ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ‘ಪ್ರೀಮಿಯರ್ ಪದ್ಮಿನಿ’ ಕೂಡಾ ಒಂದು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರದ ಬಗ್ಗೆ ವಿವಾದವೊಂದು ಎದ್ದಿದೆ. 

ಈ ಸಿನಿಮಾದಲ್ಲಿ ಬರುವ ನಂಜುಂಡಿ ಪಾತ್ರವು ಬರಹಗಾರ ವಸುಧೇಂದ್ರ ಅವರ ವರ್ಣಮಯ ಪುಸ್ತಕದಲ್ಲಿರುವ ಸುದೀರ್ಘ ಪ್ರಬಂಧ ‘ ನಂಜುಂಡಿ’ ಯಿಂದ ತೆಗೆದುಕೊಂಡಿದ್ದು ಎಂಬ ಆರೋಪ ಕೇಳಿ ಬಂದಿದೆ. 

"ನಿರ್ದೇಶಕ ರಮೇಶ್ ಇಂದಿರಾ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುತ್ತೇನೆ ಎಂದು ಹೇಳಿ ಸಂಭಾವನೆಯನ್ನೂ ನಿಗದಿಪಡಿಸಿದ್ದರು. ಆಮೇಲೆ ಪತ್ತೆಯೇ ಇಲ್ಲ. ಸಿನಿಮಾ ಬಿಡುಗಡೆಗೂ ಮುನ್ನ ಕರೆ ಮಾಡಿ, ‘ ಸಿನಿಮಾ ಮಾಡ್ಬಿಟ್ಟೆ ಸಾರ್. ಆಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್‌ ಕಾರ್ಡ್‌ನಲ್ಲಿ ಹಾಕಬಹುದೆ?” ಎಂದು ವಿಚಾರಿಸಿದರು. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ.

ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದಕೊಳ್ಳುವಂತಿಲ್ಲ. ಯಾವುದೋ ಮತ್ತೊಂದು ಕತೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದೆ. ಅನಂತರ ಅವರು ಸುಮ್ಮನಾಗಿಬಿಟ್ಟರು. ಈಗ ಸಿನಿಮಾದಲ್ಲಿ ಬಹುತೇಕ “ನಂಜುಂಡಿ” ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ" ಎಂದು ವಸುಧೇಂದ್ರ ಆರೋಪಿಸಿದ್ದಾರೆ. 

 

ವಸುಧೇಂದ್ರ ಆರೋಪಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಉತ್ತರಿಸಿದ್ದಾರೆ.

ಇಲ್ಲಿ ಶ್ರುತಿಯವರು  ’ಮೊದಲು ಅದನ್ನು ತಮಿಳು ಸಿನಿಮಾ ರೀಮೇಕ್ ಅಂದರು, ಈಗ ಹೊಸ drama .... ಶ್ರೀಯುತ ವಸುಧೇಂದ್ರ ಅಂತ ಒಬ್ಬರು ಕನ್ನಡದ ಬರಹಗಾರರು ಇದ್ದಾರೆ, ಅವರ ಒಂದು ಪ್ರಭಂಧ .ಇದನ್ನು ನಾವು ಪ್ರೀಮಿಯರ್ ಪದ್ಮಿನಿ ಚಿತ್ರ ಮಾಡಿದ್ದೀವಿ ಅಂತ ಹೊಸ ಆರೋಪ’ ಎಂದು ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ವಸುಧೇಂದ್ರರನ್ನು ಅವಮಾನ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಆಕ್ಷೇಪಿಸಿದ್ದಾರೆ.