ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ (kichcha sudeep) ರಣಹದ್ದಿನ ಬಗ್ಗೆ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ರಣಹದ್ದುಗಳ ಬಗ್ಗೆ ನಮಗೆ ಗೊತ್ತಿಲ್ಲದ, ನಾವು ತಪ್ಪು ಅರ್ಥ ಮಾಡಿಕೊಂಡಿರ ಆ ವಿಷಯ ಏನು?
ರಣಹದ್ದು ಬಗ್ಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಿಗ್ ಬಾಸ್ (Bigg Boss) ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಬಿಗ್ ಬಾಸ್ ವಿರುದ್ಧ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿತ್ತು. ಆಗಿದ್ದಾದರೂ ಏನು? ಕೆಲ ವಾರಗಳ ಹಿಂದೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಒಬ್ಬೊಬ್ಬ ಸ್ಪರ್ಧಿ ಕೊರಳಿಗೆ ಅವರ ಗುಣಕ್ಕೆ ಹೋಲುವಂತೆ ಒಂದೊಂದು ಪ್ರಾಣಿ-ಪಕ್ಷಿಯ ಚಿತ್ರ ಹಾಕುವ ಟಾಸ್ಕ್ ನೀಡಲಾಗಿತ್ತು. ಆಗ ಗಿಲ್ಲಿ ಕೊರಳಿಗೆ ಧ್ರುವಂತ್ ರಣಹದ್ದಿನ ಫೋಟೊ ಹಾಕಿದ್ದರು. ‘ಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂಗೆ ಲಬಕ್ ಅಂತ ಹಿಡಿಯುತ್ತೆ ರಣಹದ್ದು’ ಎಂದು ಕಿಚ್ಚು ಸುದೀಪ್ ಹೇಳಿದ್ದರು.
ರಣಹದ್ದಿನ ಕುರಿತ ಅವರ ಈ ಮಾತು ವಿವಾದಕ್ಕೆ ಕಾರಣವಾಗಿತ್ತು. ರಣಹದ್ದು ಸಂರಕ್ಷಣಾ ಟ್ರಸ್ಟ್ ನೀಡಿದ ದೂರಿನನ್ವಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ರಾಮನಗರ ಡಿಆರ್‌ಎಫ್ಓ ಸುಷ್ಮಾ ಖುದ್ದು ನೋಟಿಸ್ ನೀಡಿ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪಷ್ಟೀಕರಣ ನೀಡುವಂತೆ ತಿಳಿಹೇಳಿದ್ದಾರೆ. ವಿಷಯ ಇಷ್ಟೆ- ರಣಹದ್ದುಗಳು ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ಹದ್ದು ಹಾಗೂ ರಣಹದ್ದಿಗೂ ಬಹಳ ವ್ಯತ್ಯಾಸ ಇದೆ.
ರಣಹದ್ದುಗಳ ಬಗ್ಗೆ ನಿಮಗಿವು ಗೊತ್ತಿರಲಿಕ್ಕಿಲ್ಲ
ರಣಹದ್ದುಗಳು ಎಲ್ಲ ಖಂಡಗಳಲ್ಲೂ ಕಂಡುಬರುತ್ತವೆ. ಇದು ಹದ್ದು, ಗರುಡ, ಗಿಡುಗ ಮುಂತಾದ ಪಕ್ಷಿಗಳ ಹತ್ತಿರದ ಸಂಬಂಧಿ. ಈ ಪಕ್ಷಿ ಭಯಂಕರವಾಗಿ ಕಂಡರೂ ಪರಿಸರದ ಆಹಾರ ಸರಪಣಿಯಲ್ಲಿ ಮುಖ್ಯಸ್ಥಾನ ಪಡೆದಿದೆ. ರಣಹದ್ದು ಎಂಬ ಸಾಮಾನ್ಯ ಹೆಸರಿನ ಇಪ್ಪತ್ತಕ್ಕೂ ಹೆಚ್ಚು ಪ್ರಭೇದಗಳಿವೆ. ಉಷ್ಣ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಕಂಡುಬರುವ ಈ ಪಕ್ಷಿಗಳು ಆಸ್ಟ್ರೇಲಿಯ ಹಾಗೂ ಹಿಂದೂ ಮಹಾಸಾಗರಗಳ ನಡುವೆ ಇರುವ ಕೆಲವು ದ್ವೀಪಗಳನ್ನು ಹೊರತುಪಡಿಸಿ ಎಲ್ಲ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ. ಸಾಕು ಪ್ರಾಣಿ ಹಾಗೂ ವನ್ಯಜೀವಿಗಳ ಶವಗಳನ್ನು ತಿಂದು ಊರನ್ನು ದುರ್ವಾಸನೆಯಿಂದ ರಕ್ಷಿಸುತ್ತವೆ. ಹಿಂದೊಮ್ಮೆ ಭಾರತದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದ ಬೋಳು ತಲೆಯ ರಣಹದ್ದುಗಳು ಈಗ ಕಾಣಸಿಗುವುದೇ ಅಪರೂಪ.
ರಾಮನಗರದಲ್ಲಿ ಇವುಗಳ ಸಂರಕ್ಷಿತ ಪ್ರದೇಶ ಇದೆ. ಹಿಂದೆ ಇಲ್ಲಿ ಸಾಕಷ್ಟು ರಣಹದ್ದುಗಳಿದ್ದವು. ಈಗ ಅವು ಅಳಿವಿನಂಚಿಗೆ ಸಂದಿವೆ. ರಣಹದ್ದುಗಳು ವಿಶಾಲವಾದ ಕಲ್ಲುಬಂಡೆಗಳ ಮೇಲೆ ಇಲ್ಲವೆ ಬಯಲು ಪ್ರದೇಶಗಳಲ್ಲಿ ಎತ್ತರದ ಮರಗಳ ಮೇಲೆ ಗುಂಪಾಗಿ ಕುಳಿತುಕೊಳ್ಳುತ್ತವೆ. ಆಗೊಮ್ಮೆ ಈಗೊಮ್ಮೆ ರೆಕ್ಕೆ ಬಡಿಯುತ್ತ ಚೀರಾಡುತ್ತ ಅಲ್ಲಿಯೇ ಜಿಗಿದಾಡುತ್ತವೆ. ಯಾವುದಾದರೂ ಒಂದು ರಣಹದ್ದು ದೂರದಲ್ಲೆಲ್ಲೊ ಸತ್ತ ಪ್ರಾಣಿಯನ್ನು ಕಂಡರೆ ಉಳಿದವುಗಳಿಗೂ ಸೂಚನೆ ನೀಡುತ್ತದೆ. ಆಗ ಇವು ಹಲವಾರು ಕಿ.ಮೀ. ದೂರವಿದ್ದರೂ ಅಲ್ಲಿಗೆ ಹಾರಿ ಆಹಾರವಿರುವ ಸ್ಥಳವನ್ನು ತಲುಪುತ್ತವೆ. ಆಹಾರ ಭಕ್ಷಣೆಯ ಸಮಯದಲ್ಲಿ ಹಂಚಿಕೊಳ್ಳುತ್ತವೆ.
ಮಾನವನನ್ನು ಬಿಟ್ಟರೆ ಹುಲಿಯಿಂದ ಮಾತ್ರ ಇವುಗಳನ್ನು ಬೇಟೆಯಾಡಲು ಸಾಧ್ಯ. ಉಳಿದಂತೆ ಇವಕ್ಕೆ ಯಾರೂ ವೈರಿಗಳಿಲ್ಲ. ವೈರಿಗಳಿಂದ ಪಾರಾಗುವ ಸಲುವಾಗಿ ಇವು ಈಗ ತಾನೇ ತಿಂದ ಆಹಾರವನ್ನು ಕೊಂಡೊಯ್ಯುತ್ತವೆ ಅಥವಾ ಆ ಜಾಗದಲ್ಲಿ ಕೆಲವು ದಿನಗಳ ಕಾಲ ಗಬ್ಬು ವಾಸನೆ ಸೂಸುವ ವಾಂತಿ ಮಾಡುತ್ತವೆ. ಹೀಗಾಗಿ ಇವುಗಳಿಂದ ಆಹಾರ ಕಸಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ. ರೆಕ್ಕೆ ಬಡಿಯದೇ ಒಂದು ತಾಸು ಕಾಲ ಆಕಾಶದಲ್ಲಿ ಸುತ್ತುಹೊಡೆಯಬಲ್ಲದು. ಈ ತಲೆಮಾರಿನ ಹದ್ದುಗಳು ವಾಸನೆಯ ಮೂಲಕ ಆಹಾರ ಹುಡುಕುವ ಸಾಮರ್ಥ್ಯ ಹೊಂದಿದ್ದರೆ, ಹಳೆ ಜಗತ್ತಿನ ಹದ್ದು ಎಂದು ಗುರುತಿಸಿಕೊಂಡಿರುವ ಬೋಳು ತಲೆಯ ರಣಹದ್ದು ಕಣ್ಣಿನ ಸಹಾಯದಿಂದ ಆಹಾರ ಹುಡುಕುತ್ತದೆ. ಇದರ ದೃಷ್ಟಿ ಮಾನವನಿಗಿಂತ 8 ಪಟ್ಟು ಸೂಕ್ಷ್ಮ. ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರುತಿಸಬಲ್ಲದು.
ಹದ್ದು ಹಾರುವ ಎತ್ತರಕ್ಕೆ ಕೊನೆಯೇ ಇಲ್ಲ. 12 ಕಿ.ಮೀ ಎತ್ತರಕ್ಕೂ ಹದ್ದು ತಲುಪಬಲ್ಲದು. ಅಲ್ಲದೇ ತಾಸಿಗೆ 60-80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮೀ ಸುತ್ತಳತೆಯಲ್ಲಿ ಗಸ್ತು ಹೊಡೆಯುತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ನೆಲಕ್ಕೆ ಇಳಿದು ಶವಗಳ ಮುಂದೆ ಪ್ರತ್ಯಕ್ಷವಾಗುತ್ತವೆ. ಎತ್ತರದ ಮರಗಳ ತುತ್ತತುದಿಯಲ್ಲಿ ಇವು ಗೂಡು ಕಟ್ಟುತ್ತದೆ. ಆದರೆ ಈ ದೊಡ್ಡ ಹದ್ದುಗಳ ಗೂಡು ಕಾಗೆ ಗೂಡಿನಷ್ಟೇ ಚಿಕ್ಕದು. ಹದ್ದು ಕೊಳೆತ ಪ್ರಾಣಿಗಳ ದೇಹವನ್ನು ತಿನ್ನುವುದರಿಂದ ಹರಡಬಹುದಾದ ರೋಗ-ರುಜಿನಗಳಿಂದ ಊರನ್ನು ರಕ್ಷಿಸುತ್ತಿದ್ದವು. ಪಾರ್ಸಿ ಜನಾಂಗದವರ ದೇಹ ತಿನ್ನಲೂ ರಣಹದ್ದುಗಳೇ ಬೇಕು. ಆದರೆ ಬೋಳು ತಲೆಯ ರಣಹದ್ದು ಕ್ರಮೇಣ ಅಳಿವಿನ ಅಂಚಿಗೆ ತಲುಪಿದೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಸಂಪೂರ್ಣ ಕಣ್ಮರೆಯಾದರೂ ಅಚ್ಚರಿಯಿಲ್ಲ.


