ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು

ಗಣೇಶ್ 

ನಾನು ನಾನಾಗಿ ಮತ್ತೊಬ್ಬರಿಗೆ ತೊಂದರೆ ಆಗದಂತೆ ಬದುಕುವುದೇ ನಿಜವಾದ ಸ್ವಾತಂತ್ರ್ಯ. ತುಂಬಾ ದೊಡ್ಡ ಮಟ್ಟದ ಬಲಿದಾನದಿಂದ ಬರುವ ಹಕ್ಕು ಇದು. ಇದನ್ನು ಚಲಾಯಿಸುವಾಗ
ನಮ್ಮಂತೆಯೇ ಮತ್ತೊಬ್ಬರು ಇಲ್ಲಿದ್ದಾರೆ. ಅವರಿಗೂ ಜೀವಿಸುವ ಹಕ್ಕು ಇದೆ ಎಂದುಕೊಂಡು ಮತ್ತೊಬ್ಬರ ಬದುಕನ್ನು ಗೌರವಿಸುತ್ತಲೇ ತಾನು ಬದುಕು ಕಟ್ಟಿಕೊಳ್ಳಬೇಕು. ಈ ದೇಶದ ಕಾನೂನು, ಸಂವಿಧಾನಕ್ಕೆ ಬದ್ಧನಾಗಿರಬೇಕು. ಸಾಮಾಜಿಕ ಮೌಲ್ಯಗಳಿಗೆ ಬೆಲೆ ಕೊಡುತ್ತಲೇ ನಮ್ಮವರ ತ್ಯಾಗ ಮತ್ತು ಬಲಿದಾನಗಳನ್ನು ಅರ್ಥ ಮಾಡಿಕೊಳ್ಳುವುದೇ ನನ್ನ ಪ್ರಕಾರ ನಿಜವಾದ ಸ್ವಾತಂತ್ರ್ಯ.

ಲಡಾಕ್‍‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಧೋನಿ ಧ್ವಜಾರೋಹಣ!

ಎಲ್ಲರಿಗೂ ನೆಮ್ಮದಿಯಾಗಿ ಬದುಕುವ ಹಕ್ಕು ನೀಡುವುದು

ಸತೀಶ್ ನೀನಾಸಂ

ಎಲ್ಲರಿಗೂ ಸಮಾನತೆ. ಮನುಷ್ಯರು ಮಾತ್ರವಲ್ಲ, ಪ್ರಾಣಿ- ಪಕ್ಷಿ, ಪ್ರಕೃತಿ ಹೀಗೆ ಪ್ರತಿಯೊಂದು ನೆಮ್ಮದಿಯಾಗಿರುವಂತಹ ಸಮಾಜವನ್ನು ನೋಡುವುದೇ ನನ್ನ ಪ್ರಕಾರ ಸ್ವಾತಂತ್ರ್ಯ. ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಕೆಲವೇ ಶ್ರೀಮಂತರಾಗುವುದು, ಬಹುತೇಕರು ಬಡವರಾಗಿ ಉಳಿಯುವುದು ಅದು ಸ್ವಾತಂತ್ರ್ಯವಲ್ಲ. ಮೂಲಭೂತ ಸೌಲಭ್ಯಗಳು ಕಟ್ಟ ಕಡೆಯ ಪ್ರಜೆಗೆ ದಕ್ಕಬೇಕು. ಅವನಿಗೂ ನೆಮ್ಮದಿಯಾಗಿ ಜೀವಿಸುವ ಹಕ್ಕು ಕೊಡಬೇಕು. ಇದು ನನ್ನ ಪ್ರಕಾರ ನಿಜವಾದ ಸ್ವಾತಂತ್ರ್ಯ ಎನ್ನಬಹುದು. ನನ್ನ ಪ್ರಕಾರ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ನೀಡಿರುವ ಸ್ವಾತಂತ್ರ್ಯ ಬೇರೆ ಎಲ್ಲೂ ನೋಡಕ್ಕೆ ಆಗಲ್ಲ. ನಮ್ಮ ದೇಶ ನಮಗೆ ಕೊಟ್ಟಿರುವ ಸ್ವಾತಂತ್ರ್ಯ ಎನ್ನುವ ಗೌರವವನ್ನು ನಾವು ಅಷ್ಟೇ ಪ್ರೀತಿಯಿಂದ ನಡೆಸಿಕೊಳ್ಳಬೇಕು. ಆ ಮೂಲಕ ನಿಜವಾದ ಫ್ರೀಡಮ್ ಅರ್ಥ ತಿಳಿಯಬೇಕಿದೆ.

ಹಳ್ಳಿಗಳ ಉದ್ಧಾರವೇ ನಿಜವಾದ ಸ್ವಾತಂತ್ರ್ಯ

ಸಂಚಾರಿ ವಿಜಯ್

ಸ್ವಾತಂತ್ರ್ಯ ಅಂದ್ರೆ ಹಳ್ಳಿಗಳ ಉದ್ಧಾರ. ಮಹಾತ್ಮ ಗಾಂಧೀಜಿ ಅವರೇ ಈ ಕನಸು ಕಂಡಿದ್ದರು. ಗ್ರಾಮ ಸ್ವರಾಜ್ಯ ಅವರದೇ ಕನಸಿನ ಕೂಸು. ಸ್ವಾತಂತ್ರ ಬಂದಾಗ ಅವರು  ಮೊದಲು ಆಗಬೇಕೆಂದುಕೊಂಡಿದ್ದು ಗ್ರಾಮಗಳ ಉದ್ಧಾರ. ನಂತರದ ದಿನಗಳಲ್ಲಿ ಅದೆಲ್ಲವನ್ನು ಬಿಟ್ಟು ಬೇರೆಲ್ಲ ಆಗಿದೆ. ನಾನಾ ಕಾರಣಗಳಿಂದ ಇವತ್ತು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಮಳೆ-ಬೆಳೆ ಇಲ್ಲದ ಅಲ್ಲಿನ ಜನರು ಉದ್ಯೋಗ ಅರಸಿ ಪಟ್ಟಣ ಸೇರುತ್ತಿದ್ದಾರೆ. ಅಲ್ಲಿ ಅವರ ಬದುಕು ಬೀದಿಪಾಲಾಗುತ್ತಿದೆ. ಅವರೆಲ್ಲ ಕಳೆದು ಹೋಗುತ್ತಿದ್ದಾರೆ. ಅವರ ಮಕ್ಕಳ ಭವಿಷ್ಯವೇ ನಾಶವಾಗುತ್ತಿದೆ. ಹಾಗಾಗಿ ಮೊದಲು ಹಳ್ಳಿಗಳ ಉದ್ಧಾರ ಆಗಬೇಕು. ಅದರ ಜತೆಗೆ ದೇಶ ಕಟ್ಟುವ ಕೆಲಸ ಆಗಬೇಕು.

ಸ್ವಾತಂತ್ರ್ಯ ದಿನಾಚರಣೆ; ಶುಭಕೋರಿದ ಟೀಂ ಇಂಡಿಯಾ!

ಭ್ರಮೆಗಳಿಂದ ಹೊರಬರುವುದು

ವಸಿಷ್ಟ ಸಿಂಹ

ನನ್ನ ಪ್ರಕಾರ ಸ್ವಾತಂತ್ರ್ಯ ಅಂದ್ರೆ ಅಜ್ಞಾನದಿಂದ ಬೆಳಕಿಗೆನೆಡೆಗೆ ಬರುವುದು. ಮೂಢನಂಬಿಕೆಗಳು ಹಾಗೂ ಭ್ರಮೆಗಳಿಂದ ಹೊರಬರುವುದು. ಇದರಿಂದ ನಾವು ಬಿಡುಗಡೆಗೊಂಡಾಗ ನಾವೆಲ್ಲ ನಿಜವಾದ ಸ್ವತಂತ್ರರು. ನಾವು ಏನೇ ಮಾಡಿದರೂ, ಇನ್ನೇನೋ ಹೇಳಿಕೊಂಡರೂ, ನಾವೆಲ್ಲ ಸಾಮಾಜಿಕ ಪಿಡುಗುಗಳ ಬಂಧನದಲ್ಲಿದ್ದೇವೆ. ನಮಗೆ ಗೊತ್ತಿಲ್ಲದೆ ನಮ್ಮನ್ನು ಇನ್ಯಾರೋ ನಿಯಂತ್ರಣ ಮಾಡುತ್ತಿರುತ್ತಾರೆ. ಮನೆಯಲ್ಲಿ ಮಕ್ಕಳನ್ನು ಕಂಟ್ರೋಲ್ ಮಾಡುವ ಹಾಗೆ ಒಬ್ಬ ನೌಕರನಿಗೆ ಆತನ ಮೇಲಾಧಿಕಾರಿ. ಆತನಿಗೆ ಮತ್ತೊಂದು ವ್ಯವಸ್ಥೆ ಕಂಟ್ರೋಲ್ ಮಾಡುತ್ತೆ. ಬ್ರಿಟಿಷರು ಬಿಟ್ಟು ಹೋದ ಶಿಕ್ಷಣ ಪದ್ಧತಿ ಬದಲಾಗದೆ ಹೋದರೆ, ಸ್ವಾತಂತ್ರ್ಯದ ನಿಜವಾದ ಅನುಭವ ನಮಗೆ ದಕ್ಕುವುದು ಕಷ್ಟ.

ನಮಗಿಷ್ಟ ಬಂದಂತೆ ಬದುಕುವುದು

ರಾಗಿಣಿ

ಸ್ವಾತಂತ್ರ್ಯ ಅಂದ್ರೆ ಪ್ರತಿಯೊಬ್ಬರು ತಮ್ಮ ಇಚ್ಛೆಗೆ ಅನುಸಾರ ಬದುಕುವುದು. ಹಾಗಂತ ಬೇಕಾಬಿಟ್ಟಿಯಾಗಿ ಬದುಕುವುದಲ್ಲ. ಸಾಮಾಜಿಕ ನೀತಿ, ನಿಯಮಗಳನುಸಾರ ಮತ್ತೊಬ್ಬರಿಗೆ ತೊಂದರೆ ಉಂಟು ಮಾಡದೆ ಬುದುಕಿ ನಿಜವಾದ ಅನುಭವ ಕಾಣುವುದು. ಹಾಗೆ ಬದುಕಿದರೆ ಅದು ಸ್ವಾತಂತ್ರ, ಬೇಕಾಬಿಟ್ಟಿಯಾಗಿ ಬದುಕಿದರೆ ಅದು ಸ್ವೇಚ್ಛೆ. ಗಂಡು-ಹೆಣ್ಣಿನ ನಡುವೆ ಯಾವುದೇ ಭೇದ-ಭಾವ ಇರಬಾರದು. ಮೇಲು-ಕೀಳು ಭಾವನೆಗಳು ಇರಬಾರದು. ಗಂಡಿಗೆ ಸಮನಾಂತರವಾಗಿ ಹೆಣ್ಣು ಕೂಡ ಬದುಕಿದಾಗ ಅದು ನಿಜವಾದ ಸ್ವಾತಂತ್ರ್ಯ. ಯಾಕಂದ್ರೆ ಅನಾದಿ ಕಾಲದಿಂದಲೂ ಹೆಣ್ಣನ್ನು ಎರಡನೇ ದರ್ಜೆಯ ವ್ಯಕ್ತಿಯಾಗಿ ನೋಡುತ್ತಾ ಬರಲಾಗಿದೆ. ಕಾಲಾಂತರದಲ್ಲಿ ಅದು ಬದಲಾಗಿದೆ. ಗಂಡಿನ ಹಾಗೆಯೇ ಇವತ್ತು ಹೆಣ್ಣು ಮಕ್ಕಳು ಕೂಡ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಧನೆ ತೋರುತ್ತಿದ್ದಾರೆ. ಆದರೂ ಅವರನ್ನು ಕೀಳಾಗಿ ಕಾಣುವ ಮೂಢನಂಬಿಕೆ, ಆಚರಣೆಗಳು ಇಂದಿಗೂ ಹೋಗಿಲ್ಲ. ಅವು ಹೋಗಬೇಕು. ಯುವಜನರು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಅಭಿವೃದ್ಧಿ ಜತೆಗೆ ದೇಶದ ಸಮಗ್ರ ಬೆಳವಣಿಗೆ ಸಾಧ್ಯ.