ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆಯ ಬಗ್ಗೆ ಕೆಲವರಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ 'ರಾಮಾಯಣ'ದ ಮೂಲ ಸೀತೆ ದೀಪಿಕಾ ಚಿಖಾಲಿಯಾ, ಸಾಯಿ ಪಲ್ಲವಿ ಅದ್ಭುತ ನಟಿ ಎಂದಿದ್ದು, ಸಿನಿಮಾ ಬಿಡುಗಡೆಯಾದ ನಂತರವೇ ಪ್ರೇಕ್ಷಕರು ಅವರ ಅಭಿನಯವನ್ನು ನಿರ್ಣಯಿಸುತ್ತಾರೆ ಎಂದಿದ್ದಾರೆ.
ಸಾಯಿ ಪಲ್ಲವಿ ಸಹಜ ಸುಂದರಿ. ಕೆ.ಜಿಗಟ್ಟಲೆ ಮೇಕಪ್ ಮಾಡಿಕೊಂಡು ದೇಹವನ್ನು ಪ್ರದರ್ಶಿಸುತ್ತಾ ತಾವೇ ಸುಂದರಿ ಎಂದು ಬೀಗುವವರ ನಡುವೆ, ನೈಸರ್ಗಿಕ ಸೌಂದರ್ಯದಿಂದ, ಡ್ರೆಸ್ನಲ್ಲಿಯೂ ಎಲ್ಲೆ ಮೀರದೇ ಇರುವ ನಟಿಯೆಂದೇ ಫೇಮಸ್ ಆಗಿ ಈ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿರುವ ನಟಿ ಸಾಯಿ ಪಲ್ಲವಿ ಕುರಿತು ಈಗ ಇನ್ನಿಲ್ಲದಂತೆ ಟೀಕೆಗಳು ಕೇಳಿಬರುತ್ತಿವೆ. ನಿಜವಾದ ಸೀತೆ ಹೇಗಿದ್ದಳು ಎಂದು ಯಾರಿಗೂ ತಿಳಿದಿಲ್ಲ. ಇದರ ಹೊರತಾಗಿಯೂ ಸಾಯಿ ಪಲ್ಲವಿಯ ಸಹಜ ಸೌಂದರ್ಯದ ಬಗ್ಗೆ ಕೊಂಕು ಮಾತನಾಡುವವರ ಪಟ್ಟಿ ಬೆಳೆಯುತ್ತಿದೆ. ಅವರ ಸರಳತೆ ಮತ್ತು ನಟನಾ ಸಾಮರ್ಥ್ಯವು ಅವರನ್ನು ಈ ಪಾತ್ರಕ್ಕೆ ಸೂಕ್ತ ಆಯ್ಕೆಯನ್ನಾಗಿಸಿದೆ ಎಂದು ಅನೇಕರು ಸಮರ್ಥಿಸಿಕೊಂಡಿದ್ದರೆ, ಮತ್ತೆ ಕೆಲವರು ನಮ್ಮ ಧರ್ಮಗ್ರಂಥಗಳಲ್ಲಿ ವರ್ಣಿಸಲಾಗಿರುವಂತೆ ತಾಯಿ ಸೀತೆಯ ಸೌಂದರ್ಯದ ಸ್ವರೂಪಕ್ಕೆ ಇವರು ಹೊಂದಿಕೆಯಾಗುವುದಿಲ್ಲ. ತಾಯಿ ಸೀತೆ ಸೌಂದರ್ಯದ ಸಾಕಾರಮೂರ್ತಿಯಾಗಿದ್ದರು. ಅದಕ್ಕಾಗಿಯೇ ಇವರು ಅಷ್ಟು ಸೂಟ್ ಆಗುವುದಿಲ್ಲ ಎಂದಿದ್ದಾರೆ.
ಸೀತೆಯಂತೆ ಕಂಡದ್ದರಿಂದ ನನ್ನನ್ನು ಆಯ್ಕೆ ಮಾಡಿದರು
ಇವೆಲ್ಲವುಗಳ ನಡುವೆಯೇ ಒರಿಜಿನಲ್ ಸೀತೆ ಎಂದೇ ಫೇಮಸ್ ಆಗಿರೋ ರಮಾನಂದ್ ಸಾಗರ್ ಅವರ ರಾಮಾಯಣದ ಸೀತೆ ದೀಪಿಕಾ ಚಿಖಾಲಿಯಾ ಅವರು ಮಾತನಾಡಿದ್ದಾರೆ. ತುಳಸಿದಾಸರ 'ರಾಮಾಯಣ'ದಲ್ಲಿ ಸೀತೆಯ ವಿವರಣೆಯು ಬಾದಾಮಿ ಕಣ್ಣುಗಳು, ನಿರ್ದಿಷ್ಟ ಎತ್ತರ, ಕೂದಲು ಮತ್ತು ಚರ್ಮವನ್ನು ಹೊಂದಿರುವ ಮಹಿಳೆಯದ್ದಾಗಿತ್ತು. ರಮಾನಂದ ಸಾಗರ್ ಅದನ್ನೇ ಹುಡುಕುತ್ತಿದ್ದರು, ಮತ್ತು ಅವರು ಅದನ್ನು ನನ್ನಲ್ಲಿ ನೋಡಿದರು. ಅದಕ್ಕಾಗಿಯೇ ಅವರು ನನ್ನನ್ನು ಆಯ್ಕೆ ಮಾಡಿದ್ದರು ಎಂದಿದ್ದಾರೆ. ಇದೇ ವೇಳೆ ಸಾಯಿ ಪಲ್ಲವಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವ ಅವರು, ಅವರೊಬ್ಬ ಅದ್ಭುತ ನಟಿ. ಆದರೆ ಚಿತ್ರ ಬಿಡುಗಡೆಯಾದ ನಂತರವೇ ಪ್ರೇಕ್ಷಕರು ಅಭಿನಯವನ್ನು ನಿರ್ಣಯಿಸಬಹುದು ಎಂದರು.
ನಾನೂ ಕಾಯುತ್ತಿದ್ದೇನೆ
ನಾನು ರಾಮಾಯಣ ಮಾಡಿದ ನಂತರ, ಸೀತೆ, ರಾಮ, ಲಕ್ಷ್ಮಣ ಹೀಗೆಯೇ ಇರಬೇಕು ಎಂದು ಜನರು ಅಂದುಕೊಂಡಿದ್ದಾರೆ. ಅದಕ್ಕಾಗಿಯೇ ಸಾಯಿ ಪಲ್ಲವಿ ಅವರ ಬಗ್ಗೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಸಿನಿಮಾ ರಿಲೀಸ್ ಆದ ಮೇಲೆ ಅವರನ್ನು ಜನ ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ. "ನಾನು ಅವರ ಕೆಲಸವನ್ನು ನೋಡಿದ್ದೇನೆ. ಅವರು ಅದ್ಭುತ ನಟಿ. ಆದರೆ ಅವರು ಸೀತೆಯಂತೆ ಹೇಗೆ ಕಾಣುತ್ತಾರೆಂದು ನನಗೆ ತಿಳಿದಿಲ್ಲ. ಒಮ್ಮೆ ನಾವು ಅವರನ್ನು ನೋಡಿದರೆ ನಮಗೆ ತಿಳಿಯುತ್ತದೆ. ಈ ಸಮಯದಲ್ಲಿ, ನನಗೆ ಯಾವುದೇ ಸುಳಿವು ಇಲ್ಲ. ಸಿನಿಮಾ ರಿಲೀಸ್ ಆದ ಮೇಲೆ ನೋಡಬೇಕು ಎಂದಿದ್ದಾರೆ.
ಸಾಯಿ ಪಲ್ಲವಿ ಅವರು ಪರದೆಯ ಮೇಲೆ ಪಾತ್ರವನ್ನು ಹೇಗೆ ಸಾಕಾರಗೊಳಿಸುತ್ತಾರೆ ಎಂಬುದನ್ನು ನೋಡಲು ಕಾಯುತ್ತಿದ್ದೇನೆ. ಮೊದಲಿಗೆ ಜನ ಹೇಗೆಲ್ಲಾ ಮಾತನಾಡಿದರೂ ಅವರ ನಟನೆಯ ನಂತರ ಚಿತ್ರ ಬಿಡುಗಡೆಯಾದ ನಂತರವೇ ಪ್ರೇಕ್ಷಕರು ಅವರ ಅಭಿನಯವನ್ನು ನಿರ್ಣಯಿಸಬಹುದು ಎಂದರು.


