'ಹಾಯ್ ನಾನ್ನ' ಖ್ಯಾತಿಯ ನಿರ್ದೇಶಕ ಶೌರ್ಯುವ್ ಜೊತೆ ನಟ ವಿಜಯ್ ದೇವರಕೊಂಡ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಇದೊಂದು ದೊಡ್ಡ ಮಟ್ಟದ, ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರವಾಗಲಿದೆ.

ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಶೌರ್ಯುವ್ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಹಿಂದೆಂದೂ ಕಾಣದ ಒಂದು ದೊಡ್ಡ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನೌನ್ಸ್‌ಮೆಂಟ್ ಪೋಸ್ಟರ್‌ನಲ್ಲಿ ವಿಜಯ್, ನಾಲ್ಕು ನಾಯಿಗಳನ್ನು ಮೆಟಲ್ ಚೈನ್‌ನಲ್ಲಿ ಹಿಡಿದು ಮುಂದೆ ನಡೆಯುತ್ತಿರುವುದನ್ನು ನೋಡಬಹುದು. ಅವರ ಹಿಂದೆ ಆರೇಳು ಜನರ ತಂಡವೂ ಇದೆ. ಇವರೆಲ್ಲಾ ಸಾಮಾನ್ಯರಲ್ಲ, ಬದಲಿಗೆ 'ಡ್ರೀಮ್ ಕಲೆಕ್ಟಿವ್' ಎಂಬ ತಂಡದ ಸದಸ್ಯರು.

ಈ ತಂಡದಲ್ಲಿ ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದಿರುವ ಕ್ರಿಯೇಟಿವ್ ಮತ್ತು ಟೆಕ್ನಿಕಲ್ ಎಕ್ಸ್‌ಪರ್ಟ್‌ಗಳಿದ್ದಾರೆ. ಸಿನಿಮಾದಲ್ಲಿ ಪ್ರತಿಯೊಬ್ಬರೂ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪೋಸ್ಟರ್ ಕೇವಲ ಒಂದು ಘೋಷಣೆಯಲ್ಲ, ಬದಲಿಗೆ ಅದ್ಭುತ ಪ್ರತಿಭೆಗಳು ಒಟ್ಟಿಗೆ ಸೇರಿದಾಗ ಮಾತ್ರ ಸಾಧ್ಯವಾಗುವ ಒಂದು ದೊಡ್ಡ ಸಿನಿಮಾ ಅನುಭವದ ಮುನ್ಸೂಚನೆ ನೀಡುತ್ತಿದೆ. ಚಿತ್ರತಂಡ 'ಇಟ್ಸ್ ಎ ರೋರ್' (ಅದೊಂದು ಘರ್ಜನೆ) ಎಂಬ ಥೀಮ್ ಸಾಂಗ್ ಕೂಡ ಬಿಡುಗಡೆ ಮಾಡಿದೆ.

ಈ ಹಾಡು ಜೀವನದ ಸವಾಲುಗಳನ್ನು ಎದುರಿಸುವ ಮನುಷ್ಯನ ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ತೋರಿಸುತ್ತದೆ. ನೋವು, ಸೋಲು ಎದುರಾದರೂ ಹಿಂಜರಿಯದೆ ಮುನ್ನುಗ್ಗುವುದೇ ನಿಜವಾದ ಶಕ್ತಿ ಎಂದು ಈ ಹಾಡು ಹೇಳುತ್ತದೆ. ಯಾವುದೇ ಪ್ರಚಾರ ಅಥವಾ ಮನ್ನಣೆ ಇಲ್ಲದಿದ್ದರೂ, ಛಲ ಬಿಡದೆ ಮುಂದುವರಿಯುವುದೇ ಪ್ರತಿಯೊಬ್ಬರ ನಿಜವಾದ ಘರ್ಜನೆ. ಈ ಚಿತ್ರದ ಮತ್ತೊಂದು ದೊಡ್ಡ ವಿಶೇಷತೆ ಅಂದ್ರೆ, ಇದರ ವರ್ಲ್ಡ್ ಕ್ಲಾಸ್ ತಾಂತ್ರಿಕ ಬಳಗ.

'ಹೌಸ್ ಆಫ್ ದಿ ಡ್ರ್ಯಾಗನ್', 'ಫಾಲ್ ಔಟ್' ನಂತಹ ಅಂತರಾಷ್ಟ್ರೀಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ ಅಲೆಕ್ಸಾಂಡ್ರೋ ಮಾರ್ಟಿನೆಜ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. 'ಅನಿಮಲ್', 'ಓಂ ಶಾಂತಿ ಓಂ' ಚಿತ್ರಗಳಲ್ಲಿ ಅದ್ಭುತ ಲೋಕ ಸೃಷ್ಟಿಸಿದ್ದ ಸುರೇಶ್ ಸೆಲ್ವರಾಜ್ ಆರ್ಟ್ ಡೈರೆಕ್ಟರ್ ಆಗಿದ್ದಾರೆ. 'ಗಾಡ್ಸ್ ಆಫ್ ಈಜಿಪ್ಟ್', 'ಬ್ಯಾಟ್ಮ್ಯಾನ್ ಫಾರೆವರ್', 'ಸ್ನೋ ಪಿಯರ್ಸರ್' ನಂತಹ ಚಿತ್ರಗಳಿಗೆ ಕೆಲಸ ಮಾಡಿದ ಎರಿಕ್ ಡರ್ಸ್ಟ್ ವಿಷ್ಯುವಲ್ ಎಫೆಕ್ಟ್ಸ್ ನೋಡಿಕೊಳ್ಳಲಿದ್ದಾರೆ.

ಕನ್ನಡಿಗರಿಗೂ ಚಿರಪರಿಚಿತರಾಗಿರುವ, ಮಲಯಾಳಿ ಸಂಗೀತ ನಿರ್ದೇಶಕ ಹಿಶಾಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರವೀಣ್ ಆಂಟನಿ ಎಡಿಟಿಂಗ್ ಮತ್ತು ಸಚಿನ್ ಲೋವಲೇಕರ್ ವಸ್ತ್ರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಪ್ರತೀಶ್ ಶೇಖರ್ ಅವರು ಚಿತ್ರದ ಪಿಆರ್‌ಒ ಆಗಿದ್ದಾರೆ. ಈ ಸಿನಿಮಾವನ್ನು ಒಂದು ಪರ್ಯಾಯ ಪೌರಾಣಿಕ ಜಗತ್ತಿನಲ್ಲಿ ಸೆಟ್ ಮಾಡಲಾಗಿದೆ. ಇದು ಪ್ರಾಚೀನತೆಯ ಸ್ಪರ್ಶ ಹೊಂದಿದ್ದರೂ, ಸಂಪೂರ್ಣವಾಗಿ ಕಾಲ್ಪನಿಕವಾಗಿರುವ ಒಂದು ಲೋಕ. ಹೀಗಾಗಿ, ಪ್ರೇಕ್ಷಕರಿಗೆ ಪರಿಚಿತ ಎನಿಸಿದರೂ, ಸಂಪೂರ್ಣ ಹೊಸತನದಿಂದ ಕೂಡಿರುವ ಸಿನಿಮಾ ಅನುಭವ ಸಿಗಲಿದೆ.

ಮತ್ತೊಂದು ದೊಡ್ಡ ಮೈಲಿಗಲ್ಲು

ವಿಜಯ್ ದೇವರಕೊಂಡ ತಮ್ಮ ಪ್ರತಿ ಸಿನಿಮಾದಲ್ಲೂ ಹೊಸತನವನ್ನು ತರಲು ಪ್ರಯತ್ನಿಸುವ ಮತ್ತು ಸವಾಲುಗಳನ್ನು ಸ್ವೀಕರಿಸುವ ನಟ. ಈ ಚಿತ್ರ ಅವರ ವೃತ್ತಿಜೀವನದಲ್ಲಿ ಮತ್ತೊಂದು ದೊಡ್ಡ ಮೈಲಿಗಲ್ಲಾಗುವ ನಿರೀಕ್ಷೆಯಿದೆ. ತಮ್ಮ ಮೊದಲ ಸಿನಿಮಾ 'ಹಾಯ್ ನಾನ್ನ' ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಿರ್ದೇಶಕ ಶೌರ್ಯುವ್, ಈಗ ಮತ್ತಷ್ಟು ದೊಡ್ಡ ಮತ್ತು ಆಳವಾದ ಕಥೆಯೊಂದಿಗೆ ಬರುತ್ತಿದ್ದಾರೆ. ಹಿಂದಿನ ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾಗಿರುವ ಈ ಪ್ರಾಜೆಕ್ಟ್, ಗಡಿಗಳನ್ನು ಮೀರಿದ ಕಥೆ ಹೇಳುವ ಅವರ ಆಸಕ್ತಿಯನ್ನು ತೋರಿಸುತ್ತದೆ.

ಅನೌನ್ಸ್‌ಮೆಂಟ್ ಪೋಸ್ಟರ್ ಈ ಚಿತ್ರದ ಸ್ವರೂಪ ಮತ್ತು ವ್ಯಾಪ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಮುಂದೆ ವಿಜಯ್ ದೇವರಕೊಂಡ ಮತ್ತು ಶೌರ್ಯುವ್ ಇದ್ದರೆ, ಅವರ ಹಿಂದೆ ತಮ್ಮ ಕಲೆಯ ಯೋಧರಂತೆ ಒಂದು ಬಲಿಷ್ಠ ತಂಡ ನಿಂತಿದೆ. ಪ್ರಪಂಚದ ವಿವಿಧ ಭಾಗಗಳ ಪ್ರತಿಭೆಗಳು ಒಂದಾಗಿರುವ ಈ ಚಿತ್ರ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಗುರಿ ಹೊಂದಿದೆ. ಎಲ್ಲಾ ರೀತಿಯಲ್ಲೂ ಇದೊಂದು ದೊಡ್ಡ ಪ್ರಯತ್ನ, ಅಕ್ಷರಶಃ 'ಬಿಗ್ ಬ್ಯಾಂಗರ್' ಅನುಭವ ನೀಡಲಿದೆ.