ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳ ಜೊತೆಗೆ, ದೊಡ್ಡ ಮಟ್ಟದಲ್ಲಿ ಶುರುವಾಗಿ ಅರ್ಧಕ್ಕೆ ನಿಂತುಹೋದ ಚಿತ್ರಗಳೂ ಇವೆ. ಆ ಎರಡು ಸಿನಿಮಾಗಳು ಯಾವುವು? ಅವು ನಿಲ್ಲಲು ಕಾರಣವೇನು?

ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳ ಜೊತೆಗೆ, ದೊಡ್ಡ ಮಟ್ಟದಲ್ಲಿ ಶುರುವಾಗಿ ಅರ್ಧಕ್ಕೆ ನಿಂತುಹೋದ ಚಿತ್ರಗಳೂ ಇವೆ. ಆ ಎರಡು ಸಿನಿಮಾಗಳು ಯಾವುವು? ಅವು ನಿಲ್ಲಲು ಕಾರಣವೇನು? ಒಂದು ವೇಳೆ ಆ ಚಿತ್ರಗಳು ತೆರೆಕಂಡಿದ್ದರೆ ವಿಜಯ್ ಭವಿಷ್ಯ ಹೇಗಿರುತ್ತಿತ್ತು? ಟಾಲಿವುಡ್‌ನ ರೌಡಿ ಹೀರೋ ವಿಜಯ್ ದೇವರಕೊಂಡ, ಒಂದು ಭರ್ಜರಿ ಹಿಟ್‌ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. 'ಅರ್ಜುನ್ ರೆಡ್ಡಿ', 'ಗೀತ ಗೋವಿಂದಂ' ನಂತರ ಆ ಮಟ್ಟದ ಯಶಸ್ಸು ಅವರಿಗೆ ಸಿಕ್ಕಿಲ್ಲ.

ಆದರೆ ಅವರ ಇಮೇಜ್ ಮಾತ್ರ ಕಡಿಮೆಯಾಗಿಲ್ಲ. ಅವರ ಕೆರಿಯರ್‌ನಲ್ಲಿ ನಿಂತುಹೋದ ಎರಡು ದೊಡ್ಡ ಸಿನಿಮಾಗಳೇ 'ಹೀರೋ' ಮತ್ತು 'ಜನ ಗಣ ಮನ' (JGM). 2019ರಲ್ಲಿ 'ಡಿಯರ್ ಕಾಮ್ರೇಡ್' ಬಿಡುಗಡೆಯಾದ ನಂತರ, ವಿಜಯ್ ದೇವರಕೊಂಡ ಮತ್ತು ಮಾಳವಿಕಾ ಮೋಹನನ್ ಜೋಡಿಯಾಗಿ 'ಹೀರೋ' ಸಿನಿಮಾ ಘೋಷಣೆಯಾಯಿತು. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ, ಹೊಸ ನಿರ್ದೇಶಕ ಆನಂದ್ ಅಣ್ಣಾಮಲೈ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರು.

ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಚಾಲನೆ ನೀಡಿದ್ದರು. ಬೈಕ್ ರೇಸಿಂಗ್ ಕಥಾಹಂದರ ಹೊಂದಿದ್ದ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ ಶಾಲಿನಿ ಪಾಂಡೆ ಎರಡನೇ ನಾಯಕಿಯಾಗಿದ್ದರು. ಸುಮಾರು 50 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ವಿಜಯ್ ದೇವರಕೊಂಡ ಮತ್ತು ಮಾಳವಿಕಾ ಮೋಹನನ್ ನಟನೆಯ 'ಹೀರೋ' ಸಿನಿಮಾದ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿದಿತ್ತು. ಆದರೆ, 50 ಕೋಟಿ ಬಜೆಟ್‌ನ ಈ ಸಿನಿಮಾದ ಮೊದಲ ಶೆಡ್ಯೂಲ್‌ಗೇ ಸುಮಾರು 6 ಕೋಟಿ ರೂಪಾಯಿ ಖರ್ಚಾಗಿತ್ತು.

ಬಂದ ಔಟ್‌ಪುಟ್ ಬಗ್ಗೆ ನಟ ವಿಜಯ್ ದೇವರಕೊಂಡ ಹಾಗೂ ನಿರ್ಮಾಪಕರಿಬ್ಬರಿಗೂ ಸಮಾಧಾನವಿರಲಿಲ್ಲ. ನಂತರ ಸ್ಕ್ರಿಪ್ಟ್‌ನಲ್ಲಿ ಬದಲಾವಣೆ ಮಾಡಿದರೂ, ಆ ವರ್ಷನ್ ಕೂಡ ವಿಜಯ್‌ಗೆ ಇಷ್ಟವಾಗಲಿಲ್ಲ. ನಿರ್ದೇಶಕರನ್ನು ಬದಲಿಸಿ ಸಿನಿಮಾ ಮುಂದುವರಿಸಲು ನಿರ್ಮಾಪಕರು ಯೋಚಿಸಿದರೂ, ಆ ಪ್ರಯತ್ನ ಫಲಿಸಲಿಲ್ಲ. ಹೀಗಾಗಿ, ಮೊದಲ ಶೆಡ್ಯೂಲ್‌ನಲ್ಲೇ ಈ ಸಿನಿಮಾ ಸಂಪೂರ್ಣವಾಗಿ ನಿಂತುಹೋಯಿತು. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ, ವಿಜಯ್ ದೇವರಕೊಂಡ ನಾಯಕನಾಗಿ 'ಲೈಗರ್' ಸಿನಿಮಾ ಭಾರೀ ನಿರೀಕ್ಷೆಯೊಂದಿಗೆ ತೆರೆಕಂಡಿತ್ತು. ಆದರೆ ಈ ಸಿನಿಮಾ ಹೀನಾಯವಾಗಿ ಸೋತಿತು.

'ಲೈಗರ್' ತಯಾರಿಕೆಯ ಸಮಯದಲ್ಲಿಯೇ ಪೂರಿ ಜಗನ್ನಾಥ್ 'ಜನ ಗಣ ಮನ' (JGM) ಎಂಬ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಘೋಷಿಸಿದ್ದರು. ಈ ಹಿಂದೆ ಇದೇ ಸಿನಿಮಾವನ್ನು ಮಹೇಶ್ ಬಾಬು ಜೊತೆ ಮಾಡಲು ಪೂರಿ ಪ್ರಯತ್ನಿಸಿದ್ದರು. ಪೂರಿಯವರ ಡ್ರೀಮ್ ಪ್ರಾಜೆಕ್ಟ್ ಎನ್ನಲಾದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಮುಂಬೈನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮೂಲಕ, ಆರ್ಮರ್ಡ್ ಆರ್ಮಿ ಲುಕ್‌ನಲ್ಲಿ ವಿಜಯ್ ದೇವರಕೊಂಡರನ್ನು ಪರಿಚಯಿಸಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಈ ಚಿತ್ರವನ್ನು ಅದ್ದೂರಿಯಾಗಿ ಪ್ರಾರಂಭಿಸಿದ್ದರು. ದೇಶಭಕ್ತಿಯ ಸೈನಿಕ ಕಾರ್ಯಾಚರಣೆಯ ಕಥೆಯುಳ್ಳ ಈ ಚಿತ್ರವನ್ನು 100 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಸುದ್ದಿ ಇತ್ತು.

ಕೆರಿಯರ್ ಬೇರೆಯೇ ಇರುತ್ತಿತ್ತು

ಆದರೆ, ವಿಜಯ್-ಪೂರಿ ಕಾಂಬಿನೇಷನ್‌ನ 'ಲೈಗರ್' (2022) ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತು. 'ಲೈಗರ್' ಸೋಲಿನ ಪರಿಣಾಮ 'ಜನ ಗಣ ಮನ' ಚಿತ್ರದ ಬಜೆಟ್ ಮತ್ತು ಮಾರುಕಟ್ಟೆ ಲೆಕ್ಕಾಚಾರಗಳನ್ನು ಬದಲಾಯಿಸಿತು. ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ನಿರ್ಮಾಪಕರು ಮತ್ತು ವಿಜಯ್, ಪರಸ್ಪರ ಒಪ್ಪಿಗೆಯೊಂದಿಗೆ ಈ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ನಿಲ್ಲಿಸಲು ನಿರ್ಧರಿಸಿದರು. 'ಹೀರೋ' ಅಥವಾ 'ಜನ ಗಣ ಮನ' ಹಿಟ್ ಆಗಿದ್ದರೆ ವಿಜಯ್ ಕೆರಿಯರ್ ಬೇರೆಯೇ ಇರುತ್ತಿತ್ತು ಎನ್ನುವುದು ಅಭಿಮಾನಿಗಳ ಮಾತು. ಸದ್ಯ ವಿಜಯ್ 'ರಣಬಲಿ' ಎಂಬ ಹೊಸ ಕಾನ್ಸೆಪ್ಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.