Asianet Suvarna News Asianet Suvarna News

ಒನಕೆ ಓಬವ್ವನ ಪಾತ್ರ ಮಾಡಲ್ಲ ಅಂದಿದ್ರು ಕಲ್ಪನಾ!

ಕನ್ನಡದ ಹಳೇ ಚಿತ್ರಗಳು ಹೊಸ ಬಣ್ಣ, ಹೊಸ ರೂಪ ಪಡೆದಿದ್ದು ಇದೇ ಮೊದಲಲ್ಲ. ಡಾ. ರಾಜ್ ಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’, ‘ಬಬ್ರುವಾಹನ’ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬಂದಿವೆ. ಈಗ ಈಶ್ವರಿ ಪ್ರೊಡಕ್ಷನ್ ಇದೇ ಮೊದಲು ‘ನಾಗರಹಾವು ’ಚಿತ್ರವನ್ನು ಹೊಸ ರೂಪದಲ್ಲಿ ತರುತ್ತಿದೆ. ರವಿಚಂದ್ರನ್ ಮಾರ್ಗದರ್ಶನದಲ್ಲಿ ನಟ ಬಾಲಾಜಿ ಇದರ ಜವಾಬ್ದಾರಿ ತೆಗೆದುಕೊಂಡು ಹೊಸ ರೂಪದಲ್ಲಿ ತರುತ್ತಿದ್ದಾರೆ. 

Veteran actress Kalpana Reject to act Onake Obavva role

ಅದು 45 ವರ್ಷದ ಹಿಂದಿನ ಮಾತು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್, ತರಾಸು ಕಾದಂಬರಿ ಆಧರಿಸಿ ‘ನಾಗರಹಾವು’ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದರು. ಪಾತ್ರವರ್ಗಕ್ಕೆ ಬಹುತೇಕ ಹೊಸಬರೇ ಬೇಕು ಅನ್ನೋದು ಅವರ ಆಲೋಚನೆ.

ಹಳಬರೂ ಅವರ ಮನಸ್ಸಲ್ಲಿದ್ದರು. ವಿಷ್ಣುವರ್ಧನ್, ಅಂಬರೀಷ್, ಅಶ್ವತ್ಥ್, ಲೀಲಾವತಿ ಮತ್ತಿತರರನ್ನು ಆಗಲೇ ಆಯ್ಕೆ ಮಾಡಿಕೊಂಡಾಗಿತ್ತು. ಒನಕೆ ಓಬವ್ವಳ ಪಾತ್ರಕ್ಕೆ ಯಾರು? ಸೂಕ್ತ ನಟಿಯ ಹುಡುಕಾಟದಲ್ಲಿದ್ದರು ಪುಟ್ಟಣ್ಣ. ಅಷ್ಟೊತ್ತಿಗಾಗಲೇ ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ಕಲ್ಪನಾ ಅವರದ್ದು ದೊಡ್ಡ ಹೆಸರು. ಅವರನ್ನೇ ಆಯ್ಕೆ ಮಾಡಿಕೊಂಡ್ರೆ ಹೇಗೆ? ಪುಟ್ಟಣ್ಣ ಅವರನ್ನು ಕಾಡುತ್ತಿದ್ದ ಪ್ರಶ್ನೆ  ಅದು. ಓಬವ್ವಳ ಪಾತ್ರಕ್ಕೆ ಕಲ್ಪನಾ ಅವರನ್ನೇ ಕರೆತಂದ್ರೆ ಸಿನಿಮಾಕ್ಕೂ ಒಂದು ಮೆರುಗು ಬರುತ್ತೆ, ಆ ಪಾತ್ರಕ್ಕೂ  ನ್ಯಾಯ ಸಿಕ್ಕುತ್ತೆ ಎನ್ನುವ ಲೆಕ್ಕಚಾರ ಅವರದ್ದಾಗಿತ್ತು.

ಅಂದುಕೊಂಡಂತೆ ಕಲ್ಪನಾ ಅವರ ಭೇಟಿಗೂ ದಿನ ಫಿಕ್ಸ್ ಆಯಿತು. ದಿನ ನಿಗದಿಯಾದಂತೆ ಒಂದು ದಿನ ಕಲ್ಪನಾ ಮನೆ ಬಾಗಿಲಿಗೆ ಹೋಗಿ ನಿಂತಿದ್ದರು ಪುಟ್ಟಣ್ಣ ಕಣಗಾಲ್. ಸಿಕ್ಕಾಪಟ್ಟೆ ಬ್ಯುಸಿಯಿದ್ದ ನಟಿ, ಆ ವೇಳೆ ಯಾವುದೋ ಪ್ರವಾಸದ ಅವಸರದಲ್ಲಿದ್ದರಂತೆ ಕಲ್ಪನಾ. ‘ಎರಡೇ ನಿಮಿಷ ಮಾತನಾಡೋದಿದೆ, ನಾನು ನಿರ್ದೇಶಿಸುತ್ತಿರುವ ‘ನಾಗರಹಾವು’ ಚಿತ್ರದಲ್ಲಿನ ಒನಕೆ ಓಬವ್ವ ಪಾತ್ರದಲ್ಲಿ ನೀವು ಅಭಿನಯಿಸುತ್ತೀರಾ?’ ಅಂದ್ರಂತೆ ಪುಟ್ಟಣ್ಣ .

ಆ ಮಾತು ಕೇಳಿದಾಕ್ಷಣವೇ ದಿಟ್ಟಿಸಿ ನೋಡಿದ ಕಲ್ಪನಾ, ‘ಅಂತಹ ತುಕಡಾ ಕ್ಯಾರೆಕ್ಟರ್, ನಾನು ಮಾಡೋದಿಲ್ಲ’ ಅಂತ ಕಡ್ಡಿ  ತುಂಡಾಗುವ ಹಾಗೆ ಹೇಳಿದ್ರಂತೆ ಕಲ್ಪನಾ. ಮರು ಮಾತನಾಡದೆ ವಾಪಸ್ ಬಂದಿದ್ದ ಪುಟ್ಟಣ್ಣ, ಮರುದಿನವೇ ಅಲ್ಲಿಂದ ಸೀದಾ ಹೋಗಿ ನಿಂತಿದ್ದು ಅಭಿನಯ ಶಾರದೆ ಜಯಂತಿ ಮನೆ ಬಾಗಿಲಿಗೆ. ಆ ವೇಳೆಗಾಗಲೇ ಜಯಂತಿ ಬಹು ಬೇಡಿಕೆಯ ನಟಿ. ಪುಟ್ಟಣ್ಣ ಬಂದಿದ್ದನ್ನು ಕಂಡು, ಅಚ್ಚರಿ ಪಟ್ಟರಂತೆ.

ಜಯಂತಿ ಕೂಡ ಒಪ್ಪುತ್ತಾರೋ ಇಲ್ಲವೋ ಎನ್ನುವ ಅನುಮಾನದಲ್ಲಿದ್ದ ಪುಟ್ಟಣ್ಣ, ಹೋಗಿದ್ದ ವಿಷಯ ಹೇಳಿದ್ರಂತೆ. ‘ಸಣ್ಣ ಪಾತ್ರ, ಆದ್ರೂ ನೀವು ಮಾಡಿದ್ರೆ ಚೆನ್ನಾಗಿರುತ್ತೆ’ ಅಂತ. ‘ಪಾತ್ರ ಎಷ್ಟಿರುತ್ತೋ, ಹೇಗಿರುತ್ತೋ, ನಿಮ್ಮ ಸಿನಿಮಾದಲ್ಲಿ ನಾನು ಅಭಿನಯಿಸುತ್ತೇನೆ’ ಎಂದು ಒಂದೇ ಉಸಿರಲ್ಲಿ ಓಕೆ ಹೇಳಿದರು ಜಯಂತಿ. ಮುಂದಿನದು ಇತಿಹಾಸ! - ಈ ಕತೆಯನ್ನು ಹೀಗೆ ಹೇಳಿಕೊಂಡಿದ್ದು ಬೇರಾರೂ ಅಲ್ಲ ಖುದ್ದು ಜಯಂತಿಯವರೇ.

ಸಂದರ್ಭ: ‘ನಾಗರಹಾವು’ ಚಿತ್ರದ ರೀ-ರಿಲೀಸ್ ಕಾರ್ಯಕ್ರಮ. ಈಶ್ವರಿ ಪ್ರೊಡಕ್ಷನ್ ‘ನಾಗರಹಾವು’ ಚಿತ್ರಕ್ಕೆ ಹೊಸ ರೂಪಕೊಟ್ಟು ಮತ್ತೆ ತೆರೆಗೆ ತರಲು ಸಿದ್ಧತೆ ನಡೆಸಿದೆ. ಜುಲೈ 20 ರಂದು ಚಿತ್ರ ಮರುಬಿಡುಗಡೆ. ಕ್ರೇಜಿಸ್ಟಾರ್ ರವಿಚಂದ್ರನ್  ಸಹೋದರ ಬಾಲಾಜಿ , ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಅದಕ್ಕೆ ಹೊಸರೂಪ ಕೊಟ್ಟಿದ್ದಾರೆ. ೭.೧ ಸೌಂಡ್ ಎಫೆಕ್ಟ್ ಜತೆಗೆ ಇಡೀ ಚಿತ್ರಕ್ಕೆ ಹೊಸ ಬಣ್ಣ ತೊಡಿಸಿದ್ದಾರೆ. ಅದರ ರೀ-ರಿಲೀಸ್ ಹಿನ್ನೆಲೆಯಲ್ಲಿ ಬೆಂಗಳೂರಿನ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ಹಿರಿಯ ನಟ-ನಟಿಯರ ಸಮ್ಮುಖದೊಂದಿಗೆ ಮಾಧ್ಯಮದ ಮುಂದೆ ಬಂದಿದ್ದರು ಈಶ್ವರಿ ಸಂಸ್ಥೆಯ ರೂವಾರಿಗಳಾದ ರವಿಚಂದ್ರನ್ ಹಾಗೂ ಬಾಲಾಜಿ.

ಅಂಬರೀಷ್, ಲೋಕನಾಥ್, ಶಿವರಾಮ್ ಜತೆಗೆ ಅಭಿನಯ ಶಾರದೆ ಜಯಂತಿ, ಲೀಲಾವತಿ, ಭಾರತಿ ವಿಷ್ಣುವರ್ದನ್ ಹಾಜರಿದ್ದರು. ಅವರೊಂದಿಗೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪತ್ನಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಕೂಡ ಬಂದಿದ್ದರು. ಈ ಸಂದರ್ಭದಲ್ಲಿ ಹಳೇ ನೆನಪುಗಳನ್ನು ಮೆಲುಕು ಹಾಕಿದರು ಹಿರಿಯ ನಟ-ನಟಿಯರು. ಭಾರತಿ ವಿಷ್ಣುವರ್ದನ್, ‘ಯಜಮಾನ್ರು ಎಲ್ಲಿಗೂ ಹೋಗಿಲ್ಲ, ಇಲ್ಲೇ ಇದ್ದಾರೆ’ ಅಂತ ವಿಷ್ಣುವರ್ಧನ್ ಅವರನ್ನುನೆನಪಿಸಿಕೊಂಡು ಭಾವುಕರಾದರು.

ನಂತರ ಮಾತಿನ ಸರದಿ ಜಲೀಲ್ ಖ್ಯಾತಿಯ ಅಂಬರೀಷ್ ಅವರದ್ದು. ‘ನಾಗರಹಾವು ಅಂದಾಕ್ಷಣ ಏನೆಲ್ಲ ನೆನಪಾಗುತ್ತವೆ. ಚಿತ್ರದುರ್ಗದ ಸೊಬಗನ್ನು ಹೆಚ್ಚಿಸಿದ ಸಿನಿಮಾ ಅದು.ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಸ್ಲೊ ಮೋಷನ್ ದೃಶ್ಯಗಳನ್ನು ಪರಿಚಯಿಸಿದ ಖಾತಿ ಅದರದ್ದು’ ಎನ್ನುತ್ತಲೇ ಪುಟ್ಟಣ್ಣ ಕಣಗಾಲ್ ಅವರ ಪ್ರೀತಿಯ ನಟನಾಗಿದ್ದರ ನೆನಪುಗಳನ್ನು ತೆರೆದಿಟ್ಟರು. ಆನಂತರ ಶಿವರಾಮ್, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ‘ಈಶ್ವರಿ ಸಂಸ್ಥೆ ಮತ್ತಷ್ಟು ಸಿನಿಮಾಗಳನ್ನು ಕನ್ನಡಕ್ಕೆ ನೀಡಲಿ’ ಎಂದು ಶುಭ ಹಾರೈಸಿದರು.

ರವಿಚಂದ್ರನ್ ಪುತ್ರರಾದ ಮನೋರಂಜನ್ ಹಾಗೂ ವಿಕ್ರಂ ಕೂಡ ವೇದಿಕೆಯಲ್ಲಿದ್ದು ಗಣ್ಯರನ್ನು ಸ್ವಾಗತಿಸಿದರು. ಒಂದೆಡೆ ನಾಗರಹಾವು ಚಿತ್ರದ ರಿಲೀಸ್, ಅದರ ಜತೆಗೆ ಈಶ್ವರಿ ಸಂಸ್ಥೆಯ 50 ವರ್ಷದ ನೆನಪು ಎರಡು ಸೇರಿಕೊಂಡು ಇಡೀ ಸಭೆ ಅರ್ಥಪೂರ್ಣವಾಗುವಂತೆ ಮಾಡಿತು. 

 

Follow Us:
Download App:
  • android
  • ios