ಉಪೇಂದ್ರ ಹಾಗೂ ಸುದೀಪ್‌ ಒಂದೇ ವೇದಿಕೆಯಲ್ಲಿ ಕಂಡಿದ್ದು ಆರ್‌ ಚಂದ್ರು ನಿರ್ದೇಶಿಸಿ, ನಿರ್ಮಿಸಿದ ‘ಐಲವ್‌ಯು’ ಚಿತ್ರದ ಟ್ರೇಲರ್‌ ಹಾಗೂ ಹಾಡಿನ ಪ್ರದರ್ಶನದ ಸಂಭ್ರಮದಲ್ಲಿ. ಉಪೇಂದ್ರ, ರಚಿತಾ ರಾಮ್‌, ಸೋನು ಗೌಡ ಜೋಡಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಜೂನ್‌ 14ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್‌ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದರು.

ಸುದೀಪ್‌ ಹೇಳಿದ್ದು

- ಟ್ರೇಲರ್‌ ತುಂಬಾ ರಿಚ್ಚಾಗಿದೆ. ಇಡೀ ಸಿನಿಮಾ ಇಷ್ಟೇ ಅದ್ದೂರಿಯಾಗಿರುತ್ತದೆ ಎಂದುಕೊಳ್ಳುತ್ತೇನೆ. ಉಪೇಂದ್ರ ಅವರು ಈ ಚಿತ್ರದಲ್ಲಿ ಡ್ಯಾನ್ಸ್‌ ಮಾಡಿದ್ದಾರೆ ಅಂತ ಹಾಡು ನೋಡಿ ಗೊತ್ತಾಯಿತು. ಅವರ ಡ್ಯಾನ್ಸ್‌ ನೋಡಿದ ಮೇಲೆ ನಾನು ಡ್ಯಾನ್ಸ್‌ ಕಲಿಯಬೇಕು ಅಂತ ಅನಿಸುತ್ತಿದೆ. ಟ್ರೇಲರ್‌ ಹಾಗೆ ಸುಮ್ಮನೆ ನೋಡುತ್ತಿದ್ದಾಗೆ ಒಂದು ಸಣ್ಣ ಟ್ವಿಸ್ಟ್‌ ಬಂತು. ರೆಗ್ಯುಲರ್‌ ಆಗಿ ಹೋಗುತ್ತಿದ್ದಾಗ ಮದುವೆಯಾದ ಗೃಹಿಣಿ ಪಾತ್ರದಲ್ಲಿ ಸೋನು ಗೌಡ, ಒಂದು ಮಗುವಿನ ಪಾತ್ರ ಕಂಡಾಗ ನನಗೆ ಅಚ್ಚರಿ ಆಯಿತು. ಚಿತ್ರದಲ್ಲಿ ಬೇರೆ ಏನೋ ಹೇಳುತ್ತಿದ್ದಾರೆ. ರೆಗ್ಯುಲರ್‌ ಸಿನಿಮಾದಲ್ಲಿ ಹೊಸ ರೀತಿಯ ಕತೆಯನ್ನು ನಿರ್ದೇಶಕರು ಹೇಳಿದ್ದಾರೆ ಅನಿಸುತ್ತಿದೆ. ಹೀಗಾಗಿ ನಾನೂ ಈ ಚಿತ್ರದ ಬಗ್ಗೆ ಕುತೂಹಲದಿಂದ ಕಾಯುತ್ತಿರುವೆ.

ಸೋನು ಗೌಡಗೆ 'ಐ ಲವ್ ಯೂ' ಅಂದ ಉಪ್ಪಿ ಫ್ಯಾನ್ಸ್!

- ಉಪೇಂದ್ರ ನಮಗೆಲ್ಲ ದೊಡ್ಡ ಸ್ಫೂರ್ತಿ. ಅವರು ಮಾಡಿ ಬಿಟ್ಟಿರೋದನ್ನು ನಾವು ಮಾಡುತ್ತಿದ್ದೇವೆ. ಅವರ ಶ್ರಮ ಮತ್ತು ಪ್ರತಿಭೆಯೇ ನಮಗೆ ಸ್ಫೂರ್ತಿ. ಇದು ಹಾಗೆ ಮುಂದುವರಿಯಬೇಕು. ಹೀಗಾಗಿ ದಯವಿಟ್ಟು ಉಪೇಂದ್ರ ಅವರು ಆದಷ್ಟುಬೇಗ ನಿರ್ದೇಶನಕ್ಕೆ ಬನ್ನಿ. ಒಂದು ಒಳ್ಳೆಯ ಸಿನಿಮಾ ನಿಮ್ಮ ನಿರ್ದೇಶನದಲ್ಲಿ ಮೂಡಿಬರಲಿ. ನೀವು ನಿರ್ದೇಶನ ಮಾಡುವ ಚಿತ್ರದಲ್ಲಿ ನೀವೇ ನಟಿಸಬೇಕು.

ಉಪೇಂದ್ರ ಮಾತುಗಳು

ಸುದೀಪ್‌ ಮಾತುಗಳನ್ನು ಕೇಳಿದ ಉಪೇಂದ್ರ ತನ್ನ ಮತ್ತು ಸುದೀಪ್‌ ಸ್ನೇಹ ನೆನಪಿಸಿಕೊಂಡರು. ‘ಎ’ ಚಿತ್ರ ನೋಡಿ ಅಂದು ಸುದೀಪ್‌ ಹೇಳಿದ್ದ ಅಭಿಪ್ರಾಯ, ಮುಂದೆ ಅವರ ಸ್ನೇಹ, ಜತೆಯಾಗಿ ನಟಿಸಿದ್ದು, ಸುದೀಪ್‌ ಅವರ ಇವತ್ತಿನ ಬೆಳವಣಿಗೆ ಕುರಿತು ಉಪ್ಪಿ ಮಾತನಾಡಿದರು. ಟ್ರೇಲರ್‌ ಬಿಡುಗಡೆಗೆ ಬಂದಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಉಪ್ಪಿ ಎದುರಿಗೆ ಸುದೀಪ್‌ಗೆ ‘ಐ ಲವ್ ಯೂ’ ಎಂದ ರಚಿತಾ ರಾಮ್

- ನಿರ್ದೇಶಕ ಚಂದ್ರು ಅವರ ಸಿನಿಮಾ ಇದು. ಅವರು ಕನಸು ಕಂಡಂತೆ ಈ ಚಿತ್ರವನ್ನು ಮಾಡಿದ್ದಾರೆ. ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರೂ ಎಲ್ಲೂ ರಾಜಿ ಆಗದೆ ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಈ ಜನರೇಷನ್‌ಗೆ ತಕ್ಕಂತೆ ಒಂದು ಪ್ರೇಮ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದಾರೆ. ಚಿತ್ರದ ಹೆಸರು, ಕತೆ ಕೇಳಿದಾಗ ನನಗೂ ಕುತೂಹಲ ಉಂಟಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಇದೊಂದು ಬೇರೆ ರೀತಿಯದ್ದೇ ಆದ ಲವ್‌ ಸ್ಟೋರಿ ಸಿನಿಮಾ. ಆರ್‌ ಚಂದ್ರು ಅವರ ಕೆರಿಯರ್‌ನಲ್ಲೇ ಒಂದು ದೊಡ್ಡ ಸಿನಿಮಾ ಇದಾಗಲಿದೆ.

- ಸುದೀಪ್‌ ಸಿನಿಮಾ ನಿರ್ದೇಶಿಸುವಂತೆ ಹೇಳುತ್ತಿದ್ದಾರೆ. ಖಂಡಿತ ಆದಷ್ಟುಬೇಗ ಆ ಸಿನಿಮಾ ಸೆಟ್ಟೇರಲಿದೆ. ಭಾರತದ ಯಾವುದೇ ಭಾಷೆಗೆ ಹೋದರೂ ಸುದೀಪ್‌ ಗೊತ್ತಿಲ್ಲ ಅನ್ನುವವರು ಕಡಿಮೆ. ಕನ್ನಡ ಚಿತ್ರರಂಗದ ಪತಾಕೆಯನ್ನು ಬೇರೆ ಭಾಷೆಗಳಲ್ಲಿ ಎತ್ತಿ ಹಿಡಿದ ನಟ. ನನ್ನ ಮತ್ತು ಸುದೀಪ್‌ ಸ್ನೇಹ 25 ವರ್ಷಗಳ ಹಳೆಯದು. ನನ್ನ ‘ಎ’ ಚಿತ್ರ ನೋಡಿ ತುಂಬಾ ಥ್ರಿಲ್ಲಾಗಿ ಸುದೀಪ್‌ ಅವರು ಅಂದು ಹೇಳಿದ ಅಭಿಪ್ರಾಯ ಈಗಲೂ ನನ್ನ ನೆನಪಿನಲ್ಲಿದೆ. ಅವರ ಅಂದಿನ ಮಾತುಗಳು ನನಗೆ ದೊಡ್ಡ ವಿಶ್ವಾಸ ಮೂಡಿಸಿತು.

ಮೊದಲ ಬಾರಿಗೆ ಎರಾಟಿಕ್‌ ಆಗಿ ಕಾಣಿಸಿಕೊಂಡಿರುವೆ: ರಚಿತಾ ರಾಮ್‌

ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡುವ ಜತೆಗೆ ಮೊದಲ ಬಾರಿಗೆ ತುಂಬಾ ಹಾಟ್‌ ಆಗಿ ಕಾಣಿಸಿಕೊಂಡಿರುವೆ. ಸಿಕ್ಕಾಪಟ್ಟೆಎರಾಟಿಕ್‌ ಆಗಿ ದೃಶ್ಯಗಳಲ್ಲಿ ನಟಿಸಿದ್ದೇನೆ. ಈಗ ಟ್ರೇಲರ್‌ ನೋಡುತ್ತಿದ್ದಾಗ ನಾನೇನಾ ಈ ಚಿತ್ರದಲ್ಲಿ ನಟಿಸಿದ್ದು ಅನಿಸುತ್ತಿದೆ. ಚಿತ್ರದಲ್ಲಿ ನನ್ನದು ಧಾರ್ಮಿಕ ಎನ್ನುವ ಪಾತ್ರ. ರೊಮ್ಯಾಂಟಿಕ್‌ ಸಾಂಗ್‌ ಕೂಡ ಇದೆ ಎಂದು ಹೇಳಿದ್ದು ರಚಿತಾರಾಮ್‌.

ಕನ್ನಡದ ಅದ್ದೂರಿ ಸಿನಿಮಾ: ಆರ್‌ ಚಂದ್ರು

ಜೂನ್‌ 14ರಂದು ಕನ್ನಡ, ತೆಲುಗು ಭಾಷೆಯಲ್ಲಿ ತೆರೆ ಕಾಣುತ್ತಿದ್ದು, ಒಟ್ಟು ಒಂದು ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಷ್ಟೇ ತೆಲುಗಿನಲ್ಲೂ ಚಿತ್ರಕ್ಕೆ ತುಂಬಾ ಬೇಡಿಕೆ ಬಂದಿದೆ. ಈ ಕಾರಣಕ್ಕೆ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈಗ ಚಿತ್ರದ ಎರಡನೇ ಟ್ರೇಲರ್‌ ಅನ್ನು ಸುದೀಪ್‌ ಅವರಿಂದ ಬಿಡುಗಡೆ ಮಾಡಿದ್ದರಿಂದ ಚಿತ್ರದ ಬಗ್ಗೆ ಸಾಕಷ್ಟುಕುತೂಹಲ ಮೂಡಿಸಲಿದೆ. ಪ್ರೇಮಿಗಳನ್ನೂ ಒಳಗೊಂಡಂತೆ ಎಲ್ಲರಿಗೂ ಇಷ್ಟವಾಗುವ ಸಿನಿಮಾ ಇದು.