ಆರ್ ಕೇಶವಮೂರ್ತಿ

ಚಂಬಲ್ ಸಿನಿಮಾದ ನಂತರ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆಯೇ?

ಬೇಡಿಕೆ ಅಥವಾ ಅವಕಾಶಗಳು ಎನ್ನುವುದಕ್ಕಿಂತ ಆ ಸಿನಿಮಾ ನನ್ನ ವೃತ್ತಿ ಪಯಣಕ್ಕೊಂದು ದೊಡ್ಡ ಭರವಸೆ ಆಯಿತು. ಒಳ್ಳೆಯ ವಿಮರ್ಶೆಗಳು ಬಂದವು. ನಟನೆ, ಕತೆ ಹೀಗೆ ಎಲ್ಲವನ್ನೂ ನೋಡುಗರು ಗುರುತಿಸಿದರು. ನನ್ನ ಪಾತ್ರ ಎಲ್ಲರಿಗೂ ಹತ್ತಿರವಾಯಿತು. ಇದು ಮುಂದೆ ನನ್ನ ಬೇಡಿಕೆಯ ನಟಿಯನ್ನಾಗಿಯೂ ರೂಪಿಸಬಹುದು.

ಹಾಗಾದರೆ ಹೊಸ ಸಿನಿಮಾಗಳು ಬಂದಿರಬೇಕು?

ಎರಡು ಸಿನಿಮಾಗಳ ಕತೆ ಕೇಳಿದ್ದೇನೆ. ಇದರ ನಡುವೆ ಒಂದು ವೆಬ್ ಸರಣಿಯಲ್ಲಿ ನಟಿಸುವಂತೆ ಕೇಳುತ್ತಿದ್ದಾರೆ. ಅದು ತಮಿಳು ತಂಡದ ವೆಬ್ ಸರಣಿ. ಈಗ ಎಲ್ಲ ಕಡೆ ಇದೇ ಟ್ರೆಂಡ್. ಆದರೂ ದಕ್ಷಿಣ ಭಾರತದಲ್ಲಿ ಇನ್ನೂ ಈ ವೆಬ್ ಸರಣಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಇಲ್ಲ. ಹೀಗಾಗಿ ಈ ಅವಕಾಶವನ್ನು ಒಪ್ಪಿಕೊಳ್ಳುವ ವಿಚಾರದಲ್ಲಿ ಹಿಂದೆ ಮುಂದೆ ನೋಡುತ್ತಿರುವೆ.

ನಿಮ್ಮ ಮುಂದಿರುವ ಚಿತ್ರಗಳು ಕುರಿತು ಹೇಳುವುದಾದರೆ?

ಉಪೇಂದ್ರ ಅವರ ಜತೆ ‘ಐ ಲವ್‌ಯು’, ನಿಖಿಲ್ ಮಂಜು ನಿರ್ದೇಶನದ ‘ಶಾಲಿನಿ ಐಎಎಸ್’ ಹಾಗೂ ಹೊಸ ತಂಡ ಮಾಡುತ್ತಿರುವ ‘ರೆಡ್’ ಎನ್ನುವ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಮುಂದಿನ ತಿಂಗಳು ‘ಐ ಲವ್ ಯು’ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಶೇಷವಾಗಿದೆ.

ಆದರೆ, ಸಿನಿಮಾ ಪೋಸ್ಟರ್ ಹಾಗೂ ಟ್ರೇಲರ್‌ನಲ್ಲಿ ನಿಮ್ಮ ಪೋಟೋ ಹಾಕಿಲ್ಲವೆಂದು ಕೋಪ ಮಾಡಿಕೊಂಡಿದ್ದೀರಂತೆ?

ಹೌದು. ಯಾಕೆಂದರೆ ಚಿತ್ರದ ಯಾವುದೇ ರೀತಿಯ ಪತ್ರಿಕಾಗೋಷ್ಟಿ, ಪ್ರಚಾರದ ಕಾರ್ಯಕ್ರಮ ಇದ್ದರೆ ನನ್ನನ್ನು ನಿರ್ದೇಶಕರೇ ಕರೆಯುತ್ತಾರೆ. ಪ್ರತಿ ಸಲವೂ ಬಂದಾಗ ಪೋಸ್ಟರ್‌ಗಳಲ್ಲಿ, ಟ್ರೇಲರ್‌ನಲ್ಲಿ ನಾನು ಕಾಣೋದೇ ಇಲ್ಲ. ಅದನ್ನು ನಾನು ನಿರ್ದೇಶಕ ಆರ್ ಚಂದ್ರು ಅವರಲ್ಲಿ ‘ಎಲ್ಲದಕ್ಕೂ ನನ್ನ ಕರೆಯುತ್ತೀರಿ. ಆದರೆ, ನನ್ನ ಪೋಟೋಗಳು ಮಾತ್ರ ಇರಲ್ಲ. ಹಾಗಿದ್ದಾಗ ನಾನು ಯಾಕೆ ಬರಬೇಕು?’ ಅಂತ ಜಗಳ ಆಡಿದ್ದು ನಿಜ. ಆದರೆ, ಅದು ಪ್ರೀತಿಯಿಂದ ಆಡಿದ ಜಗಳ. ಇದನ್ನು ವಿವಾದ ಮಾಡಬೇಡಿ. ಆಮೇಲೆ ಚಂದ್ರು ಅವರು ನನ್ನ ಪಾತ್ರದ ರಿವೀಲ್ ಮಾಡುವ ಅವರ ಪ್ಲಾನ್ ಬಗ್ಗೆ ಕೇಳಿ ಖುಷಿ ಆಯಿತು.

ಏನೂ ಆ ಪ್ಲಾನ್?

ಅಂದರೆ ನನ್ನ ಪಾತ್ರದ ಲುಕ್ ಪೋಸ್ಟರ್‌ಗಳಲ್ಲಿ ಅಥವಾ ಟ್ರೇಲರ್‌ನಲ್ಲಿ ಬಿಟ್ಟು ಕೊಟ್ಟರೆ ಕತೆ ಗೊತ್ತಾಗಿಬಿಡುತ್ತದೆ. ಸಿನಿಮಾ ನೋಡಿದ ಮೇಲೆಯೇ ನನ್ನ ಪಾತ್ರದ ಬಗ್ಗೆ ಗೊತ್ತಾಗಬೇಕಂತೆ. ಅಲ್ಲಿವರೆಗೂ ಕುತೂಹಲ ಕಾಯ್ದುಕೊಳ್ಳುವುದಕ್ಕಾಗಿ ಎಲ್ಲೂ ‘ಐ ಲವ್ ಯು’ ಚಿತ್ರದಲ್ಲಿ ನನ್ನ ಪಾತ್ರದ ಗುಟ್ಟು ಬಿಟ್ಟು ಕೊಟ್ಟಿಲ್ಲ.

ನೀವು ಮತ್ತು ರಚಿತಾ ರಾಮ್ ಇದ್ದೀರಿ. ಸಿನಿಮಾ ಬಿಡುಗಡೆ ತನಕ ಒಬ್ಬರಿಗೆ ಪ್ರಚಾರ ಸಿಗುತ್ತದಲ್ಲವೇ?

ಚಿತ್ರದಲ್ಲಿ ನನ್ನ ಪಾತ್ರದ ಮಹತ್ವ ನನಗೆ ಗೊತ್ತು. ಕತೆಯಲ್ಲಿ ನಾನು ಎಷ್ಟು ಮುಖ್ಯ ಎಂಬುದು ನಿರ್ದೇಶಕರಿಗೂ ಗೊತ್ತು. ಅಲ್ಲದೆ ಇಬ್ಬರು ನಟಿಯರು ಇರುವ ಚಿತ್ರದಲ್ಲಿ ಒಬ್ಬರದ್ದೇ ಎಲ್ಲ ಕಡೆ ಪ್ರಚಾರ ಆಗುತ್ತಿದೆ ಅಂದರೆ ಮತ್ತೊಬ್ಬ ನಟಿ ಪಾತ್ರದ ಬಗ್ಗೆ ಸಹಜವಾಗಿ ಕುತೂಹಲ ಹುಟ್ಟಿಕೊಳ್ಳುತ್ತದೆ. ಜನ ಚಿತ್ರಮಂದಿರಕ್ಕೆ ಬರುತ್ತಾರೆ. ನಿಜ ಹೇಳಬೇಕು ಅಂದರೆ ಈ ಸಿನಿಮಾದಲ್ಲಿ ನನ್ನ ಪಾತ್ರ ನೋಡಿದ ಮೇಲೆ ಉಪೇಂದ್ರ ಅವರ ಅಭಿಮಾನಿಗಳೂ ನನಗೂ ಅಭಿಮಾನಿಗಳಾಗುತ್ತಾರೆ. ಖಂಡಿತ ನಾನು ರಿಯಲ್ ಸ್ಟಾರ್ ಅಭಿಮಾನಿಗಳ ಪ್ರೀತಿಗೆ ಪಾತ್ರಳಾಗುತ್ತೇನೆ ಎನ್ನುವ ನಂಬಿಕೆ ಇದೆ.