Twinkle Khanna: ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಮಗಳು ಟ್ವಿಂಕಲ್ ಖನ್ನಾ ಅವರ ಹಳೆಯ ಸಂದರ್ಶನವೊಂದು ಈಗ ಸಖತ್ ವೈರಲ್ ಆಗಿದೆ.
ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಬಗ್ಗೆ ಮ್ಯಾಗಝೀನ್‌ಗಳಲ್ಲಿ ಬರುತ್ತಿದ್ದ ಗಾಸಿಪ್‌ಗಳ ಕುರಿತು ಮಗಳು ಟ್ವಿಂಕಲ್ ಖನ್ನಾ ಮಾತನಾಡಿದ್ದಾರೆ. ಮನೆಯಲ್ಲಿ ನೋಡುತ್ತಿದ್ದ ಅಪ್ಪ-ಅಮ್ಮನಿಗೂ, ಪತ್ರಿಕೆಗಳಲ್ಲಿ ಬರೆಯುತ್ತಿದ್ದ ವ್ಯಕ್ತಿಗಳಿಗೂ ಅಜಗಜಾಂತರ ವ್ಯತ್ಯಾಸವಿತ್ತು ಎಂದು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಮಗಳು ಟ್ವಿಂಕಲ್ ಖನ್ನಾ ಅವರ ಹಳೆಯ ಸಂದರ್ಶನವೊಂದು ಈಗ ಸಖತ್ ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ಪೋಷಕರ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಮ್ಯಾಗಝೀನ್‌ಗಳಲ್ಲಿ ತನ್ನ ಅಪ್ಪ-ಅಮ್ಮನ ಬಗ್ಗೆ ಬರುತ್ತಿದ್ದ ಸುದ್ದಿಗಳನ್ನು ತನಗೆ ನಂಬಲು ಆಗುತ್ತಿರಲಿಲ್ಲ, ಯಾಕಂದ್ರೆ ಮನೆಯಲ್ಲಿ ತಾನು ನೋಡುತ್ತಿದ್ದ ಪೋಷಕರೇ ಬೇರೆ, ಪತ್ರಿಕೆಗಳಲ್ಲಿ ಬರೆಯುತ್ತಿದ್ದ ವ್ಯಕ್ತಿಗಳೇ ಬೇರೆ ಆಗಿದ್ದರು ಎಂದು ಟ್ವಿಂಕಲ್ ಹೇಳಿಕೊಂಡಿದ್ದರು. 'ಯಾದೇಂ ಬಿ-ಟೌನ್ ಕಿ- ಇಸ್ ದುನಿಯಾ ಕೆ ಸಿತಾರೆ' ಎಂಬ ಶೋನಲ್ಲಿ ನಿರೂಪಕ ಜಾವೇದ್ ಜಾಫ್ರಿ ಜೊತೆ ಟ್ವಿಂಕಲ್ ಈ ಮಾತುಗಳನ್ನು ಹಂಚಿಕೊಂಡಿದ್ದರು. ಅಷ್ಟಕ್ಕೂ, ಟ್ವಿಂಕಲ್ ತಮ್ಮ ಪೋಷಕರ ಬಗ್ಗೆ ಹೇಳಿದ್ದೇನು? ಇಲ್ಲಿದೆ ವಿವರ.
ತಮ್ಮ ಪೋಷಕರ ಬಗ್ಗೆ ಟ್ವಿಂಕಲ್ ಖನ್ನಾ ಹೇಳಿದ್ದೇನು?
ಜಾವೇದ್ ಜಾಫ್ರಿ ಅವರ ಶೋನಲ್ಲಿ ಭಾಗವಹಿಸಿದ್ದ ಟ್ವಿಂಕಲ್ ಖನ್ನಾ, ಬಾಲಿವುಡ್‌ನ ಇಬ್ಬರು ದೊಡ್ಡ ಸ್ಟಾರ್‌ಗಳ ಮಗಳಾಗಿ ಬೆಳೆಯುವುದು ಎಂದರೆ ಸದಾ ಲೈಮ್‌ಲೈಟ್‌ನಲ್ಲಿ ಇರುವುದು ಎಂದರ್ಥ ಎಂದು ಹೇಳಿದರು. ತಮ್ಮ ಪೋಷಕರಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಬಗ್ಗೆ ಹಬ್ಬುತ್ತಿದ್ದ ಗಾಸಿಪ್‌ಗಳು ತಮ್ಮ ಮೇಲೆ ಅಷ್ಟಾಗಿ ಪರಿಣಾಮ ಬೀರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಗಾಸಿಪ್‌ಗಳನ್ನು ಎದುರಿಸಿದ್ದು, ಸ್ಟಾರ್ ಕಿಡ್ ಆಗಿ ಜೀವನ ನಡೆಸಿದ್ದು ಮತ್ತು ಸೆಲೆಬ್ರಿಟಿ ಕುಟುಂಬದಲ್ಲಿ ಬೆಳೆದ ವಿಶಿಷ್ಟ ಅನುಭವಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದರು.
ಪೋಷಕರ ಬಗ್ಗೆ ಹಬ್ಬುತ್ತಿದ್ದ ವದಂತಿಗಳ ನಡುವೆ ಬೆಳೆದಿದ್ದು ಕೆಟ್ಟ ಪರಿಣಾಮ ಬೀರಿತ್ತೇ ಎಂದು ಕೇಳಿದಾಗ, "ಚಿಕ್ಕ ವಯಸ್ಸಿನಲ್ಲೇ ಜನರ ಅಭಿಪ್ರಾಯಕ್ಕೂ, ವಾಸ್ತವಕ್ಕೂ ಇರುವ ವ್ಯತ್ಯಾಸವನ್ನು ನಾನು ಕಲಿತುಕೊಂಡೆ" ಎಂದು ಟ್ವಿಂಕಲ್ ಉತ್ತರಿಸಿದರು. ಮ್ಯಾಗಝೀನ್‌ಗಳಲ್ಲಿ ತೋರಿಸುತ್ತಿದ್ದ ತಮ್ಮ ಪೋಷಕರ ಇಮೇಜ್, ಮನೆಯಲ್ಲಿದ್ದ ಅವರ ನಿಜವಾದ ವ್ಯಕ್ತಿತ್ವಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು ಎಂದು ಅವರು ನೆನಪಿಸಿಕೊಂಡರು. "ನಾನು ಮ್ಯಾಗಝೀನ್‌ಗಳಲ್ಲಿ ಓದುತ್ತಿದ್ದ ವ್ಯಕ್ತಿಗಳಿಗೂ, ಮನೆಯಲ್ಲಿದ್ದ ನನ್ನ ಅಪ್ಪ-ಅಮ್ಮನಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಆ ವ್ಯಕ್ತಿಗಳು ಯಾರೆಂದೇ ನನಗೆ ಗೊತ್ತಾಗುತ್ತಿರಲಿಲ್ಲ," ಎಂದು ಅವರು ಹೇಳಿದ್ದರು.
ಪೋಷಕರ ಅಸಲಿ ಮುಖದ ಬಗ್ಗೆ ಟ್ವಿಂಕಲ್ ಮಾತು
ಸಂದರ್ಶನದಲ್ಲಿ ಟ್ವಿಂಕಲ್ ಖನ್ನಾ, "ಮೊದಲಿನಿಂದಲೂ ನನಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಿತ್ತು, ಅದೆಂದರೆ ಹೆಚ್ಚಿನ ಸುದ್ದಿಗಳು ಕಟ್ಟುಕಥೆಗಳೇ ಆಗಿರುತ್ತಿದ್ದವು. ನನ್ನ ಪೋಷಕರು ನಿಜ ಜೀವನದಲ್ಲಿ ಹೇಗಿದ್ದರು ಎಂಬ ಸತ್ಯ ನನಗೆ ಗೊತ್ತಿದ್ದ ಕಾರಣ, ಈ ಗಾಸಿಪ್‌ಗಳು ನನ್ನ ಮೇಲೆ ಪ್ರಭಾವ ಬೀರಲಿಲ್ಲ. ಒಂದು ವೇಳೆ ಅವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದರೆ, ಯಾರಾದರೂ ಈ ಕಥೆಗಳನ್ನು ಹೇಳಿದ್ದರೆ ಬಹುಶಃ ನನ್ನ ಮೇಲೆ ಪರಿಣಾಮ ಬೀರುತ್ತಿತ್ತೇನೋ.
ಆದರೆ, ಅವರು ನಿಜವಾಗಿ ಹೇಗಿದ್ದರು ಎಂಬುದು ನನಗೆ ತಿಳಿದಿತ್ತು," ಎಂದು ವಿವರಿಸಿದರು. ತಮ್ಮ ಬಾಲ್ಯದ ಬಗ್ಗೆ ಮಾತನಾಡುತ್ತಾ, ಹಿಂದಿ ಚಿತ್ರರಂಗದ ಇಬ್ಬರು ಪ್ರಸಿದ್ಧ ವ್ಯಕ್ತಿಗಳ ಮಗಳಾಗಿದ್ದರೂ ತಮ್ಮ ಜೀವನ ಸಾಮಾನ್ಯವಾಗಿಯೇ ಇತ್ತು ಎಂದರು. ರಾಜೇಶ್ ಖನ್ನಾ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಹೆಣ್ಣುಮಕ್ಕಳಿಗಾಗಿ ಸಮಯ ಮೀಸಲಿಡಲು ಹೇಗೆ ಪ್ರಯತ್ನಿಸುತ್ತಿದ್ದರು ಎಂಬುದನ್ನು ಅವರು ನೆನಪಿಸಿಕೊಂಡರು. "ಅಪ್ಪ ಶೂಟಿಂಗ್‌ನಿಂದ ತಡವಾಗಿ ಮನೆಗೆ ಬರುತ್ತಿದ್ದರು, ಆದರೆ ಬಂದ ತಕ್ಷಣ ನಮ್ಮ ಯೋಗಕ್ಷೇಮ ವಿಚಾರಿಸುತ್ತಿದ್ದರು," ಎಂದು ಹೇಳಿದರು.
ಫಿಲ್ಮ್ ಫ್ಯಾಮಿಲಿಯಲ್ಲಿ ಹುಟ್ಟಿದ್ದರ ಪ್ಲಸ್-ಮೈನಸ್ ಬಗ್ಗೆ ಮಾತು
ಸಂದರ್ಶನದ ವೇಳೆ, ಪ್ರಸಿದ್ಧ ಸಿನಿಮಾ ಕುಟುಂಬದಲ್ಲಿ ಹುಟ್ಟುವುದರ ಅನುಕೂಲ ಮತ್ತು ಒತ್ತಡಗಳ ಬಗ್ಗೆಯೂ ಟ್ವಿಂಕಲ್ ಮಾತನಾಡಿದರು. "ಒಂದು ರೀತಿಯಲ್ಲಿ ಇದನ್ನು ಹೊರೆ ಎನ್ನಬಹುದು, ಇನ್ನೊಂದು ರೀತಿಯಲ್ಲಿ ಇದೊಂದು ಅವಕಾಶ. ನನ್ನ ಹಿನ್ನೆಲೆ ಹೀಗಿರದಿದ್ದರೆ, ಬಹುಶಃ ನನಗೆ ಈ ಅವಕಾಶ ಸಿಗುತ್ತಿರಲಿಲ್ಲ," ಎಂದರು. ಆದರೆ, ಚಿತ್ರರಂಗದಲ್ಲಿ ಉಳಿಯುವುದು ನಿಮ್ಮ ಸ್ವಂತ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂದು ಅವರು ಒತ್ತಿ ಹೇಳಿದರು.
"ನಿಮ್ಮ ಗುರುತಿನಿಂದಾಗಿ ಒಂದು ಸಿನಿಮಾ ಸಿಗಬಹುದು. ಆದರೆ, ಆ ನಂತರ ಇಲ್ಲಿಯೇ ಉಳಿದುಕೊಳ್ಳಬೇಕೆಂದರೆ ನೀವು ಹೋರಾಟ ಮಾಡಲೇಬೇಕು," ಎಂದರು. ಅಂದಹಾಗೆ, ಟ್ವಿಂಕಲ್ ಕೂಡ ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿ ನಟನಾ ಜಗತ್ತಿಗೆ ಕಾಲಿಟ್ಟರು. ಆದರೆ, ಅವರು ತಮ್ಮ ಪೋಷಕರಂತೆ ಯಶಸ್ಸು ಕಾಣಲಿಲ್ಲ. ನಂತರ, ನಟ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗಿ, ನಟನೆಯಿಂದ ದೂರ ಉಳಿದರು. ಈಗ ಅವರು ಸಿನಿಮಾ ನಿರ್ಮಾಣ, ಪುಸ್ತಕ ಬರವಣಿಗೆ ಮತ್ತು ಇಂಟೀರಿಯರ್ ಡಿಸೈನಿಂಗ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ.


