ಸ್ಯಾಂಡಲ್‌ವುಡ್ ಮಾಯಾ ಕನ್ನಡಿಯಲ್ಲಿ ಕರಾವಳಿ ಹುಡುಗಿ!
ಹಿಂದಿ ಭಾಷೆಯ ನಟಿ ಕಾಜಲ್ ಕನ್ನಡಕ್ಕೆ ಬಂದಿದ್ದಾರೆ. ಮಂಗಳೂರು ಮೂಲದ ಯುವ ಉತ್ಸಾಹಿ ವಿನೋದ್ ಪೂಜಾರಿ ನಿರ್ದೇಶನದ ‘ಮಾಯಾ ಕನ್ನಡಿ’ ಚಿತ್ರದೊಂದಿಗೆ ಅವರ ಸ್ಯಾಂಡಲ್‌ವುಡ್ ಜರ್ನಿ ಶುರುವಾಗುತ್ತಿದೆ. ತುಳು ಚಿತ್ರರಂಗದೊಂದಿಗೆ ಹಿಂದಿ ಕಿರುತೆರೆಗೆ ಕಾಲಿಟ್ಟು, ಅಲ್ಲೀಗ ಬೇಡಿಕೆಯ ನಟಿಯಾಗಿರುವ ಮಂಗಳೂರಿನ ಸಸಿಹಿತ್ಲು ನಿವಾಸಿಯೇ ಈ ಕಾಜಲ್ ಕುಂದರ್. ವಿನೋದ್ ಪೂಜಾರಿ ನಿರ್ದೇಶನದಲ್ಲಿ ಈಗಷ್ಟೇ ಚಿತ್ರೀಕರಣ ಪೂರೈಸಿ, ರಿಲೀಸ್‌ಗೆ ಸಿದ್ಧತೆ ನಡೆಸಿರುವ ‘ಮಾಯಾ ಕನ್ನಡಿ’ಯಲ್ಲಿನ ಇಬ್ಬರು ನಾಯಕಿಯರಲ್ಲಿ ಇವರು ಕೂಡ ಒಬ್ಬರು.
ಒಂದೆಡೆ ಸಿನಿಮಾ, ಮತ್ತೊಂದೆಡೆ ಧಾರಾವಾಹಿ ಎರಡರಲ್ಲೂ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ಕಾಜಲ್ ಈಗ ‘ಮಾಯಾ ಕನ್ನಡಿ’ಯಲ್ಲಿ ಕೌನ್ಸಿಲರ್ ಆಗಿ ಕಾಣಿಸಿಕೊಂಡಿದ್ದಾರಂತೆ. ಆ ಮೂಲಕ ಇದೇ ಮೊದಲು ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ನಿರ್ದೇಶಕರ ಕಡೆಯಿಂದಲೇ ನನಗೆ ಈ ಸಿನಿಮಾದ ಆಫರ್ ಬಂತು. ಒಂದಷ್ಟುತುಳು ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದನ್ನು ನೋಡಿ, ಸಂಪರ್ಕ ಮಾಡಿದ್ದಾಗಿ ಹೇಳಿಕೊಂಡರು. ಕತೆ ಮತ್ತು ನನ್ನ ಪಾತ್ರ ಚೆನ್ನಾಗಿದ್ದವು. ಹಾಗಾಗಿ ಒಪ್ಪಿಕೊಂಡೆ’ ಎನ್ನುವ ಕಾಜಲ್, ಈಗಷ್ಟೇ ತ್ರಿಶೂಲ್ ನಿರ್ದೇಶನದ ‘ಮಾಜಿ ಮುಖ್ಯಮಂತ್ರಿ’ ಹೆಸರಿನ ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದಕ್ಕೂ ಮುಂಚೆ ‘ಪತ್ತನಾಜೆ’ ತುಳು ಚಿತ್ರದಲ್ಲೂ ಅಭಿನಯಿಸಿದ್ದರು.
ಈಗಾಗಲೇ ನಾನು ಹಿಂದಿ, ಮರಾಠಿ ಅಂತೆಲ್ಲ ಸಿನಿಮಾ ಮತ್ತು ಸೀರಿಯಲ್‌ನಲ್ಲಿ ಅಭಿನಯಿಸಿದ್ದರೂ, ಕನ್ನಡದಲ್ಲಿ ಗುರುತಿಸಿಕೊಳ್ಳಬೇಕೆನ್ನುವ ಆಸೆ ಬಲವಾಗಿತ್ತು. ಆ ಪ್ರಕಾರ ಈಗ ಕನ್ನಡದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಇಲ್ಲಿನ ಪ್ರೇಕ್ಷಕರು ನನ್ನನ್ನು ಸ್ವೀಕರಿಸುತ್ತಾರೆನ್ನುವ ವಿಶ್ವಾಸವೂ ಇದೆ.- ಕಾಜಲ್ ಕುಂದರ್, ನಟಿ
‘ಲೋಹರ್ದಾಗ’ ಹೆಸರಿನ ಕಲಾತ್ಮಕ ಚಿತ್ರದೊಂದಿಗೆ ಹಿಂದಿಗೂ ಎಂಟ್ರಿಯಾದ ಅವರು, ಮರಾಠಿಯ ಹೆಸರಾಂತ ನಿರ್ದೇಶಕ ಪ್ರಕಾಶ್ ಪಂಚಾಲ್ ನಿರ್ದೇಶನದ ‘ಸುಭಸ್ಯ ಸಿಗ್ರಂ’ ಮರಾಠಿ ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಸೋನಿ ಟಿವಿಯಲ್ಲಿನ ‘ಕ್ರೈಮ್ ಪೆಟ್ರೊಲ್’ನಲ್ಲೂ ಕಾಣಿಸಿಕೊಂಡ ಹೆಗ್ಗಳಿಕೆ ಕಾಜಲ್ ಅವರದ್ದು.
ಮಾಯಾ ಕನ್ನಡಿ ಚಿತ್ರದಲ್ಲಿ ಉರ್ವಿ ಖ್ಯಾತಿಯ ನಟ!
‘ಚಿಕ್ಕವಳಿದ್ದಾಗಿನಿಂದಲೇ ನನಗೆ ಆ್ಯಕ್ಟರ್ ಆಗುವ ಆಸೆಯಿತ್ತು. ಆ ಪ್ರಕಾರ ಕಾಲೇಜು ಹಂತಕ್ಕೆ ಕಾಲಿಟ್ಟಾಗ ತುಳು ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂತು. ಅಲ್ಲಿಂದ ಒಂದೊಂದಾಗಿ ಆಫರ್ ಬಂದವು. ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಅದೇ ನನಗೆ ಇಲ್ಲಿ ಸಿನಿಮಾದ ಅವಕಾಶವೂ ಬರುವಂತೆ ಮಾಡಿದ್ದು ಖುಷಿ ಎನಿಸುತ್ತದೆ’ ಎನ್ನುತ್ತಾರೆ ಕಾಜಲ್.