ಈ ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ‘ರಿಲ್ಯಾಕ್ಸ್‌ ಸತ್ಯ’ ಹಾಗೂ ‘ಮೈಸೂರು ಡೈರೀಸ್‌’ ಚಿತ್ರಗಳ ಚಿತ್ರೀಕರಣ ಮುಗಿಸಿ ಅದರ ಬಿಡುಗಡೆಯ ನಿರೀಕ್ಷೆಯಲ್ಲಿರುವಾಗಲೇ ಪ್ರಭು, ಹೊಸ ಅವಕಾಶಗಳೊಂದಿಗೆ ಮತ್ತಷ್ಟುಬ್ಯುಸಿ ಆಗುತ್ತಿದ್ದಾರೆ. ಆ ಸಾಲಿನಲ್ಲೀಗ ‘ಮಾಯಾ ಕನ್ನಡಿ’.

ಚಿತ್ರತಂಡದ ಪ್ರಕಾರ ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾ ಹಂದರದ ಚಿತ್ರ. ಒಂದು ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ನಿಗೂಢ ಆತ್ಮಹತ್ಯೆಗಳ ಹಿಂದೆ ಬ್ಲೂ ವೇಲ್‌ ಗೇಮ್‌ನಂತಹ ಒಂದು ಆನ್‌ಲೈನ್‌ ಆಟ ಹೇಗೆಲ್ಲ ಕೆಲಸ ಮಾಡುತ್ತದೆ, ಅದನ್ನೇ ನೆಪವಾಗಿಟ್ಟು ಅಲ್ಲಿ ಹೇಗೆ ಮುಗ್ಧ ವಿದ್ಯಾರ್ಥಿಗಳ ಕೊಲೆ ಪ್ರಕರಣಗಳು ನಡೆಯುತ್ತವೆ ಎನ್ನುವುದು ಈ ಚಿತ್ರದ ಒನ್‌ಲೈನ್‌ ಸ್ಟೋರಿ. ತನ್ನದೇ ಬುದ್ಧಿವಂತಿಕೆಯಿಂದ ಆ ಕೊಲೆ ಪ್ರಕರಣಗಳ ರಹಸ್ಯವನ್ನು ಭೇದಿಸುವ ವಿದ್ಯಾರ್ಥಿಯಾಗಿ ಯುವ ನಟ ಪ್ರಭು ಮುಂಡ್ಕೂರ್‌ ಅಭಿನಯಿಸಿದ್ದಾರಂತೆ.

‘ಅದೃಷ್ಟವೇ ಎನ್ನುವ ಹಾಗೆ ಚಿತ್ರದಿಂದ ಚಿತ್ರಕ್ಕೆ ಹೊಸ ಹೊಸ ಪಾತ್ರಗಳು ಸಿಗುತ್ತಿವೆ. ಅಂಥದ್ದೇ ಒಂದು ಪಾತ್ರ ಇಲ್ಲೂ ಸಿಕ್ಕಿದೆ. ಅದಕ್ಕಿಂತ ಲಕ್ಕಿ ಅಂದ್ರೆ ನಾನಿಲ್ಲಿ ಸ್ಟುಡೆಂಟ್‌. ಆತ ಈ ಕಾಲದ ಹುಡುಗರ ಹಾಗೆಯೇ ಎಂಜಾಯ್‌ ಮಾಡುತ್ತಾ ದಿನ ಕಳೆಯುವ ವಿದ್ಯಾರ್ಥಿಯಾದರೂ, ತನ್ನದೇ ಬುದ್ಧಿವಂತಿಕೆಯಿಂದ ಆ ಕಾಲೇಜಿನಲ್ಲಿ ನಿಗೂಢವಾಗಿ ನಡೆಯುವ ಕೊಲೆ ಪ್ರಕರಣಗಳನ್ನು ಭೇದಿಸುತ್ತಾನೆ’ ಎನ್ನುತ್ತಾರೆ ಪ್ರಭು ಮುಂಡ್ಕೂರ್‌.