ಸದಭಿರುಚಿಯ ನಿರ್ದೇಶಕ ಎಂದೇ ಗುರುತಿಸಿಕೊಂಡಿದ್ದ ಶಶಾಂಕ್ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದೆ. ‘ತಾಯಿಗೆ ತಕ್ಕ ಮಗ’ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಲು ಮುಂದಾಗಿದ್ದಕ್ಕೆ ಶಶಾಂಕ್ ಸಿಟ್ಟಾಗಿದ್ದಾರೆ.

ಸೆನ್ಸಾರ್ ಮಂಡಳಿ ಯಾವ ಆಧಾರದಲ್ಲಿ ಎ ಸರ್ಟಿಫಿಕೇಟ್ ನೀಡಲು ಮುಂದಾಗಿದೆ ಎನ್ನುವ ಕಾರಣ ಬಹಿರಂಗವಾಗಿಲ್ಲ. ಚಿತ್ರತಂಡವೂ ಅದನ್ನು ಹೇಳುತ್ತಿಲ್ಲ. ಮೂಲಗಳ ಪ್ರಕಾರ ಫೈಟುಗಳಿಂದಾಗಿ ರಕ್ತಸಿಕ್ತ ವಾತಾವರಣ ಇದೆ ಎನ್ನುವುದೇ ಎ ಸರ್ಟಿಫಿಕೇಟ್‌ಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಇದನ್ನು ಪ್ರಶ್ನಿಸಿರುವ ನಿರ್ದೇಶಕ ಶಶಾಂಕ್, ಕೌಟುಂಬಿಕ ಕಥಾ ಹಂದರ ಇರುವ ಚಿತ್ರಕ್ಕೆ ಆ್ಯಕ್ಷನ್ ಜಾಸ್ತಿ ಎನ್ನುವ ನೆಪದಲ್ಲಿ ಎ ಸರ್ಟಿಫಿಕೇಟ್ ಕೊಟ್ಟರೆ ನಿರ್ಮಾಪಕನ ಗತಿ ಏನು ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ತಾಯಿಗೆ ತಕ್ಕ ಮಗ ರೊಚ್ಚಿಗೇಳುವ ಮೊದಲೇ ನಿರ್ದೇಶಕರೇ ಸಿಡಿದೇಳಲು ಮುಂದಾಗಿದ್ದಾರೆ. 

ಆ್ಯಕ್ಷನ್ ಜಾಸ್ತಿ ಇದೆ ಅನ್ನುವುದೇ ಸಮಸ್ಯೆಯಾಗಿದೆ ಅನ್ನುವುದು ಸರ್ಟಿಫಿಕೇಟ್ ನೀಡುವ ಮುನ್ನ ಅಧಿಕಾರಿಗಳ ಜತೆಗೆ ಔಪಚಾರಿಕವಾಗಿ ಮಾತನಾಡುವಾಗ ಅದು ಗೊತ್ತಾಗಿದೆ. ಹಾಗೆಯೇ ಕಟ್ಸ್ ಗೆ ಒಪ್ಪಿಕೊಳ್ಳುವುದಾದರೆ ಯು/ಎ ನೀಡುವುದಾಗಿಯೂ ಹೇಳಲಾಗಿದೆ. ಹಾಗೆ ಮಾಡಿದರೆ ಅರ್ಧ ಸಿನಿಮಾವನ್ನೇ ಕತ್ತರಿಸಬೇಕಾಗುತ್ತದೆ ಎನ್ನುವ ಆತಂಕ ಶಶಾಂಕ್‌ಗಿದೆ. ಹಾಗಾಗಿ ಒಂದೆರಡು ದಿನದಲ್ಲಿ ತಮ್ಮ ನಿರ್ಧಾರ ತಿಳಿಸುವುದಾಗಿ ಸೆನ್ಸಾರ್ ಮಂಡಳಿಗೆ ಹೇಳಿದ್ದಾರಂತೆ ಶಶಾಂಕ್.