ತಮಿಳುನಾಡಿನ ಸೂಪರ್‌ಸ್ಟಾರ್ ವಿಜಯ್ ಅವರ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಸ್ಥಾಪನೆಯಾದ ಕೇವಲ ಎರಡು ವರ್ಷಗಳಲ್ಲಿಯೇ ಚುನಾವಣೆಯಲ್ಲಿ ಗೆದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ತಮಿಳುನಾಡಿನ ಸೂಪರ್‌ಸ್ಟಾರ್ ವಿಜಯ್ ಅವರ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಸ್ಥಾಪನೆಯಾದ ಕೇವಲ ಎರಡು ವರ್ಷಗಳಲ್ಲಿಯೇ ಚುನಾವಣೆಯಲ್ಲಿ ಗೆದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಇಡೀ ಭಾರತೀಯ ರಾಜಕೀಯಕ್ಕೇ ಶಾಕ್ ನೀಡಿದೆ. ಡಿಎಂಕೆ ಪಕ್ಷದ ಸತತ ಎರಡನೇ ಬಾರಿಯ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದ TVK, ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಸೀಟುಗಳ ಸಂಖ್ಯೆಯಲ್ಲಿ ಸೆಂಚುರಿ ಬಾರಿಸಿದೆ.

Add Asianetnews Kannada as a Preferred SourcegooglePreferred

ರಾಜಕೀಯ ವಿಶ್ಲೇಷಕರು ಮತ್ತು ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರವನ್ನೆಲ್ಲಾ ಈ ಗೆಲುವು ತಲೆಕೆಳಗು ಮಾಡಿದೆ. ಈಗ, ವಿಜಯ್ ಅವರ ಬಾಲ್ಯದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಹಿಂದೆ ಬಾಲಕ ವಿಜಯ್ ನಿಂತಿರುವ ಫೋಟೋ ಇದು. ಒಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕರುಣಾನಿಧಿ ರಿಬ್ಬನ್ ಕತ್ತರಿಸುತ್ತಿದ್ದರೆ, ಅವರ ಹಿಂದೆ ವಿಜಯ್ ನಿಂತಿದ್ದಾರೆ.

ಡಿಎಂಕೆ ಹೀನಾಯವಾಗಿ ಸೋತು, ಕರುಣಾನಿಧಿ ಅವರ ಮಗ ಹಾಗೂ ಹಾಲಿ ಸಿಎಂ ಎಂ.ಕೆ. ಸ್ಟಾಲಿನ್ ಕೂಡ ಪರಾಭವಗೊಂಡ ಬೆನ್ನಲ್ಲೇ ಈ ಹಳೆ ಫೋಟೋ ಹೆಚ್ಚು ಸದ್ದು ಮಾಡುತ್ತಿದೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದ ಜೊತೆ ಅವರು ಬರೆದ ಮಾತುಗಳು ಕೂಡ ಗಮನ ಸೆಳೆಯುತ್ತಿವೆ. 'ತನ್ನ ಹಿಂದೆ ನಿಂತಿರುವ ಈ ಹುಡುಗ, ಒಂದು ದಿನ ತನ್ನ ಪಕ್ಷವನ್ನೇ ಮುಗಿಸುತ್ತಾನೆ ಎಂದು ಕಲೈನಾರ್ ಕನಸಿನಲ್ಲೂ ಊಹಿಸಿರಲಿಲ್ಲ' ಎಂದು ರಾಮ್ ಗೋಪಾಲ್ ವರ್ಮಾ ಬರೆದುಕೊಂಡಿದ್ದಾರೆ.

ಮ್ಯಾಜಿಕ್ ನಡೆಯಲಿದೆ

ಇತ್ತ, ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿರುವ ವಿಜಯ್, ಮುಖ್ಯಮಂತ್ರಿ ಪಟ್ಟಕ್ಕೇರಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಮುನ್ನ, TVK ಶಾಸಕಾಂಗ ಪಕ್ಷದ ನಾಯಕರಾಗಿ ವಿಜಯ್ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ಶಾಸಕರ ಸಭೆಯಲ್ಲಿ ವಿಜಯ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. 'ಒಂದು ಮ್ಯಾಜಿಕ್ ನಡೆಯಲಿದೆ' ಎಂದು TVK ಶಾಸಕ ವಿ.ಎನ್.ಎಸ್. ಮುಸ್ತಫಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ರಾಜ್ಯಪಾಲರು ನಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸಿದರೆ, ವಿಜಯ್ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆ 130-135ಕ್ಕೆ ಏರಲಿದೆ' ಎಂದು ಅವರು ಏಷ್ಯಾನೆಟ್ ನ್ಯೂಸ್‌ಗೆ ತಿಳಿಸಿದ್ದಾರೆ. 'ಸರ್ಕಾರ ರಚಿಸಲು ಸಾಧ್ಯವಿದೆ, ಈ ವಾರವೇ ವಿಜಯ್ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ' ಎಂದು ಕಂಬಂ ಕ್ಷೇತ್ರದ ನೂತನ ಶಾಸಕ ಜಗನ್ನಾಥ್ ಮಿಶ್ರಾ ಏಷ್ಯಾನೆಟ್ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ನಡುವೆ, ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.