ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊಣಿದೇಲಾ ಎರಡನೇ ಗರ್ಭಧಾರಣೆ ಬಳಿಕ ಎದುರಿಸಿದ ಪೋಸ್ಟ್ಪಾರ್ಟಮ್ ಡಿಪ್ರೆಶನ್ ಮತ್ತು ಮಾನಸಿಕ ಸಂಕಷ್ಟದ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊಣಿದೇಲಾ ಉದ್ಯಮಿಯಾಗಿ ಮಾತ್ರವಲ್ಲದೆ, ಸಾಮಾಜಿಕ ಕಾಳಜಿಯ ವಿಚಾರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ತಮ್ಮ ಎರಡನೇ ಗರ್ಭಧಾರಣೆಯ ಅನುಭವದ ಬಗ್ಗೆ ಮಾತನಾಡಿರುವ ಅವರು, ಆ ಸಮಯದಲ್ಲಿ ಎದುರಿಸಿದ ಮಾನಸಿಕ ಸಂಕಷ್ಟಗಳನ್ನು ನೆನೆದು ಭಾವುಕರಾಗಿದ್ದಾರೆ. ಎರಡನೇ ಪ್ರೆಗ್ನೆನ್ಸಿ ಬಳಿಕ ಪ್ರಸವಾನಂತರದ ಖಿನ್ನತೆ (ಪೋಸ್ಟ್ಪಾರ್ಟಮ್ ಡಿಪ್ರೆಶನ್) ತಮ್ಮನ್ನು ತೀವ್ರವಾಗಿ ಕಾಡಿತ್ತು ಎಂದು ಹೇಳಿಕೊಂಡಿರುವ ಉಪಾಸನಾ, ಆ ನೋವಿನಿಂದ ಈಗಲೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಎರಡು ಗರ್ಭಧಾರಣೆಯ ಅನುಭವಗಳನ್ನು ಹಂಚಿಕೊಂಡ ಉಪಾಸನಾ, ಆ ಸಂದರ್ಭದಲ್ಲಿ ಬೆಂಬಲವಾಗಿ ನಿಂತ ವೈದ್ಯರಾದ ಡಾ. ಸುಮನಾ ಮತ್ತು ಡಾ. ನಮಿತಾ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಮಹಿಳೆಯರು ಎದುರಿಸುವ ಮಾನಸಿಕ ಆರೋಗ್ಯದ ಸವಾಲುಗಳ ಬಗ್ಗೆಯೂ ಮಾತನಾಡಿ, ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಮೊದಲ ಗರ್ಭಧಾರಣೆಯ ಸಂದರ್ಭದಲ್ಲಿ ಡಾ. ಸುಮನಾ ತಮಗೆ ನೀಡಿದ ಕಾಳಜಿಯನ್ನು ಉಪಾಸನಾ ನೆನಪಿಸಿಕೊಂಡಿದ್ದಾರೆ. ತಾವು ಲಾಸ್ ಏಂಜಲೀಸ್ಗೆ ಪ್ರಯಾಣಿಸುತ್ತಿದ್ದಾಗ ವೈದ್ಯರು ಸಾಕಷ್ಟು ಆತಂಕಗೊಂಡಿದ್ದರು. ತಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಬಳಿಕವಷ್ಟೇ ಅವರು ನಿರಾಳರಾಗಿದ್ದರು ಎಂದು ಹೇಳಿದ್ದಾರೆ.
ಕಷ್ಟದ ದಿನಗಳನ್ನು ತಂದೊಡ್ಡಿತ್ತು
ಆದರೆ ಎರಡನೇ ಗರ್ಭಧಾರಣೆಯ ಅನುಭವ ಮಾತ್ರ ಮೊದಲಿನಂತಿರಲಿಲ್ಲ. ಅದು ತಮಗೆ ಸಾಕಷ್ಟು ಕಷ್ಟದ ದಿನಗಳನ್ನು ತಂದೊಡ್ಡಿತ್ತು ಎಂದು ಉಪಾಸನಾ ಭಾವುಕರಾಗಿ ಹೇಳಿದ್ದಾರೆ. 'ನನ್ನ ಎರಡನೇ ಪ್ರೆಗ್ನೆನ್ಸಿ ತುಂಬಾ ವಿಶೇಷವಾಗಿತ್ತು. ಅದರ ಬಗ್ಗೆ ಈಗ ಮಾತನಾಡುವುದೇ ನನಗೆ ಕಷ್ಟವಾಗುತ್ತಿದೆ. ಈ ನಗುವಿನ ಮುಖದ ಹಿಂದೆ, ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಒಬ್ಬ ತಾಯಿ ಇದ್ದಾಳೆ' ಎಂದು ಕಣ್ಣೀರಿಟ್ಟಿದ್ದಾರೆ. ಆ ನೋವಿನಿಂದ ತಾವು ಇಂದಿಗೂ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವುದಾಗಿ ತಿಳಿಸಿದ್ದಾರೆ.
ಈ ಅನುಭವದಿಂದ ತಾವು ಕಲಿತ ಪ್ರಮುಖ ಪಾಠವೆಂದರೆ, ಪೋಷಕರು ತಮ್ಮ ಸಮಸ್ಯೆಗಳನ್ನು ಮನಸ್ಸಿನಲ್ಲೇ ಮುಚ್ಚಿಟ್ಟುಕೊಳ್ಳದೆ, ಅಗತ್ಯವಿದ್ದಾಗ ಇತರರ ಸಹಾಯವನ್ನು ಕೇಳಬೇಕು ಎಂಬುದು ಎಂದು ಉಪಾಸನಾ ಹೇಳಿದ್ದಾರೆ. ಗರ್ಭಧಾರಣೆಯ ಪ್ರಯಾಣ ಕೇವಲ ಒಂಬತ್ತು ತಿಂಗಳಿಗೆ ಸೀಮಿತವಾಗಿಲ್ಲ. ಅದಕ್ಕೂ ಮುನ್ನದ ಸಿದ್ಧತೆಯ ಹಂತವೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒತ್ತಡ ಮತ್ತು ಆತಂಕ
ಗರ್ಭಧಾರಣೆಗೆ ಪ್ರಯತ್ನಿಸುವ ಸಮಯದಲ್ಲೇ ಮಹಿಳೆಯರು ಸಾಕಷ್ಟು ಮಾನಸಿಕ ಒತ್ತಡ ಮತ್ತು ಆತಂಕವನ್ನು ಎದುರಿಸುತ್ತಾರೆ. ಸಹಜವಾಗಿ ಗರ್ಭಧಾರಣೆಗೆ ಪ್ರಯತ್ನಿಸುತ್ತಿರಲಿ ಅಥವಾ ಫರ್ಟಿಲಿಟಿ ಚಿಕಿತ್ಸೆಯ ಮೂಲಕ ಮಗು ಪಡೆಯಲು ಬಯಸುತ್ತಿರಲಿ, ಈ ಹಂತದ ಭಾವನಾತ್ಮಕ ಸವಾಲುಗಳ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
'ಪ್ರೆಗ್ನೆನ್ಸಿ ಟೆಸ್ಟ್ ಪಾಸಿಟಿವ್ ಆಗುವುದು, ಮುಟ್ಟಾಗದೆ ಇರುವುದು ಸಂಭ್ರಮದ ಕ್ಷಣಗಳು. ಆದರೆ ಆ ಸಮಯದಲ್ಲಿ ಪೀರಿಯಡ್ಸ್ ಬಂದರೆ, ಒಂದು ಕ್ಷಣ ಹೃದಯವೇ ನಿಂತುಹೋದ ಅನುಭವವಾಗುತ್ತದೆ' ಎಂದು ಆ ದಿನಗಳ ಮಾನಸಿಕ ಒತ್ತಡವನ್ನು ವಿವರಿಸಿದ್ದಾರೆ. ಗರ್ಭಧಾರಣೆಗೆ ಮುನ್ನದ ಈ ಹಂತ ಮಹಿಳೆಯರಿಗೆ ಎಷ್ಟು ಆತಂಕ ಉಂಟುಮಾಡಬಹುದು ಎಂಬುದನ್ನು ತಮ್ಮ ಅನುಭವದ ಮೂಲಕ ಹಂಚಿಕೊಂಡಿದ್ದಾರೆ.
ಪ್ರಸವಾನಂತರದ ಖಿನ್ನತೆ
ಇದೇ ವೇಳೆ, ಹೆರಿಗೆಯ ನಂತರದ ಮೊದಲ ಮೂರು ತಿಂಗಳ ಅವಧಿಯನ್ನು ಒಳಗೊಂಡ ‘ನಾಲ್ಕನೇ ತ್ರೈಮಾಸಿಕ’ದ (ಫೋರ್ತ್ ಟ್ರೈಮೆಸ್ಟರ್) ಮಹತ್ವವನ್ನೂ ಉಪಾಸನಾ ವಿವರಿಸಿದ್ದಾರೆ. ಮಗುವಿನ ಜನನದ ಬಳಿಕ ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವುದು ಅತ್ಯಂತ ಅಗತ್ಯ ಎಂದಿದ್ದಾರೆ. ತಮ್ಮ ಮೊದಲ ಗರ್ಭಧಾರಣೆಯಲ್ಲಿ ಇಂತಹ ಅನುಭವ ಇರಲಿಲ್ಲ. ಆದರೆ ಅವಳಿ ಮಕ್ಕಳ ಜನನದ ಬಳಿಕ ಎರಡನೇ ಗರ್ಭಧಾರಣೆಯ ಸಂದರ್ಭದಲ್ಲಿ ಪ್ರಸವಾನಂತರದ ಖಿನ್ನತೆ ತಮ್ಮನ್ನು ತೀವ್ರವಾಗಿ ಬಾಧಿಸಿತು ಎಂದು ತಿಳಿಸಿದ್ದಾರೆ.
'ಒಬ್ಬ ತಾಯಿಯಾಗಿ ನಾನು ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ' ಎಂದು ಹೇಳುವ ಮೂಲಕ ತಮ್ಮ ಮನದ ನೋವನ್ನು ಹೊರಹಾಕಿದ್ದಾರೆ. ಈ ಕಠಿಣ ಸಮಯದಲ್ಲಿ ಜೊತೆಯಾಗಿ ನಿಂತ ವೈದ್ಯರು ಹಾಗೂ ತಮ್ಮ ಇಡೀ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಕೊನೆಯಲ್ಲಿ, ಹೆರಿಗೆಯ ನಂತರದ ನಾಲ್ಕನೇ ತ್ರೈಮಾಸಿಕದಲ್ಲಿ ತಾಯಂದಿರಿಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಉಪಾಸನಾ ಮನವಿ ಮಾಡಿದ್ದಾರೆ. ಅವರಿಗೆ ಅಗತ್ಯವಿರುವ ಮಾನಸಿಕ ಮತ್ತು ದೈಹಿಕ ಬೆಂಬಲವನ್ನು ಕುಟುಂಬದವರು ಹಾಗೂ ಸುತ್ತಮುತ್ತಲಿನವರು ಒದಗಿಸಬೇಕು ಎಂದು ಹೇಳಿದ್ದಾರೆ. ತಾಯ್ತನದ ಸುಂದರ ಕ್ಷಣಗಳ ಜೊತೆಗೆ ಅದರ ಹಿಂದೆ ಅಡಗಿರುವ ನೋವು, ಆತಂಕ ಮತ್ತು ಮಾನಸಿಕ ಸವಾಲುಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಬೇಕು ಎಂಬ ಸಂದೇಶವನ್ನು ತಮ್ಮ ಅನುಭವದ ಮೂಲಕ ನೀಡಿದ್ದಾರೆ.
















