ಪ್ರಭಾಸ್ ನಟನೆಯ, ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಛತ್ರಪತಿ’ ಸಿನಿಮಾ 20 ವರ್ಷಗಳ ಬಳಿಕ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ರೀ-ರಿಲೀಸ್ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿಮಾ ಇದೇ ತಿಂಗಳ 23ರಂದು ಮರುಬಿಡುಗಡೆಯಾಗಲಿದೆ.
ಈಗ ಎಲ್ಲಾ ಭಾಷೆಯ ಸಿನಿಮಾರಂಗದಲ್ಲೂ ರೀ-ರಿಲೀಸ್ ಟ್ರೆಂಡ್ ಜೋರಾಗಿದೆ. ಬಾಲಿವುಡ್‌ನಿಂದ ಹಿಡಿದು ಸೌತ್ ಸಿನಿಮಾಗಳವರೆಗೂ ಹಳೆಯ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರುತ್ತಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂನಲ್ಲಿ 'ತೇನ್ಮಾವಿನ್ ಕೊಂಬತ್' ಸಿನಿಮಾ ರೀ-ರಿಲೀಸ್ ಆಗಿತ್ತು. ಈಗ ಟಾಲಿವುಡ್‌ನಿಂದಲೂ ಒಂದು ದೊಡ್ಡ ಸಿನಿಮಾ ಇದೇ ರೀತಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ.
ಪ್ರಭಾಸ್ ನಾಯಕನಾಗಿ ನಟಿಸಿ, ಎಸ್.ಎಸ್. ರಾಜಮೌಳಿ ನಿರ್ದೇಶನ ಮಾಡಿದ್ದ 'ಛತ್ರಪತಿ' ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. 2005ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಬರೋಬ್ಬರಿ 20 ವರ್ಷಗಳ ಬಳಿಕ ಚಿತ್ರತಂಡ ಈ ಸಿನಿಮಾವನ್ನು ಮತ್ತೆ ಥಿಯೇಟರ್‌ಗೆ ತರುತ್ತಿದೆ. ಇದೇ ತಿಂಗಳ 23ರಂದು ಸಿನಿಮಾ ಗ್ರ್ಯಾಂಡ್ ಆಗಿ ರೀ-ರಿಲೀಸ್ ಆಗಲಿದೆ. ಇದಕ್ಕೂ ಮುನ್ನ ಚಿತ್ರತಂಡ ಒಂದು ಭರ್ಜರಿ ರೀ-ರಿಲೀಸ್ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಚಿತ್ರತಂಡ ರಿಲೀಸ್ ಮಾಡಿರುವ ಈ ಟ್ರೈಲರ್ 2.05 ನಿಮಿಷಗಳಷ್ಟಿದೆ. ಇದೊಂದು ಪಕ್ಕಾ ಆಕ್ಷನ್ ಡ್ರಾಮಾ ಸಿನಿಮಾ. ವಿ. ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಎಸ್.ಎಸ್. ರಾಜಮೌಳಿ ಚಿತ್ರಕಥೆ ಹೆಣೆದಿದ್ದು, ಎಂ. ರತ್ನಂ ಸಂಭಾಷಣೆ ಬರೆದಿದ್ದಾರೆ. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಅಡಿಯಲ್ಲಿ ಬಿ.ವಿ.ಎಸ್.ಎನ್. ಪ್ರಸಾದ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಪ್ರಭಾಸ್ ಜೊತೆಗೆ ಶ್ರಿಯಾ ಶರಣ್, ಭಾನುಪ್ರಿಯಾ, ಶಫಿ, ಪ್ರದೀಪ್ ರಾವತ್, ನರೇಂದ್ರ ಝಾ, ಸುಪ್ರೀತ್, ಕೋಟ ಶ್ರೀನಿವಾಸ ರಾವ್, ಅಜಯ್, ಕಮಲ್ ಕಾಮರಾಜು, ವೇಣು ಮಾಧವ್, ಜಯಪ್ರಕಾಶ್ ರೆಡ್ಡಿ, ಸೂರ್ಯ, ಸುಬ್ಬರಾಯ ಶರ್ಮಾ, ಶ್ರೀನಿವಾಸ ರೆಡ್ಡಿ, ಎಲ್.ಬಿ. ಶ್ರೀರಾಮ್, ಜೀವ, ಸ್ಟಂಟ್ ಸಿಲ್ವ, ಕರಾಟೆ ಕಲ್ಯಾಣಿ, ಶೇಖರ್, ಎಸ್.ಎಸ್. ಕಾಂಚಿ, ರಾಘವ, ವೈ. ವಿಜಯ, ಅನಿತಾ ಚೌಧರಿ, ಮುಮೈತ್ ಖಾನ್ ಹಾಗೂ ಆರತಿ ಅಗರ್ವಾಲ್ ಮುಂತಾದ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ.
ನಿರಾಶ್ರಿತನ ಪಾತ್ರದಲ್ಲಿ ಪ್ರಭಾಸ್
ಕೆ.ಕೆ. ಸೆಂಥಿಲ್ ಕುಮಾರ್ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಕೋತಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ ಹಾಗೂ ಎಂ.ಎಂ. ಕೀರವಾಣಿ ಅವರ ಸಂಗೀತ ಈ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಪ್ರಭಾಸ್ 'ಶಿವಾಜಿ' ಎಂಬ ಶ್ರೀಲಂಕಾ ನಿರಾಶ್ರಿತನ ಪಾತ್ರದಲ್ಲಿ ನಟಿಸಿದ್ದಾರೆ. 2005ರ ಸೆಪ್ಟೆಂಬರ್ 29ರಂದು ಥಿಯೇಟರ್‌ಗೆ ಬಂದಿದ್ದ ಈ ಸಿನಿಮಾ, ಆ ಕಾಲಕ್ಕೆ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈಗ ರೀ-ರಿಲೀಸ್‌ನಲ್ಲೂ ಪ್ರೇಕ್ಷಕರು ಈ ಸಿನಿಮಾವನ್ನು ಅಷ್ಟೇ ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ಚಿತ್ರತಂಡವಿದೆ.


