ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ರಾಮಾಯಣ’ ಕೇವಲ ಸಿನಿಮಾವಲ್ಲ, ಭಾರತೀಯ..
ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಎಪಿಕ್ ಸಿನಿಮಾ ‘ರಾಮಾಯಣ’ ಬಿಡುಗಡೆಗೆ ಸಜ್ಜಾಗಿದೆ. ದೀಪಾವಳಿ ಹಬ್ಬದ ಸಂಭ್ರಮದ ನಡುವೆ ನವೆಂಬರ್ 5ರಂದು ಚಿತ್ರದ ಮೊದಲ ಭಾಗ ವಿಶ್ವದಾದ್ಯಂತ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರತಂಡಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ‘ರಾಮಾಯಣ’ ಕೇವಲ ಒಂದು ಸಿನಿಮಾವಲ್ಲ, ಅದು ಭಾರತೀಯ ಸಂಸ್ಕೃತಿಯ ಪ್ರತಿರೂಪ ಎಂದು ಬಣ್ಣಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಾಗಿ ಮೂಡಿಬರುತ್ತಿರುವ ‘ರಾಮಾಯಣ’ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ನಮಿತ್ ಮಲ್ಹೋತ್ರಾ ಬೃಹತ್ ಬಜೆಟ್ನಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿದ್ದು, ಮೊದಲ ಭಾಗ ನವೆಂಬರ್ 5ರಂದು ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಮಹತ್ವದ ಪ್ರಯತ್ನ
ಈ ನಡುವೆ ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ‘ರಾಮಾಯಣ’ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿತ್ರದ ಮಹತ್ವವನ್ನು ಮೆಚ್ಚಿಕೊಂಡಿರುವ ಅವರು, ಇದು ಕೇವಲ ಮನರಂಜನೆಗೆ ಸೀಮಿತವಾದ ಸಿನಿಮಾವಲ್ಲ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಮಹತ್ವದ ಪ್ರಯತ್ನ ಎಂದು ಕೊಂಡಾಡಿದ್ದಾರೆ.
‘ರಾಮಾಯಣ’ ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಇದು ಕೇವಲ ಒಂದು ಸಿನಿಮಾವಲ್ಲ, ನಮ್ಮ ಸಂಸ್ಕೃತಿಯ ಪ್ರತಿರೂಪ. ಭಾರತೀಯ ಸಿನಿಮಾದ ಘನತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಅದ್ಭುತ ಪ್ರಯತ್ನವಿದು. ಇಂತಹ ದೈವಿಕ ಪ್ರಯತ್ನಕ್ಕೆ ಕೈಜೋಡಿಸಿರುವ ಇಡೀ ಚಿತ್ರತಂಡಕ್ಕೆ ನನ್ನ ಮನಃಪೂರ್ವಕ ಶುಭಾಶಯಗಳು. ನಮ್ಮ ಕಥೆಗಳು, ನಮ್ಮ ಸಂಸ್ಕೃತಿ ಹಾಗೂ ನಮ್ಮ ವೈಭವವನ್ನು ಪ್ರತಿಬಿಂಬಿಸುವ ಇಂತಹ ಮಹತ್ತರ ಪ್ರಯತ್ನಕ್ಕೆ ಬೆಂಬಲ ನೀಡಲು ನಾವೆಲ್ಲರೂ ಒಂದಾಗೋಣ. ಜೈ ಶ್ರೀರಾಮ್ ಎಂದು ಅಲ್ಲು ಅರ್ಜುನ್ ಪೋಸ್ಟ್ ಮಾಡಿದ್ದಾರೆ.
ಗಣ್ಯರಿಂದ ಮೆಚ್ಚುಗೆ
‘ರಾಮಾಯಣ’ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿದ್ದಾರೆ. ದಶರಥನ ಪಾತ್ರದಲ್ಲಿ ಅರುಣ್ ಗೋವಿಲ್, ಕೈಕೇಯಿಯಾಗಿ ಲಾರಾ ದತ್ತ, ಕೌಸಲ್ಯೆಯಾಗಿ ಇಂದಿರಾ ಕೃಷ್ಣನ್, ಸುಮಿತ್ರೆಯಾಗಿ ಸೋನಲ್ ಝಾ ಕಾಣಿಸಿಕೊಳ್ಳಲಿದ್ದಾರೆ. ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ, ಭರತನಾಗಿ ಆದಿನಾಥ್ ಕೊಠಾರೆ, ಶತ್ರುಘ್ನನಾಗಿ ನಿತೀಶ್ ಶರ್ಮಾ, ಮಂಡೋದರಿಯಾಗಿ ಕಾಜಲ್ ಅಗರ್ವಾಲ್, ಶೂರ್ಪಣಖಿಯಾಗಿ ರಕುಲ್ ಪ್ರೀತ್ ಸಿಂಗ್ ಹಾಗೂ ಶೂರ್ಪಣಖಿಯ ಪತಿ ವಿದ್ಯುಜ್ಜಿಹ್ವನಾಗಿ ವಿವೇಕ್ ಒಬೆರಾಯ್ ಅಭಿನಯಿಸಿದ್ದಾರೆ.
ಇನ್ನು ಭಾರತೀಯ ಮಹಾಕಾವ್ಯ ರಾಮಾಯಣವನ್ನು ಜಾಗತಿಕ ಮಟ್ಟದಲ್ಲಿ ತೆರೆಮೇಲೆ ಕಟ್ಟಿಕೊಡುವ ಪ್ರಯತ್ನಕ್ಕೆ ಈಗಾಗಲೇ ಸಿನಿರಂಗದ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಅಲ್ಲು ಅರ್ಜುನ್ ಅವರ ಶುಭಾಶಯದ ಪೋಸ್ಟ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ.






