ಕನ್ನಡ ಸಿನಿಮಾದಲ್ಲಿ ಹೊಸ ಭಾಷ್ಯ ನೀಡಿದ ಚಿತ್ರಗಳಲ್ಲಿ ಒಂದು ಮುತ್ತಿನ ಹಾರ. 35 ವರ್ಷಗಳ ಈ ಹಿಂದಿನ ಚಿತ್ರವನ್ನು ವಿಷ್ಣುವರ್ಧನ್​ ಅವರ ಅಭಿನಯದ ಮೂಲಕ ಮತ್ತೆ ನೆನೆಪಿಗೆ ತಂದಿದ್ದಾರೆ ನಿರ್ದೇಶಕ ತರುಣ್​ ಸುಧೀರ್​. ಇಲ್ಲಿದೆ ನೋಡಿ ವಿಡಿಯೋ. 

ಕನ್ನಡ ಸಿನಿಮಾದಲ್ಲಿ ಅಮೋಘ ಪ್ರಯೋಗ ಕಂಡ ಚಿತ್ರಗಳಲ್ಲಿ ಒಂದು ಬ್ಲಾಕ್​ಬಸ್ಟರ್​ ಸಿನಿಮಾ ಮುತ್ತಿನ ಹಾರ. 1990ರಲ್ಲಿ ತೆರೆಕಂಡ 'ಮುತ್ತಿನ ಹಾರ' ಸಿನಿಮಾಕ್ಕೆ ಕಳೆದ ಏಪ್ರಿಲ್​ನಲ್ಲಿ 35 ವರ್ಷ ತುಂಬಿದೆ. 'ಸಾಹಸ ಸಿಂಹ' ಡಾ. ವಿಷ್ಣುವರ್ಧನ್ ಮತ್ತು ಮೋಹಕ ತಾರೆ ಸುಹಾಸಿನಿ ನಟಿಸಿರುವ ಈ ಚಿತ್ರವನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿದ್ದರು. ಈ ಸಿನಿಮಾವನ್ನು ಕಲ್ಟ್ ಸಿನಿಮಾಗಳ ವಿಭಾಗಕ್ಕೆ ಸೇರಿಸಲಾಗುತ್ತದೆ. ಕೊಡಗು ಮೂಲದ ಹೀರೋ ಅಚ್ಚಪ್ಪ, ಗಡಿಯಲ್ಲಿ ಯೋಧನಾಗಿರುತ್ತಾನೆ. ಆತನ ಬದುಕಿನಲ್ಲಿ ಸಂಭವಿಸುವ ದುರಂತ ಕಥೆಯನ್ನು ಮುತ್ತಿನ ಹಾರದಲ್ಲಿ ನೋಡಬಹುದಾಗಿದೆ. ಒಬ್ಬ ಯೋಧನ ಜೀವನಕ್ರಮವನ್ನು ಅತ್ಯಂತ ಮನೋಜ್ಞವಾಗಿ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಕಾಶ್ಮೀರ, ರಾಜಸ್ಥಾನ ಹೀಗೆ ಅನೇಕ ಶೂಟಿಂಗ್ ಮಾಡಲಾಗಿತ್ತು. ಆಗಿನ ಕಾಲಕ್ಕೆ ಇದರ ಬಜೆಟ್ ಕೂಡ ದುಬಾರಿ ಎನಿಸಿತ್ತು. ಈ ಚಿತ್ರದ ಹಾಡುಗಳಲ್ಲಿ ಇಂದಿಗೂ ಎವರ್​ಗ್ರೀನ್​ ಎನ್ನಿಸಿರುವುದು ಮಡಿಕೇರಿ ಸಿಪಾಯಿ ಹಾಡು.

ಈ ಹಾಡನ್ನು ಈಗ ಮಹಾನಟಿ ವೇದಿಕೆಯಲ್ಲಿ ಪ್ರೇಮಾ ಮತ್ತು ತರುಣ್​ ಸುಧೀರ್​ ರೀಕ್ರಿಯೇಟ್​ ಮಾಡಿದ್ದಾರೆ. ಅಷ್ಟಕ್ಕೂ ವಿಷ್ಣುವರ್ಧನ್​ ಅವರ ನಟನೆ, ಅವರ ಡಾನ್ಸ್​, ಅವರ ಅಭಿನಯ ಎಲ್ಲವೂ ವಿಭಿನ್ನವಾಗಿತ್ತು. ಕೆಲವೊಂದು ಐಕಾನಿಕ್​ ಸ್ಟೈಲ್​ಗೆ ಅವರು ಹೆಸರುವಾಸಿಯಾಗಿದ್ದಾರೆ. ಅವರ ಒಂದಿಷ್ಟು ಚಿಕ್ಕ ಸ್ಟೈಲ್​ ಮಾಡಿದ್ರೂ ಸಾಕು, ಅದು ವಿಷ್ಣುದಾದಾ ಸ್ಟೈಲ್​ ಎಂದೇ ಎನ್ನಿಸಿಕೊಳ್ಳುತ್ತದೆ. ಹೀಗೆ ಅವರ ಸ್ಟೈಲ್​ನಲ್ಲಿಯೇ ಸೊಗಸಾಗಿ ವಿಷ್ಣುವರ್ಧನ್​ ಅವರ ಅಭಿನಯವನ್ನು ಮಡಿಕೇರಿ ಸಿಪಾಯಿ ಹಾಡಿಗೆ ಕಟ್ಟಿಕೊಟ್ಟಿದ್ದಾರೆ ನಟ, ನಿರ್ದೇಶಕ ತರುಣ್​ ಸುಧೀರ್​. ನಟಿ ಅದೇ ರೀತಿ ನಟಿ ಪ್ರೇಮಾ ಅವರಿಗೆ ಈಗ ವಯಸ್ಸು 48 ಆಗಿದ್ದರೂ ಡಾನ್ಸ್​, ಅಭಿನಯದಲ್ಲಿ ಇನ್ನೂ ಅದೇ ಸೊಗಸನ್ನು, ಅದೇ ಚೈತನ್ಯವನ್ನು ಉಳಿಸಿಕೊಂಡವರು. ಅವರು ಸುಹಾನಿಸಿಯಾಗಿ ಈ ಹಾಡಿಗೆ ಸ್ಟೆಪ್​ ಹಾಕಿದ್ದಾರೆ.

ಆದರೆ, ಇಲ್ಲಿ ಪ್ರೇಮಾ ಅವರಿಗಿಂತಲೂ ನೆಟ್ಟಿಗರ ಮನಗೆದ್ದಿದ್ದು, ತರುಣ್​ ಸುಧೀರ್​ ಅವರು ವಿಷ್ಣುವರ್ಧನ್​ ಆಗಿ ಸ್ಟೆಪ್​ ಹಾಕಿದ್ದು. ಅದರಲ್ಲಿಯೂ ವಿಷ್ಣುವರ್ಧನ್​ ಅವರ ಅಭಿಮಾನಿಗಳು ತರುಣ್​ ಸುಧೀರ್​ ಅವರ ನಟನೆಗೆ ಫಿದಾ ಆಗಿದ್ದು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇನ್ನು ಈ ಸಿನಿಮಾದ ಕುರಿತು ಹೇಳುವುದಾದರೆ, ಇದು ಹಲವು ವಿಶೇಷತೆಗಳಿಂದ ಕೂಡಿದೆ. ಕೊಡವ ಭಾಷೆಯಲ್ಲಿ ಒಂದು ಹಾಡನ್ನು ಮಾಡಿದ್ದು ಒಂದು ವಿಶೇಷ. 'ದೇವರು ಹೊಸೆದ ಪ್ರೇಮದ ದಾರ' ಎಂಬ ಹಾಡು ಎಲ್ಲರ ಮನದಲ್ಲಿ ಇಂದಿಗೂ ಹಚ್ಚ ಹಸಿರಾಗಿಯೇ ನೆಲೆಸಿದೆ. ಈ ಹಾಡನ್ನು ಎಂ. ಬಾಲಮುರಳಿಕೃಷ್ಣ ಅವರಿಂದ ಹಾಡಿಸಿದ್ದು ಮತ್ತೊಂದು ವಿಶೇಷ. ಅಸಲಿಗೆ, ಆರಂಭದಲ್ಲಿ ಈ ಹಾಡನ್ನು ಹಾಡುವುದಕ್ಕೆ ಬಾಲಮುರಳಿಕೃಷ್ಣ ಒಪ್ಪಿರಲಿಲ್ಲ. ಕೊನೆಗೆ ಹಾಗೋ ಹೀಗೋ ಮಾಡಿ ಅವರನ್ನು ಒಪ್ಪಿಸಿದ್ದರು ಹಂಸಲೇಖ ಮತ್ತು ಸಿಂಗ್ ಬಾಬು ಎನ್ನಲಾಗಿದೆ.

ಮುತ್ತಿನ ಹಾರದ ಕುರಿತು ಇನ್ನೂ ರೋಚಕ ಸಂಗತಿ ಏನೆಂದರೆ, ಕಾಶ್ಮೀರದಲ್ಲಿಯೂ ಇದರ ಶೂಟಿಂಗ್​ ನಡೆದಿತ್ತು. ಅಂದಿನ ಕಾಶ್ಮೀರ ಹೇಗಿತ್ತು ಎನ್ನುವುದು ಗೊತ್ತೇ ಇದೆ. ಅಲ್ಲಿ ಈಗಿನಂತೆ ಶೂಟಿಂಗ್​ ಮಾಡುವುದು ಸುಲಭವಾಗಿರಲಿಲ್ಲ. ಅಲ್ಲಿಯೂ ತುಂಬಾ ರಿಸ್ಕ್‌ಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗಿತ್ತು. ಅದಕ್ಕಾಗಿ ಅಪಾರ ಹಣವನ್ನು ತೆರಲಾಗಿತ್ತು. ಉನ್ನತ ಅಧಿಕಾರಿಗಳ ಅನುಮತಿ ಪಡೆಯುವುದು ಕೂಡ ರಿಸ್ಕಿ ಕೆಲಸವೇ ಆಗಿತ್ತು. ವಿಷ್ಣುವರ್ಧನ್​ ಅವವರು ಪ್ಯಾರಾಶೂಟ್ ಬಳಸಿ ಮಾಡಿದ್ದ ಸ್ಟಂಟ್‌ವೊಂದು ಸರಿಯಾಗಿ ಆಗದೇ ಇದ್ದಿದ್ದರಿಂದ ಅವರ ಬೆನ್ನಿಗೆ ಪಟ್ಟಾಗಿರುವ ಘಟನೆಯೂ ಈ ಚಿತ್ರದ ಶೂಟಿಂಗ್​ ವೇಳೆ ನಡೆದಿದೆ. ಇಷ್ಟೆಲ್ಲಾ ರಿಸ್ಕ್‌ಗಳೊಂದಿಗೆ ಮುತ್ತಿನ ಹಾರ ಸಿನಿಮಾ ರಿಲೀಸ್​​ ಆಗಿ ಹೊಸ ದಾಖಲೆಯನ್ನೇ ಬರೆದಿತ್ತು.

View post on Instagram