ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಕರ್ನಾಟಕದಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಮೊದಲ 18 ದಿನಗಳಲ್ಲಿ ಚಿತ್ರದ ಕನ್ನಡ ಆವೃತ್ತಿ ₹9.54..
ದಶಕಗಳಿಂದ ಕರ್ನಾಟಕದ ಚಿತ್ರಮಂದಿರಗಳ ಮಾರುಕಟ್ಟೆಯಲ್ಲಿ ಪರಭಾಷಾ ಸಿನಿಮಾಗಳ ಮೂಲ ಆವೃತ್ತಿಗಳಿಗೇ ಹೆಚ್ಚಿನ ಆದ್ಯತೆ ಸಿಗುತ್ತಿತ್ತು. ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕನ್ನಡಿಗರು ಮೂಲ ಭಾಷೆಯಲ್ಲೇ ವೀಕ್ಷಿಸುತ್ತಿದ್ದರು. ಆದರೆ ಇದೇ ಸಿನಿಮಾಗಳ ಕನ್ನಡ ಡಬ್ಬಿಂಗ್ ಆವೃತ್ತಿಗಳು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದು ವಿರಳ. ಇದೀಗ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಈ ಟ್ರೆಂಡ್ಗೆ ಹೊಸ ತಿರುವು ನೀಡಿದೆ.
ಕನ್ನಡ ಡಬ್ಬಿಂಗ್ ಆವೃತ್ತಿಯ ಗಳಿಕೆಯಲ್ಲಿ ‘ಜೈಲರ್ 2’ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಮೊದಲ 18 ದಿನಗಳಲ್ಲೇ ಚಿತ್ರದ ಕನ್ನಡ ಆವೃತ್ತಿ ಬರೋಬ್ಬರಿ ₹9.54 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಭಾರತದಲ್ಲಿ ಇದರ ನೆಟ್ ಗಳಿಕೆ ಅಂದಾಜು ₹7.60ರಿಂದ ₹7.77 ಕೋಟಿ ಎಂದು ವರದಿಯಾಗಿದೆ.
ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ
ಈ ಮೂಲಕ ಈ ಹಿಂದೆ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2: ದಿ ರೂಲ್’ ಹೆಸರಿನಲ್ಲಿದ್ದ ದಾಖಲೆಯನ್ನು ‘ಜೈಲರ್ 2’ ಹಿಂದಿಕ್ಕಿದೆ. ‘ಪುಷ್ಪ 2’ ಚಿತ್ರದ ಕನ್ನಡ ಡಬ್ಬಿಂಗ್ ಆವೃತ್ತಿ ಸುಮಾರು ₹9.35 ಕೋಟಿ ಗ್ರಾಸ್ ಗಳಿಕೆ ಮಾಡಿತ್ತು ಎನ್ನಲಾಗಿದೆ. ಇದೀಗ ಆ ದಾಖಲೆಯನ್ನು ಮುರಿದಿರುವ ‘ಜೈಲರ್ 2’, ಕರ್ನಾಟಕದಲ್ಲಿ ಬಿಡುಗಡೆಯಾದ ಪರಭಾಷಾ ಸಿನಿಮಾಗಳ ಕನ್ನಡ ಡಬ್ಬಿಂಗ್ ಆವೃತ್ತಿಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಚಿತ್ರದ ಯಶಸ್ಸಿನ ಮತ್ತೊಂದು ವಿಶೇಷವೆಂದರೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಕನ್ನಡ ಆವೃತ್ತಿಗೆ ಸಿಕ್ಕಿರುವ ಪ್ರತಿಕ್ರಿಯೆ. ಮೂಲ ತಮಿಳು ಆವೃತ್ತಿಯೇ ಚಿತ್ರದ ಒಟ್ಟು ಗಳಿಕೆಯಲ್ಲಿ ಸಿಂಹಪಾಲು ಹೊಂದಿದ್ದರೂ, ಕನ್ನಡ ಡಬ್ಬಿಂಗ್ ಆವೃತ್ತಿಯೂ ಉತ್ತಮ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಹಳೇ ಮೈಸೂರು, ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರೇಕ್ಷಕ ಬೆಂಬಲ ದೊರೆತಿದೆ.
ಅತಿಥಿ ಪಾತ್ರದಲ್ಲಿ ಶಿವಣ್ಣ
ಎಲ್ಲ ಭಾಷೆಗಳ ಆವೃತ್ತಿಗಳನ್ನು ಸೇರಿಸಿದರೆ ಕರ್ನಾಟಕವೊಂದರಲ್ಲೇ ‘ಜೈಲರ್ 2’ ಚಿತ್ರದ ಒಟ್ಟು ಗಳಿಕೆ ₹88 ಕೋಟಿಯ ಗಡಿ ದಾಟಿದೆ ಎನ್ನಲಾಗಿದೆ. ರಜನಿಕಾಂತ್ ಅವರ ಸ್ಟಾರ್ಡಮ್ ಜೊತೆಗೆ, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದೂ ಚಿತ್ರದ ಮೇಲಿನ ನಿರೀಕ್ಷೆ ಮತ್ತು ಆಕರ್ಷಣೆಯನ್ನು ಹೆಚ್ಚಿಸಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ಮೆಚ್ಚುಗೆ ಹಾಗೂ ಉತ್ತಮ ಮೌತ್ ಟಾಕ್ನಿಂದಾಗಿ ಮೂರನೇ ವಾರದಲ್ಲೂ ಕನ್ನಡ ಆವೃತ್ತಿಯ ಪ್ರದರ್ಶನದ ಓಟ ಮುಂದುವರಿದಿದೆ. ಕರ್ನಾಟಕ ಮಾತ್ರವಲ್ಲದೆ ಜಾಗತಿಕ ಬಾಕ್ಸ್ ಆಫೀಸ್ನಲ್ಲೂ ‘ಜೈಲರ್ 2’ ಭರ್ಜರಿ ಪ್ರದರ್ಶನ ನೀಡಿದೆ. ಚಿತ್ರದ ವಿಶ್ವಾದ್ಯಂತ ಗಳಿಕೆ ₹812 ಕೋಟಿ ತಲುಪಿದ್ದು, ₹800 ಕೋಟಿ ಕ್ಲಬ್ಗೆ ಸೇರ್ಪಡೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ‘ಪುಷ್ಪ 2’ ದಾಖಲೆಯನ್ನು ಹಿಂದಿಕ್ಕಿ ‘ಜೈಲರ್ 2’ ಕನ್ನಡ ಡಬ್ಬಿಂಗ್ ಆವೃತ್ತಿ ನಿರ್ಮಿಸಿರುವ ಈ ಸಾಧನೆ ಕನ್ನಡ ಚಿತ್ರಮಾರುಕಟ್ಟೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಪರಭಾಷಾ ಸಿನಿಮಾಗಳನ್ನು ಕನ್ನಡದಲ್ಲೇ ನೋಡುವ ಪ್ರೇಕ್ಷಕರ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಉತ್ತಮ ಕಥೆ, ಜನಪ್ರಿಯ ತಾರಾಬಳಗ ಮತ್ತು ಅದ್ದೂರಿ ಚಿತ್ರಮಂದಿರದ ಅನುಭವವಿದ್ದರೆ ಕನ್ನಡ ಡಬ್ಬಿಂಗ್ ಸಿನಿಮಾಗಳಿಗೂ ದೊಡ್ಡ ಮಟ್ಟದ ಯಶಸ್ಸು ಸಿಗಬಹುದು ಎಂಬುದನ್ನು ರಜನಿಕಾಂತ್ ಅವರ ‘ಜೈಲರ್ 2’ ಮತ್ತೊಮ್ಮೆ ಸಾಬೀತುಪಡಿಸಿದೆ.






