2013ರಲ್ಲಿ ಮಮ್ಮುಟ್ಟಿಯನ್ನು ಒರಟ ಎಂದು ಭಾವಿಸಿದ್ದ ಧನುಷ್, 'ಓಂ: ಚಾಪ್ಟರ್ 1' ಚಿತ್ರಕ್ಕಾಗಿ ಮತ್ತೆ ಒಂದಾದ ಬಳಿಕ ಅವರ ಸರಳತೆ, ವಿನಯ ಮತ್ತು ಹಾಸ್ಯಪ್ರಜ್ಞೆಯನ್ನು ಹೊಗಳಿದ್ದಾರೆ. ಧನುಷ್-ಮಮ್ಮುಟ್ಟಿ ಜೋಡಿಯ ಟ್ರೇಲರ್ ಕೂಡ ಗಮನ ಸೆಳೆದಿದೆ.
2013ರಲ್ಲಿ ಮಮ್ಮುಟ್ಟಿ ಅವರೊಂದಿಗೆ ಕೆಲಸ ಮಾಡಿದ್ದ ನಟ ಧನುಷ್, ಆರಂಭದಲ್ಲಿ ಅವರನ್ನು 'ಒರಟ' ಎಂದು ಭಾವಿಸಿದ್ದಾಗಿ ಹೇಳಿದ್ದಾರೆ. ಆದರೆ, ಈಗ 'ಓಂ: ಚಾಪ್ಟರ್ 1' ಚಿತ್ರಕ್ಕಾಗಿ ಮತ್ತೆ ಒಂದಾಗಿರುವುದು ಮಮ್ಮುಟ್ಟಿ ಬಗ್ಗೆ ಅವರ ಅಭಿಪ್ರಾಯವನ್ನು ಬದಲಿಸಿದೆ. 2013ರಲ್ಲಿ ತೆರೆಕಂಡ ಮಲಯಾಳಂ ಕಾಮಿಡಿ 'ಕಮ್ಮತ್ ಆಂಡ್ ಕಮ್ಮತ್' ಚಿತ್ರದಲ್ಲಿ ಕೆಲಕಾಲ ಒಟ್ಟಿಗೆ ಕೆಲಸ ಮಾಡಿದ ನಂತರ, ಮಮ್ಮುಟ್ಟಿ 'ಒರಟ' ಎಂದು ತಾನು ಈ ಹಿಂದೆ ಭಾವಿಸಿದ್ದಾಗಿ ಧನುಷ್ ಹೇಳಿದ್ದಾರೆ.
ಒಂದು ದಶಕದ ಬಳಿಕ 'ಓಂ: ಚಾಪ್ಟರ್ 1' (OM: Chapter One) ಚಿತ್ರಕ್ಕಾಗಿ ಅವರಿಬ್ಬರು ಮತ್ತೆ ಒಂದಾಗಿದ್ದು, ಅನುಭವಿ ನಟನ ಜೊತೆ ಕಾಲ ಕಳೆಯಲು ಧನುಷ್ಗೆ ಅವಕಾಶ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಅವರ ಅಭಿಪ್ರಾಯ ಬದಲಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಧನುಷ್, ಮಮ್ಮುಟ್ಟಿಯವರನ್ನು ಒಳ್ಳೆಯ, ವಿನಮ್ರ ಮತ್ತು ಸರಳ ವ್ಯಕ್ತಿ ಎಂದು ಹೊಗಳಿದ್ದಾರೆ. ಅವರ ಹಾಸ್ಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ನವೆಂಬರ್ 20 ರಂದು ಬಿಡುಗಡೆಯಾಗಲಿರುವ 'ಓಂ - ಚಾಪ್ಟರ್ 1: ಉದಿರಂ - ದಿ ಬ್ಲಡ್ ವುಡ್' ಚಿತ್ರದ ಮೂರು ನಿಮಿಷಗಳ ಟ್ರೇಲರ್ನೊಂದಿಗೆ ಇಬ್ಬರ ಕಾಂಬಿನೇಷನ್ ಗಮನ ಸೆಳೆದಿದೆ.
ಮಮ್ಮುಟ್ಟಿಯವರು ಇತರರ ಪ್ರಶ್ನೆಗೆ ಪ್ರತಿಕ್ರಿಯಿಸುವ ವಿಶಿಷ್ಟ ಶೈಲಿಯ ಬಗ್ಗೆ ಧನುಷ್ ಮಾತನಾಡಿದ್ದಾರೆ. ಸಿನೆಮಾ ಎಕ್ಸ್ಪ್ರೆಸ್ ವರದಿ ಪ್ರಕಾರ, "ಮಮ್ಮುಟ್ಟಿ ಸರ್ ಎಂದರೆ 'ಥಗ್ ಲೈಫ್', 'ಥಗ್ ಲೈಫ್' ಎಂದರೆ ಮಮ್ಮುಟ್ಟಿ ಸರ್" ಎಂದು ಹೇಳಿದ್ದಾರೆ. ಒಮ್ಮೆ ಮಮ್ಮುಟ್ಟಿಯವರನ್ನು ಭೇಟಿಯಾದಾಗ, 'ಹೇಗಿದ್ದೀರಾ?' ಎಂದು ಕೇಳಿದಾಗ ಮೋಜಿನ ಸಂವಾದವನ್ನು ಧನುಷ್ ನೆನಪಿಸಿಕೊಂಡರು. ನೇರವಾಗಿ ಉತ್ತರಿಸುವ ಬದಲು, ಮಮ್ಮುಟ್ಟಿ ಮತ್ತೊಂದು ಪ್ರಶ್ನೆ ಕೇಳಿದರು.
"ನಾನು ಒಮ್ಮೆ ಅವರನ್ನು 'ಹೇಗಿದ್ದೀರಾ ಸರ್?' ಎಂದು ಕೇಳಿದೆ. ಅದಕ್ಕೆ ಅವರು, 'ನಾನು ಹೇಗಿದ್ದೇನೆ ಎಂದು ನಿಮಗೆ ಅನ್ನಿಸುತ್ತಿದೆ?' ಎಂದರು. ನಾನು 'ನೀವು ಚೆನ್ನಾಗಿದ್ದೀರಿ' ಎಂದೆ. ಆಗ ಅವರು, 'ಹಾಗಾದರೆ ನಾನು ಚೆನ್ನಾಗಿಯೇ ಇದ್ದೇನೆ' ಎಂದರು," ಎಂದು ಧನುಷ್ ನೆನಪಿಸಿಕೊಂಡರು. ಈ ಮಾತುಕತೆ ಧನುಷ್ಗೆ ಮಮ್ಮುಟ್ಟಿ ವ್ಯಕ್ತಿತ್ವದ ಬಗ್ಗೆ ಕುತೂಹಲ ಮೂಡಿಸಿತು. ಅವರ ಹಾಸ್ಯಪ್ರಜ್ಞೆ ಮತ್ತು ಮಾತನಾಡುವ ಶೈಲಿಯನ್ನು ಅರ್ಥಮಾಡಿಕೊಳ್ಳಲು ಅವರ ಸಂದರ್ಶನಗಳನ್ನು ಗಮನಿಸಿದ್ದಾಗಿ ಧನುಷ್ ಹೇಳಿದ್ದಾರೆ.
ಧನುಷ್ ಮತ್ತು ಮಮ್ಮುಟ್ಟಿ ಮೊದಲು ತೆರೆ ಹಂಚಿಕೊಂಡಿದ್ದು 'ಕಮ್ಮತ್ ಆಂಡ್ ಕಮ್ಮತ್' ಚಿತ್ರದಲ್ಲಿ. ಇದರಲ್ಲಿ ದಿಲೀಪ್ ಕೂಡ ನಟಿಸಿದ್ದರು. ಆ ಚಿತ್ರದ ಮೂಲಕ ಧನುಷ್ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆದರೆ, ಅದು ಅತಿಥಿ ಪಾತ್ರವಾಗಿತ್ತು ಮತ್ತು ಮಮ್ಮುಟ್ಟಿ ಜೊತೆ ಕೇವಲ ಎರಡು ದಿನ ಮಾತ್ರ ಕೆಲಸ ಮಾಡಿದ್ದರು.
"ಅದಾದ ಮೇಲೆ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಗಲಿಲ್ಲ," ಎಂದು ಧನುಷ್ ಹೇಳಿದ್ದಾರೆ. "ಅದರ ನಂತರ ಈ ಚಿತ್ರಕ್ಕಾಗಿ ಅವರನ್ನು ಭೇಟಿಯಾದೆ. ಅವರನ್ನು ಭೇಟಿಯಾದ ಮೂರು ದಿನಗಳಲ್ಲಿ, ಅವರು ಎಷ್ಟೊಂದು ಒಳ್ಳೆಯ, ವಿನಮ್ರ, ಸರಳ ಮತ್ತು ಉದಾರ ವ್ಯಕ್ತಿ ಎಂಬುದು ನನಗೆ ಅರ್ಥವಾಯಿತು. ಅವರ ಹಾಸ್ಯಪ್ರಜ್ಞೆ ಅದ್ಭುತವಾಗಿದೆ," ಎಂದು ಅವರು ಹೇಳಿದರು.
ಟ್ರೇಲರ್ನಲ್ಲಿ ಧನುಷ್-ಮಮ್ಮುಟ್ಟಿ ಜೋಡಿ ಹೈಲೈಟ್
ಧನುಷ್, ಮಮ್ಮುಟ್ಟಿ ಮತ್ತು ಸಾಯಿ ಪಲ್ಲವಿ ನಟನೆಯ 'ಓಂ - ಚಾಪ್ಟರ್ 1: ಉದಿರಂ - ದಿ ಬ್ಲಡ್ ವುಡ್' ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದು ಆಂಧ್ರಪ್ರದೇಶ ಮತ್ತು ತಮಿಳುನಾಡು ಪೊಲೀಸರು, ಕ್ರಿಮಿನಲ್ ಗ್ಯಾಂಗ್ ಮತ್ತು ಶೇಷಾಚಲಂ ಕಾಡುಗಳಲ್ಲಿ ನಡೆಯುವ ಅಕ್ರಮ ರಕ್ತಚಂದನ ಕಳ್ಳಸಾಗಣೆಯ ಸುತ್ತ ನಡೆಯುವ ಕಾರ್ಯಾಚರಣೆಯ ಕಥೆಯನ್ನು ಒಳಗೊಂಡಿದೆ. ಕಳ್ಳಸಾಗಣೆ ಜಾಲದೊಳಗೆ ನುಸುಳುವ ಅಂಡರ್ಕವರ್ ಪೊಲೀಸ್ ಅಧಿಕಾರಿಯಾಗಿ ಧನುಷ್ ನಟಿಸಿದ್ದಾರೆ.
ಸಾಯಿ ಪಲ್ಲವಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಮಮ್ಮುಟ್ಟಿ ಅಕ್ರಮ ದಂಧೆಯನ್ನು ನಿಯಂತ್ರಿಸುವ ನಿಗೂಢ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಅವರ ಅದ್ಭುತ ಅಭಿನಯ, ಸಾಯಿ ಪಲ್ಲವಿ ಅವರ ಹಾವಭಾವ, ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಧನುಷ್ ಮತ್ತು ಮಮ್ಮುಟ್ಟಿ ಜೋಡಿಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ವೀಕ್ಷಕರೊಬ್ಬರು ಧನುಷ್ ಅವರನ್ನು 'ನಿಜವಾದ ಬೆಂಕಿ' ಎಂದರೆ, ಮತ್ತೊಬ್ಬರು ಅವರ ಹಾವಭಾವ ಮತ್ತು ಆಟಿಟ್ಯೂಡ್ ಅನ್ನು ಹೊಗಳಿದ್ದಾರೆ. #OMTrailer ಸಾಕಷ್ಟು ಕುತೂಹಲ ಮೂಡಿಸಿದೆ.
ಇಬ್ಬರು ಸ್ಟಾರ್ ನಟರು ಒಟ್ಟಿಗೆ ತೆರೆ ಹಂಚಿಕೊಂಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವೀಕ್ಷಕರೊಬ್ಬರು, "ಧನುಷ್ ಮತ್ತು ಮಮ್ಮುಕ್ಕ ಜೋಡಿ ನಮಗೆ ಸಿನಿಮಾ ನೋಡಲು ಸಾಕಷ್ಟು ಕಾರಣಗಳನ್ನು ನೀಡುತ್ತಿದೆ. ಓಂ ಟ್ರೇಲರ್ ಸಖತ್ ಆಗಿದೆ" ಎಂದಿದ್ದಾರೆ. ಆ್ಯಕ್ಷನ್, ಎಡಿಟಿಂಗ್, ವಿಶುವಲ್ಸ್ ಮತ್ತು ರಕ್ತಚಂದನ ಕಾಡಿನಲ್ಲಿ ನಡೆಯುವ ಆ್ಯಕ್ಷನ್ ದೃಶ್ಯಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಎರಡು ಭಾಗಗಳಲ್ಲಿ ಬರಲಿದೆ ಸಿನಿಮಾ
ರಾಜ್ಕುಮಾರ್ ಪೆರಿಯಸಾಮಿ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ನಾಸಿರುದ್ದೀನ್ ಶಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಎರಡು ಭಾಗಗಳಲ್ಲಿ ಮೂಡಿಬರಲಿದೆ. ಸಾಯಿ ಅಭ್ಯಂಕರ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ಮೊದಲು ಅಕ್ಟೋಬರ್ 16ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ರಜನಿಕಾಂತ್ ಅವರ 'ಜೈಲರ್ 2' ಚಿತ್ರಕ್ಕಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾಗಿ ನಿರ್ಮಾಪಕರೂ ಆಗಿರುವ ಧನುಷ್ ತಿಳಿಸಿದ್ದರು.
ಇನ್ನು ಸೂರ್ಯ ಅವರ 'ಸೀನ್' (Scene) ಚಿತ್ರಕ್ಕೆ ತೊಂದರೆಯಾಗಬಾರದೆಂದು ದೀಪಾವಳಿ ಬಿಡುಗಡೆಯನ್ನೂ ಕೈಬಿಟ್ಟಿದ್ದರು. ಓಂ - ಚಾಪ್ಟರ್ 1: ಉದಿರಂ - ದಿ ಬ್ಲಡ್ ವುಡ್ ನವೆಂಬರ್ 20 ರಂದು ವಿಶ್ವಾದ್ಯಂತ ತಮಿಳಿನಲ್ಲಿ ತೆರೆಕಾಣಲಿದ್ದು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.














