ನವದೆಹಲಿ[ನ.20]: ತಂಪು ಪಾನೀಯ ಉತ್ಪಾದಿಸುವ ಕೋಕಾ ಕೋಲಾ ಕಂಪನಿಯಿಂದ ಮಾಜಿ ‘ಮಿಸ್‌ ಯೂನಿವರ್ಸ್‌’ ಹಾಗೂ ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಅವರು ‘ಮೀ ಟೂ’ ಆರೋಪದಡಿ ಪರಿಹಾರ ರೂಪದಲ್ಲಿ ಗಳಿಸಿದ್ದ 95 ಲಕ್ಷ ರು. ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ತೀರ್ಪು ನೀಡಿದೆ. ಇದೇ ವೇಳೆ ಆದಾಯ ಬಚ್ಚಿಟ್ಟಕಾರಣ ನೀಡಿ ಸುಶ್ಮಿತಾ ಅವರಿಗೆ ತೆರಿಗೆ ಇಲಾಖೆ ವಿಧಿಸಿದ್ದ 35 ಲಕ್ಷ ರು. ದಂಡ ಆದೇಶವನ್ನೂ ವಜಾಗೊಳಿಸಿದೆ. ಇದರಿಂದಾಗಿ ಒಂದೂವರೆ ವರ್ಷದ ಕಾನೂನು ಹೋರಾಟದಲ್ಲಿ ಸುಶ್ಮಿತಾಗೆ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ: ಹಸೆಮಣೆ ಏರಲಿದ್ದಾರ ಸುಶ್ಮಿತಾ ಸೇನ್!

ಕೋಕಾ ಕೋಲಾ ಕಂಪನಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು 1.50 ಕೋಟಿ ರು.ಗೆ ಸುಶ್ಮಿತಾ ಒಪ್ಪಂದ ಮಾಡಿಕೊಂಡಿದ್ದರು. ಒಂದು ವೇಳೆ, ಒಪ್ಪಂದ ದಿಢೀರ್‌ ರದ್ದಾದರೆ ಕೋಕಾ ಕೋಲಾ ಕಂಪನಿ 50 ಲಕ್ಷ ರು. ನೀಡಬೇಕಾಗಿತ್ತು. ಈ ನಡುವೆ, ಕೋಕಾ ಕೋಲಾ ಉದ್ಯೋಗಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸುಶ್ಮಿತಾ ಆರೋಪಿಸಿದ್ದರು. ಇದರ ಬೆನ್ನಲ್ಲೇ ಆ ಕಂಪನಿ ಸುಶ್ಮಿತಾ ಜತೆಗಿನ ಒಪ್ಪಂದ ರದ್ದುಪಡಿಸಿತ್ತು. ಇದನ್ನು ದುರುದ್ದೇಶದ ಹಾಗೂ ಅಗೌರವದ ನಡೆ ಎಂದು ಟೀಕಿಸಿದ್ದ ಸುಶ್ಮಿತಾ, ತಮಗೆ ಸುರಕ್ಷಿತ ಉದ್ಯೋಗ ಸ್ಥಳ ಒದಗಿಸಿಲ್ಲ ಎಂದು ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದರು.

ಇದನ್ನೂ ಓದಿ: ಸುಶ್ಮಿತಾ ಬಾಯ್ ಫ್ರೆಂಡ್ ಜೊತೆ ಮಕ್ಕಳ ತಕಧಿಮಿತಾ!

ಆನಂತರ ಕಂಪನಿ, ಒಪ್ಪಂದ ರದ್ದುಗೊಳಿಸಿದ್ದಕ್ಕಾಗಿ 50 ಲಕ್ಷ ಹಾಗೂ ಲೈಂಗಿಕ ಕಿರುಕುಳಕ್ಕೆ ಪರಿಹಾರ ರೂಪದಲ್ಲಿ 95 ಲಕ್ಷ ರು. ಹಣವನ್ನು 2003-04ರಲ್ಲಿ ನೀಡಿತ್ತು. ತಮ್ಮ ಆದಾಯ 50 ಲಕ್ಷ ರು. ಎಂದು ಸುಶ್ಮಿತಾ ತೋರಿಸಿದ್ದರು. ಆದರೆ ಉಳಿಕೆ 95 ಲಕ್ಷ ರು. ಆದಾಯವನ್ನು ಸುಶ್ಮಿತಾ ಬಚ್ಚಿಟ್ಟಿದ್ದಾರೆ ಎಂಬುದು ತೆರಿಗೆ ಇಲಾಖೆ ವಾದವಾಗಿತ್ತು. ಆದರೆ ಇದು ಆದಾಯವಲ್ಲ. ಬಂಡವಾಳ ಸ್ವೀಕೃತಿ. ಹಾಗಾಗಿ ತೆರಿಗೆ ವಿಧಿಸಲಾಗದು ಎಂದು ನ್ಯಾಯಾಧಿಕರಣ ಹೇಳಿದೆ.