ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುನಿಲ್ ಪಾಲ್ ಅವರು ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‌ಬಾಸ್ ಕಾರ್ಯಕ್ರಮವನ್ನು 'ಗಟರ್ ಶೋ' ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸಮಾಜದ ಕಳಂಕಿತರನ್ನು ಸ್ಟಾರ್ ಮಾಡುವ ಈ ಶೋ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆದರೆ, ಬಿಗ್‌ಬಾಸ್ ಅಭಿಮಾನಿಗಳು ಸುನಿಲ್ ಪಾಲ್ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ: ವಿದೇಶಗಳಲ್ಲಿ ಆರಂಭಿಸಲಾಗಿರುವ ಬಿಗ್‌ಬಾಸ್ (Bigg Boss) ಷೋ ಅದೇ ಮಾದರಿಯಲ್ಲಿ ಭಾರತಕ್ಕೆ, ಕೊನೆಗೆ ಕರ್ನಾಟಕಕ್ಕೂ ಎಂಟ್ರಿ ಕೊಟ್ಟು ಬಹಳ ವರ್ಷಗಳೇ ಆಗಿವೆ. ಇದು ಅತಿ ದೊಡ್ಡ ರಿಯಾಲಿಟಿ ಷೋ ಎನ್ನಿಸಿಕೊಂಡಿದೆ. ಇದರಲ್ಲಿನ ಕಚ್ಚಾಟ, ಹೊಡೆದಾಟ, ವಿವಾದಿತ ಸ್ಪರ್ಧಿಗಳ ಕೂಗಾಟ, ರೊಮಾನ್ಸ್ ಎಲ್ಲವನ್ನೂ ಕುತೂಹಲದಿಂದ ವೀಕ್ಷಿಸುವ ದೊಡ್ಡ ವರ್ಗವೇ ಇದೆ. ಈ ಷೋ ಬಗ್ಗೆ ಟ್ರೋಲ್ ಮಾಡುವವರು, ಇದೊಂದು ಅತ್ಯಂತ ಕೆಟ್ಟ ಷೋ ಎಂದೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಹೇಳುವವರ ಪೈಕಿ ಹಲವರು ಈ ಷೋ ನೋಡಿಕೊಂಡೇ ಪ್ರತಿದಿನವೂ ನೆಗೆಟಿವ್ ಕಮೆಂಟ್ ಹಾಕುವ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ತಂದುಕೊಡುತ್ತಿದ್ದಾರೆ.
ಇವುಗಳ ನಡುವೆಯೇ, ಇದೀಗ ಸ್ಯಾಂಡ್ಅಪ್ ಕಾಮೆಡಿಯನ್ ಸುನಿಲ್ ಪಾಲ್ ಅವರು ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‌ಬಾಸ್ ಷೋ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಬಿಗ್‌ಬಾಸ್ ಅನ್ನು ಗಟರ್ ಷೋ ಎಂದಿದ್ದಾರೆ. ಇಲ್ಲಿ ಸಮಾಜದ ಕಳಂಕಿತರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕರೆಸಿ ಅವರನ್ನು ಸ್ಟಾರ್ ಮಾಡುವ ಷೋ ಇದಾಗಿದೆ ಎಂದು ಅತ್ಯಂತ ಕೆಟ್ಟ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಹಿಂದಿಯಲ್ಲಿ "ಬಿಗ್ ಬಾಸ್ 20" ಪ್ರಸ್ತುತ ಪ್ರಸಾರವಾಗುತ್ತಿದೆ. ಈ ಬಾರಿಯೂ ಸಲ್ಮಾನ್ ಖಾನ್ ನಿರೂಪಕರಾಗಿದ್ದಾರೆ. ನಟಿ ಕತ್ರಿನಾ ಕೈಫ್ ಅವರ ಬಾಡಿ ಷೇಮಿಂಗ್ ಕುರಿತು ವಿರೋಧ ವ್ಯಕ್ತಪಡಿಸಿದ್ದ ಸಲ್ಮಾನ್ ಖಾನ್, ಕಾರ್ಯಕ್ರಮದ ಮಧ್ಯದಲ್ಲಿ ತಮ್ಮ ಟಿ-ಶರ್ಟ್ ತೆಗೆದು ತಕ್ಕ ಉತ್ತರ ನೀಡಿದ್ದರು. ನನ್ನನ್ನು ಟ್ರೋಲ್ ಮಾಡಿ ಬೇಕಿದ್ದರೆ ಎಂದಿದ್ದರು. ಇದಕ್ಕೂ ಸುನಿಲ್ ಪಾಲ್ ಟಾಂಗ್ ನೀಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳು ಟ್ರೋಲಿಂಗ್‌ಗೆ ಅರ್ಹರು
ಸುನಿಲ್ ಪಾಲ್ ಅವರು, ಪಾಪರಾಜಿಗಳೊಂದಿಗೆ ಮಾತನಾಡುತ್ತಾ, ಕಾರ್ಯಕ್ರಮದಲ್ಲಿರುವ ಪ್ರತಿಯೊಬ್ಬರೂ ಟ್ರೋಲಿಂಗ್‌ಗೆ ಅರ್ಹರು. ಇದೊಂದು ಗಟಾರ್ ಷೋ, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಸಲ್ಮಾನ್ ಖಾನ್ ಅವರಿಗೆ ಆಗ್ರಹಿಸಿದರು. "ಬಿಗ್ ಬಾಸ್‌ನಲ್ಲಿರುವ ಯಾರಾದರೂ ಟ್ರೋಲಿಂಗ್‌ಗೆ ಅರ್ಹರು, ಅದು ಸಲ್ಮಾನ್ ಖಾನ್ ಆಗಿರಲಿ ಅಥವಾ ಸ್ಪರ್ಧಿಯಾಗಿರಲಿ" ಎಂದು ಆಕ್ರೋಶ ಹೊರಹಾಕಿದರು. "ಸಮಾಜದ ನಷ್ಟಕ್ಕೆ ಕಾರಣರಾದ 'ದುಷ್ಕರ್ಮಿಗಳನ್ನು' ಬಿಗ್ ಬಾಸ್‌ನಲ್ಲಿ ಸ್ಟಾರ್‌ಗಳನ್ನಾಗಿ ಮಾಡಲಾಗುತ್ತದೆ. ಸಲ್ಮಾನ್ ಖಾನ್ ಕಳೆದ 17 ವರ್ಷಗಳಿಂದ ಆಯೋಜಿಸುತ್ತಿರುವ ಈ ಸುಸಂಸ್ಕೃತ ಕಾರ್ಯಕ್ರಮವನ್ನು ಬಿಗ್ ಬಾಸ್ ಎಂದು ಕರೆಯಲಾಗುತ್ತದೆ ಎಂದು ನಾನು ನಂಬುತ್ತೇನೆ" ಎಂದು ಸುನಿಲ್ ಪಾಲ್ ಹೇಳಿದರು. ಹಗರಣಗಳಿರುವ ಹುಡುಗರು ಮತ್ತು ಹುಡುಗಿಯರು ಅಲ್ಲಿಗೆ ಬರುತ್ತಾರೆ. ಎಲ್ಲರೂ ಬೆತ್ತಲೆಯಾಗಿರುತ್ತಾರೆ ಎಂದು ಆರೋಪಿಸಿದರು.
ಹನುಮಾನ್ ಅಂಶ್ ನೋಡಿ ಕಲಿಯಿರಿ
"ಸಲ್ಮಾನ್ ಖಾನ್ ಅವರನ್ನು ಸ್ಟಾರ್ ಮಾಡಿದ್ದು ನಾವು, ನಮ್ಮಿಂದ ಅವರು. ನಿಮ್ಮ ನೂರಾರು ಸಿನಿಮಾಗಳನ್ನು ನಾವು ನೋಡಿದ್ದಕ್ಕೇ ನೀವು ಸ್ಟಾರ್ ಆಗಿದ್ದು. ಪ್ರಚಾರ ಕೊಟ್ಟಿದ್ದು ಹೆಚ್ಚಾಯಿತು. ಕೇವಲ ಎರಡು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ 'ಹನುಮಾನ್ ಅಂಶ್' ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ನಿಮ್ಮ ಚಿತ್ರಗಳು ಐದು ನೂರು ಕೋಟಿ ರೂಪಾಯಿ ಕೂಡ ಗಳಿಸುತ್ತಿಲ್ಲ. ನೀವು ನಾಚಿಕೆಪಡಬೇಕು. ನೀವೆಂಥ ಸ್ಟಾರ್ ಎಂದು ಪ್ರಶ್ನಿಸಿದರು.
ಆದರೆ ಬಿಗ್‌ಬಾಸ್ ಪ್ರೇಮಿಗಳು ಸುನಿಲ್ ಅವರ ಮಾತಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಅತಿಯಾಯಿತು ಎನ್ನುತ್ತಿದ್ದಾರೆ. ನಮಗೆಲ್ಲಾ ಬಿಗ್‌ಬಾಸ್ ಷೋ ತುಂಬಾ ಇಷ್ಟ. ಅದನ್ನು ಎಂಜಾಯ್ ಮಾಡುತ್ತೇವೆ. ನಿಮಗೆ ಇಷ್ಟವಿಲ್ಲದಿದ್ದರೆ ನೋಡಬೇಡಿ ಎಂದಿದ್ದಾರೆ.


