ಜಕರ್ತಾ(ಡಿ.19): ಅಮೆರಿಕದ ಪೋರ್ಟೊರಿಕೊ ದ್ವೀಪದ ಸ್ಟೀಫಾನಿ ಡೆಲ್‌'ವೇಲ್ ಅವರು 2016ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಡಾಮಿನಿಕನ್ ರಿಪಬ್ಲಿಕ್ ಮತ್ತು ಇಂಡೊನೇಷಿಯಾದ ಪ್ರತಿನಿಧಿಗಳು ರನ್ನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತದ ಪ್ರಿಯದರ್ಶಿನಿ ಚಟರ್ಜಿ ಅವರು ಮೊದಲ 20ರೊಳಗಿನ ಶ್ರೇಯಾಂಕ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ.

1975ರಲ್ಲಿ ಪೋರ್ಟೊರಿಕೊ ದ್ವೀಪದ ವಿಲ್ನೆಲಿಯಾ ಮೆರ್ಸಿಡ್ ಅವರ ಬಳಿಕ ಸ್ಟೀಫಾನಿ ಡೆಲ್‌'ವೇಲ್(19) ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅವರ ಪ್ರತಿಸ್ಪರ್ಧಿಗಳಾಗಿದ್ದ ಕೀನ್ಯಾ, ಇಂಡೊನೇಷಿಯಾ, ಡಾಮಿನಿಕನ್ ರಿಪಬ್ಲಿಕ್ ಮತ್ತು ಫಿಲಿಪ್ಪೈನ್ಸ್ ಸುಂದರಿಯರನ್ನು ಹಿಂದಿಕ್ಕಿದ್ದಾರೆ.

ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತದ ಪ್ರಿಯದರ್ಶಿನಿ ಅವರು ಕಡಿಮೆ ಅಂತರದಲ್ಲಿ ಪರಾಜಿತಗೊಂಡರು. ಈ ಹಿಂದೆ ಭಾರತದ ಪ್ರಿಯಾಂಕ ಚೋಪ್ರಾ, ರೀಟಾ ಫರಿಯಾ, ಐಶ್ವರ್ಯ ರೈ, ಡಯಾನಾ ಹೇಡನ್, ಯುಕ್ತ ಮುಕಿ ಅವರು ವಿಶ್ವ ಸುಂದರಿ ಪಟ್ಟಕ್ಕೆ ಪಾತ್ರರಾಗಿದ್ದರು.