'ಈ ಚಿತ್ರವನ್ನು ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದು ಕೇವಲ ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಕಥೆಯ ಬೇಡಿಕೆಗೆ' ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, 'ಈ ಚಿತ್ರದಲ್ಲಿ ಬರುವ ಸುಮಾರು 20 ನಿಮಿಷಗಳ ಸುದೀರ್ಘ 'ರಾಮಾಯಣ ಯುದ್ಧ'ದ ದೃಶ್ಯವು ರೋಚಕ' ಎಂದಿದ್ದಾರೆ.

ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಭರ್ಜರಿ ಅಪ್‌ಡೇಟ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ಚಿತ್ರರಂಗದ ದೈತ್ಯ ಪ್ರತಿಭೆ, ದಕ್ಷಿಣ ಭಾರತದ ಹೆಮ್ಮೆಯ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಗಗನಕ್ಕೇರಿದೆ. 'RRR' ಮತ್ತು 'ಬಾಹುಬಲಿ'ಯಂತಹ ಜಾಗತಿಕ ಮಟ್ಟದ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಾಜಮೌಳಿ, ಈಗ ತಮ್ಮ ಮುಂದಿನ ಸಾಹಸಕ್ಕೆ ಸಿದ್ಧರಾಗಿದ್ದಾರೆ.

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಮತ್ತು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ (Priyanka Chopra) ನಟಿಸುತ್ತಿರುವ ಚಿತ್ರ 'ವಾರಣಾಸಿ' ಶೂಟಿಂಗ್ ಹಂತದಲ್ಲಿದೆ. ಈ ಚಿತ್ರದ ಬಗ್ಗೆ ಒಂದು ರೋಚಕ ಅಪ್‌ಡೇಟ್ ಕೊಟ್ಟಿದ್ದಾರೆ ನಿರ್ದೇಶಕ ಎಸ್‌ಎಸ್ ರಾಜಮೌಳಿ.

ಐಮ್ಯಾಕ್ಸ್ ಸಾಹಸ ದೃಶ್ಯಗಳ ಶೂಟಿಂಗ್ ಪೂರ್ಣ:

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಪ್ರತಿಷ್ಠಿತ 'ಅನೆಸಿ ಇಂಟರ್ನ್ಯಾಷನಲ್ ಅನಿಮೇಷನ್ ಫಿಲ್ಮ್ ಫೆಸ್ಟಿವಲ್'ನಲ್ಲಿ ಭಾಗವಹಿಸಿದ ರಾಜಮೌಳಿ, ತಮ್ಮ ಸಿನಿಮಾದ ಪ್ರಗತಿಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 'ವೆರೈಟಿ' ನಿಯತಕಾಲಿಕದೊಂದಿಗೆ ಮಾತನಾಡಿ 'ಸಿನಿಮಾದ ಬಹುಪಾಲು ಚಿತ್ರೀಕರಣ ಈಗಾಗಲೇ ಮುಗಿದಿದೆ. ಈ ಚಿತ್ರದ ಅತ್ಯಂತ ಪ್ರಮುಖ ಮತ್ತು ಅತಿ ದೊಡ್ಡ 'ಐಮ್ಯಾಕ್ಸ್' (IMAX) ಆಕ್ಷನ್ ದೃಶ್ಯಗಳ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಜೊತೆಗೆ, ವಾರಣಾಸಿ ಸಿನಿಮಾದ ಬಹುಪಾಲು ಕೆಲಸ ಮುಗಿದಿದೆ. ಪ್ರಮುಖ ಆಕ್ಷನ್ ದೃಶ್ಯಗಳ ಕೆಲಸ ಮುಕ್ತಾಯಗೊಂಡಿದ್ದು, ಸದ್ಯ ನಾವು ಸಣ್ಣಪುಟ್ಟ ಮತ್ತು ಲಿಂಕ್ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿದ್ದೇವೆ. ಎಲ್ಲವೂ ನಾವಂದುಕೊಂಡಂತೆ ನಡೆದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅಂತ್ಯದ ವೇಳೆಗೆ ಶೂಟಿಂಗ್ ಪೂರ್ಣಗೊಳ್ಳಲಿದೆ" ಎಂದು ಹೇಳಿದ್ದಾರೆ.

ರಾಮಾಯಣ ಯುದ್ಧ-ಐಮ್ಯಾಕ್ಸ್ ತಂತ್ರಜ್ಞಾನ

'ಈ ಚಿತ್ರವನ್ನು ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದು ಕೇವಲ ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಕಥೆಯ ಬೇಡಿಕೆಗೆ' ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, 'ಈ ಚಿತ್ರದಲ್ಲಿ ಬರುವ ಸುಮಾರು 20 ನಿಮಿಷಗಳ ಸುದೀರ್ಘ 'ರಾಮಾಯಣ ಯುದ್ಧ'ದ ದೃಶ್ಯವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ. ಈ ದೃಶ್ಯದ ವ್ಯಾಪ್ತಿ ಮತ್ತು ಪೌರಾಣಿಕ ಹಿನ್ನೆಲೆಯನ್ನು ತೆರೆಯ ಮೇಲೆ ಭವ್ಯವಾಗಿ ತೋರಿಸಲು ಐಮ್ಯಾಕ್ಸ್ ತಂತ್ರಜ್ಞಾನದ ಅಗತ್ಯವಿತ್ತು ಎಂದಿದ್ದಾರೆ ರಾಜಮೌಳಿ.

ಭಾರತದ ಅತ್ಯಂತ ದುಬಾರಿ ಸಿನಿಮಾ!

ಈ ಚಿತ್ರವು ಆಕ್ಷನ್ ಜೊತೆಗೆ 'ಟೈಮ್ ಟ್ರಾವೆಲ್' (ಕಾಲದ ಪ್ರಯಾಣ) ಆಧಾರಿತ ರೋಚಕ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ. ಸುಮಾರು 1,400 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗಲಿದೆ. ರಾಜಮೌಳಿ ಅವರ ಈ ಮಹತ್ವಾಕಾಂಕ್ಷೆಯ ಚಿತ್ರ ವಾರಣಾಸಿ ಏಪ್ರಿಲ್ 2027 ರಲ್ಲಿ ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಿದ್ಧವಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲಿರುವ 'ವಾರಣಾಸಿ'

ರಾಜಮೌಳಿ ನಿರ್ದೇಶನದ 'ಬಾಹುಬಲಿ' ಮತ್ತು 'RRR' ಚಿತ್ರಗಳು ಭಾರತೀಯ ಸಿನೆಮಾದ ಗಡಿಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿವೆ. ಇದೀಗ ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ಜೊತೆಗೂಡಿ ಅವರು ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾವನ್ನು ನೀಡಲು ಸಜ್ಜಾಗುತ್ತಿದ್ದಾರೆ. ಮಹೇಶ್ ಬಾಬು ಲುಕ್ ಮತ್ತು ರಾಜಮೌಳಿ ಅವರ ನಿರ್ದೇಶನದ ಶೈಲಿ ಎರಡೂ ಸೇರಿ ಮತ್ತೊಂದು ದಾಖಲೆ ಬರೆಯುವುದು ಖಚಿತ ಎಂದು ಸಿನಿವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ, ರಾಜಮೌಳಿ-ಮಹೇಶ್ ಬಾಬು ಈ ದೃಶ್ಯ ವೈಭವವನ್ನು ನೋಡಲು 2027ರವರೆಗೆ ಕಾಯಲೇಬೇಕು!