ಬೆಂಗಳೂರು: ಮೀಟೂ ವಿವಾದದ ನಂತರ ನಟಿ ಶ್ರುತಿ ಹರಿಹರನ್ ಸಿನಿಮಾ ಚಟುವಟಿಕೆಗಳಿಂದ ಬಹುತೇಕ ದೂರ ಉಳಿದಿದ್ದಾರೆ. ಶನಿವಾರ ನಡೆದ ಅವರ ಹೊಸ ಚಿತ್ರ ‘ನಾತಿಚರಾಮಿ’ಯ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೂ ಅವರು ಗೈರಾಗಿದ್ದರು. 

ಇದರಿಂದಾಗಿ ಶ್ರುತಿ ಹರಿಹರನ್ ಚಿತ್ರರಂಗದಿಂದ ದೂರ  ಉಳಿದಿದ್ದಾರೆ ಎನ್ನುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಆದರೆ ‘ನಾತಿಚರಾಮಿ’ ಚಿತ್ರದ ನಿರ್ದೇಶಕ ಮನ್ಸೋರೆ ಅದನ್ನು ಅಲ್ಲಗಳೆದಿದ್ದಾರೆ. ಶ್ರುತಿ ಹರಿಹರನ್ ಗೈರು ಹಾಜರಿಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮನ್ಸೋರೆ, ‘ಆಡಿಯೋ ಬಿಡುಗಡೆಗೆ ಶ್ರುತಿ ಬರುವುದಾಗಿ ಹೇಳಿದ್ದರು. ಆದರೆ ಈ ಕಾರ್ಯಕ್ರಮ ದಿಢೀರ್ ನಿಗದಿ ಆಯಿತು . ಅವರಿಗೆ ನಾವು ವಿಷಯ
ತಿಳಿಸುವಾಗ ಅವರು ತಮಿಳು ವೆಬ್ ಸಿರೀಸ್ ಶೂಟಿಂಟ್ ಕಾರಣಕ್ಕೆ ಚೆನ್ನೈನಲ್ಲಿದ್ದರು. ಹಾಗಾಗಿ ಇವತ್ತಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. 

ಮುಂದೆ ಸಿನಿಮಾ ಪ್ರಮೋಷನಲ್ಲಿ ಭಾಗವಹಿಸುವು ದಾಗಿ ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ಭರವಸೆ ಇದೆ’ ಎಂದು ಸ್ಪಷ್ಟನೆ ನೀಡಿದರು. ‘ನಾತಿಚರಾಮಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರುತಿ ಹರಿಹರನ್, ಸಂಚಾರಿ ವಿಜಯ್ ನಟಿಸಿದ್ದಾರೆ. ಈ ಚಿತ್ರ ಮಹಿಳಾ ದೌರ್ಜನ್ಯ ವಿಚಾರ ಚರ್ಚೆ ಮಾಡುತ್ತದೆ ಎನ್ನಲಾಗಿದೆ.