Spandana Death: 16 ಕೇಜಿ ದೇಹತೂಕ ಇಳಿಸಿದ್ದೇ ಸ್ಪಂದನಾ ಸಾವಿಗೆ ಮುಳುವಾಯ್ತಾ?
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಹಠಾತ್ ಮರಣದ ಕುರಿತು ಚರ್ಚೆಗಳು ಜೋರಾಗಿವೆ. ಚಿಕ್ಕ ವಯಸ್ಸಿನವರು ಹೃದಯಾಘಾತಕ್ಕೆ ತುತ್ತಾದಾಗ ಕೇಳಿಬರುವ ಪ್ರಶ್ನೆಗಳು ಈಗಲೂ ಕೇಳಿಬರುತ್ತಿವೆ.
ಬೆಂಗಳೂರು (ಆ.08): ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಹಠಾತ್ ಮರಣದ ಕುರಿತು ಚರ್ಚೆಗಳು ಜೋರಾಗಿವೆ. ಚಿಕ್ಕ ವಯಸ್ಸಿನವರು ಹೃದಯಾಘಾತಕ್ಕೆ ತುತ್ತಾದಾಗ ಕೇಳಿಬರುವ ಪ್ರಶ್ನೆಗಳು ಈಗಲೂ ಕೇಳಿಬರುತ್ತಿವೆ. ಅದರಲ್ಲಿ ಒಂದು ಚರ್ಚೆ ವ್ಯಾಯಮದ ಕುರಿತಾದದ್ದು. ಸ್ಪಂದನಾ ವ್ಯಾಯಾಮ ಮೂಲಕ ಬರೋಬ್ಬರಿ 16 ಕೇಜಿ ತೂಕ ಇಳಿಸಿಕೊಂಡಿದ್ದರು ಎನ್ನಲಾಗಿದೆ. ಅವರು ಹೀಗೆ ದೇಹ ದಂಡಿಸಿಕೊಂಡಿದ್ದೇ ಅವಘಡಕ್ಕೆ ಕಾರಣ ಎನ್ನುವುದು ಕೆಲವರ ಅಭಿಪ್ರಾಯ.
ಹೃದಯಾಘಾತ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮಂಜುನಾಥ್ ಮಾತನಾಡಿ, ‘ಸಾಮಾನ್ಯವಾಗಿ ಮಹಿಳೆಯರಲ್ಲಿ ಹೃದಯಾಘಾತ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆದರೆ, ಇತ್ತೀಚೆಗೆ ಸಣ್ಣ ವಯಸ್ಸಿನ ಮಹಿಳೆಯರು ಕೂಡ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಅತಿಯಾದ ಒತ್ತಡ. ಅಲ್ಲದೆ ಅತಿಯಾದ ವ್ಯಾಯಾಮ ಹಾಗೂ ದೇಹ ದಂಡಿಸಿ, ತೂಕ ಇಳಿಸಿಕೊಳ್ಳುವುದು ಕೂಡ ಒಳ್ಳೆಯದಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸ್ಪಂದನಾ ಪೋಸ್ಟ್ ಮಾರ್ಟಂ ಮುಕ್ತಾಯ, ನಾಳೆ ಬೆಂಗಳೂರಿಗೆ ಮೃತದೇಹ-ಬುಧವಾರ ಅಂತ್ಯಕ್ರಿಯೆ
ಕಾಲೇಜಿಂದಲೇ ರಾಘು-ಸ್ಪಂದನಾ ಸ್ನೇಹ: ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. ಕಾಲೇಜಿನಲ್ಲಿ ಓದುವಾಗಲೇ ವಿಜಯ್ ರಾಘವೇಂದ್ರ ಜತೆಗೆ ಸ್ಪಂದನಾ ಅವರಿಗೆ ಸ್ನೇಹ ಇತ್ತು. ಈ ಸ್ನೇಹವೇ ಮುಂದೆ ಪ್ರೀತಿಯಾಗಿ ಇಬ್ಬರು ಎರಡೂ ಕುಟುಂಬಗಳನ್ನು ಒಪ್ಪಿಸಿ 2007ರ ಆಗಸ್ಟ್ 26ರಂದು ಮದುವೆ ಆಗಿದ್ದರು. ದಂಪತಿಗೆ ಶೌರ್ಯ ಎಂಬ ಹೆಸರಿನ ಪುತ್ರನಿದ್ದಾನೆ. ಕನ್ನಡ ಚಿತ್ರರಂಗದ ಆದರ್ಶ ದಂಪತಿ ಎನಿಸಿಕೊಂಡಿದ್ದ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಇದೇ ಆಗಸ್ಟ್ 26ರಂದು 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಲಿದ್ದರು. ಆದರೆ ವಿವಾಹ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಸ್ಪಂದನಾ ಅಗಲಿದ್ದು, ವಿಜಯ್ ರಾಘವೇಂದ್ರ ಹಾಗೂ ಬಿ.ಕೆ. ಶಿವರಾಂ ಕುಟುಂಬಗಳಲ್ಲಿ ದುಃಖ ಆವರಿಸಿದೆ.
ನಟಿ, ನಿರ್ಮಾಪಕಿಯಾಗಿದ್ದ ಸ್ಪಂದನಾ: ಬೆಂಗಳೂರಿನ ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ಪದವಿ ಪಡೆದಿರುವ ಸ್ಪಂದನಾ ಕುಟುಂಬದ ಹಿನ್ನೆಲೆ ತುಂಬಾ ವಿಶೇಷವಾದದ್ದು. ತಂದೆ ಬಿ.ಕೆ.ಶಿವರಾಂ ಪೊಲೀಸ್ ಅಧಿಕಾರಿ ಆಗಿದ್ದವರು. ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್ ಹಾಗೂ ಸೋದರ ರಕ್ಷಿತ್ ಶಿವರಾಂ ಅವರದ್ದು ರಾಜಕೀಯ ಕ್ಷೇತ್ರ. ಪತಿ ವಿಜಯ್ ರಾಘವೇಂದ್ರ ಸಿನಿಮಾ ರಂಗದವರು. ಹೀಗೆ ರಾಜಕೀಯ, ಪೊಲೀಸ್ ಹಾಗೂ ಸಿನಿಮಾ ನೆರಳಿನಲ್ಲಿ ಬದುಕು ಕಟ್ಟಿಕೊಂಡವರು ಸ್ಪಂದನಾ.
ಸ್ಪಂದನಾ ಅವರು ರವಿಚಂದ್ರನ್ ನಟನೆ, ನಿರ್ದೇಶನದ ‘ಅಪೂರ್ವ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಬಹಳಷ್ಟು ಸಿನಿಮಾ ಕಾರ್ಯಕ್ರಮಗಳಲ್ಲಿ ಹಾಗೂ ವಾಹಿನಿಗಳು ನಡೆಸುವ ರಿಯಾಲಿಟಿ ಶೋಗಳಲ್ಲಿ ಪತಿ ವಿಜಯ್ ರಾಘವೇಂದ್ರ ಜತೆಗೆ ಭಾಗವಹಿಸಿದ್ದರು. ಅಲ್ಲದೆ 2018ರಲ್ಲಿ ತೆರೆಗೆ ಬಂದಿದ್ದ ವಿಜಯ್ ರಾಘವೇಂದ್ರ ನಟನೆ ಮತ್ತು ನಿರ್ದೇಶನದ ‘ಕಿಸ್ಮತ್’ ಚಿತ್ರಕ್ಕೆ ಸ್ಪಂದನಾ ಅವರೇ ನಿರ್ಮಾಪಕಿ ಆಗುವ ಮೂಲಕ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು.
ಭಾವುಕರಾದ ಮೈದುನ ಶ್ರೀಮುರಳಿ: ವಿಜಯ್ ರಾಘವೇಂದ್ರ ಅವರ ಸೋದರ, ನಟ ಶ್ರೀಮುರಳಿ ಮಾಧ್ಯಮಗಳ ಜತೆಗೆ ಮಾತನಾಡಿ, ‘ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ನನಗೆ ಫೋನ್ ಕರೆ ಮಾಡಿ ತಿಳಿಸಿದರು. ಅತ್ತಿಗೆ ಕುಟುಂಬಸ್ಥರ ಜತೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಇದ್ದ ಕಾರಣ ವಿಜಯ ಇಲ್ಲಿಯೇ ಇದ್ದರು. ನಂತರ ರಾಘು ಅವರು ಕೂಡ ಅತ್ತಿಗೆ ಜತೆಗೆ ಪ್ರವಾಸಕ್ಕೆ ಜತೆಯಾಗಿದ್ದರು. ಆಗಸ್ಟ್ 6 ರಾತ್ರಿ ಮಲಗಿದ್ದ ಅತ್ತಿಗೆ ಮತ್ತೆ ಏಳಲೇ ಇಲ್ಲ. ಲೋ ಬಿಪಿಯಿಂದ ಹೀಗೆ ಆಯಿತು ಎಂದು ತಿಳಿದು ಬಂದಿದೆ. ನಮ್ಮ ಕುಟುಂಬಕ್ಕೆ ದೊಡ್ಡ ದುಃಖದ ಸಂಗತಿ ಇದು’ ಎನ್ನುತ್ತಲೇ ಭಾವುಕರಾದರು.
ಹೃದಯಾಘಾತಕ್ಕೆ ಬಲಿ ಆದ ಚಿತ್ರನಟರು: ಕನ್ನಡ ಚಿತ್ರರಂಗದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ತುತ್ತಾಗಿ ನಿಧನರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿಯೇ ಕನ್ನಡ ಚಿತ್ರರಂಗ ಹಲವು ಬಹುಮುಖ್ಯರನ್ನು ಕಳೆದುಕೊಂಡಿದೆ. 2020ರ ಜೂನ್ 7ರಂದು ನಟ ಚಿರಂಜೀವಿ ಸರ್ಜಾ, 2021 ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್, 2023 ಜೂನ್ 2ರಂದು ನಿತಿನ್ ಗೋಪಿ ತೀರಿಕೊಂಡಿದ್ದರು. ಇದೀಗ ಸ್ಪಂದನಾ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಕೆಕೆ, ರಾಜು ಶ್ರೀವಾಸ್ತವ, ಸಿದ್ಧಾಥ್‌ರ್ ಶುಕ್ಲಾ ಸೇರಿದಂತೆ ಹಲವಾರು ಮಂದಿ ಹೃದಯಾಘಾತದಿಂದ ತೀರಿಕೊಂಡಿದ್ದಾರೆ.
ಸ್ನೇಹಮಯಿ ಸ್ಪಂದನಾ: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸ್ನೇಹಮಯಿ ವ್ಯಕ್ತಿತ್ವ ಹೊಂದಿದ್ದರು. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ವಿಜಯ ರಾಘವೇಂದ್ರ ಪತ್ನಿಯ ಬಗ್ಗೆ ಭಾವುಕವಾಗಿ ಮಾತುಗಳನ್ನಾಡಿದ್ದರು. ‘ನಾನು ಹೊರನಾಡ ಅನ್ನಪೂರ್ಣೇಶ್ವರಿ ದೇವಿಯನ್ನು ಬೇಡಿಕೊಂಡಿದ್ದೆ. ನಾನು ಮದುವೆ ಆದರೆ ನಿನ್ನ ಥರ ಇರೋಳನ್ನೇ ಮದುವೆ ಆಗಬೇಕು ಅಂತ. ಸ್ಪಂದನಾಳನ್ನು ನೋಡಿದಾಗ ನಾನಂದು ದೇವಿ ಎದುರು ಹೇಳಿದ್ದ ಮಾತು ನೆನಪಾಗಿತ್ತು. ನನ್ನ ಹೆಂಡತಿ ನನ್ನ ಶಕ್ತಿ. ಕುಗ್ಗಿದಾಗ ಮೇಲೆತ್ತುವ ಗೆಳತಿ. ಅವಳನ್ನು ಹೃದಯದಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದೇನೆ’ ಎಂದು ವಿಜಯ್ ಪತ್ನಿ ಬಗ್ಗೆ ಹೇಳಿದ್ದರು. ಆ ಮಾತುಗಳನ್ನು ಈಗ ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸ್ಪಂದನಾ ಅವರನ್ನು ಬಹಳ ಕಾಲದಿಂದ ಬಲ್ಲವರು, ಆಪ್ತರು ಸ್ಪಂದನಾ ಅವರ ಸ್ನೇಹಮಯಿ ವ್ಯಕ್ತಿತ್ವವನ್ನು ನೆನೆಸಿಕೊಂಡಿದ್ದಾರೆ. ಈ ಮಧ್ಯೆ ದಂಪತಿಯ ಹಳೇ ರೀಲ್ಸ್‌ಗಳು ಮತ್ತೆ ಟ್ರೆಂಡ್ ಆಗಿವೆ. ಜನ ಆ ರೀಲ್ಸ್ ನೋಡಿ ಭಾವುಕರಾಗುತ್ತಿದ್ದಾರೆ.
ನನ್ನ ಚಿನ್ನಾರಿಮುತ್ತನ ಬೆಳವಣಿಗೆಯನ್ನು ಕಾಣುತ್ತ ಬಂದವನು ನಾನು. ಭಾನುವಾರ ಅವನ ಮಗ ಶೌರ್ಯನ ಜೊತೆ ನನ್ನ ಕ್ಲಾಸ್ ನಡೆಯುತ್ತಿತ್ತು. ಅದನ್ನು ಮುಗಿಸಿಕೊಂಡು ವಿಜಯ್ ಸಂಜೆ ಮಗನನ್ನು ಕರೆದುಕೊಂಡು ಹೋದ. ಈಗ ಆತನ ಸ್ಥಿತಿ ಊಹಿಸುವುದಕ್ಕೂ ಸಾಧ್ಯವಿಲ್ಲ. ಆ ಕುಟುಂಬದ ಸುತ್ತ ನಿರಂತರವಾಗಿ ಇಂಥ ಛಾಯೆ ಆವರಿಸುತ್ತಿರುವುದು ಬಹಳ ದುಃಖದ ಸಂಗತಿ. ಅಪ್ಪು ಇದ್ದಿದ್ದರೆ? ಸ್ಪಂದನಾ ಇದ್ದಿದ್ದರೆ? ಬಹಳ ಚಿಕ್ಕ ವಯಸ್ಸಿಗೆ ಅವರಿಗೆಲ್ಲ ಹೀಗೆ ಆಗಿದೆ. ಆ ಕುಟುಂಬದಲ್ಲೇ ಈ ರೀತಿ ಆಗುತ್ತಿದೆ ಎಂಬುದು ನೋವಿನ ಸಂಗತಿ.
- ಟಿ.ಎಸ್.ನಾಗಾಭರಣ, ‘ಚಿನ್ನಾರಿಮುತ್ತ’ ನಿರ್ದೇಶಕ
ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ನಮ್ಮ ಕುಟುಂಬದವರಿದ್ದಂತೆ. ಇವರಿಬ್ಬರನ್ನು ನೋಡುವಾಗಲೆಲ್ಲ ಆದರ್ಶ ದಂಪತಿ ಅನ್ನೋದೇ ಮನಸ್ಸಿಗೆ ಬರೋದು. ಎಷ್ಟುಅನ್ಯೋನ್ಯತೆ, ಎಷ್ಟು ಪ್ರೀತಿ! ಸ್ಪಂದನಾ ತಾಯಿ ಈಗ ನನ್ನ ಬಳಿ ಹೇಳಿದ್ರು, ನನಗೆ ದುಃಖ ಆಗ್ತಿರೋದು ಮಗಳು ಹೋಗಿದ್ದಾಳೆ ಅನ್ನೋದಕ್ಕಿಂತಲೂ ರಾಘು ಹೇಗೆ ಬದುಕ್ತಾನೆ ಅನ್ನೋದು. ಅವಳಿಲ್ಲದೇ ಅವನು ಬದುಕಲ್ಲ ಅಂತ ಆ ತಾಯಿ ಹೇಳಿದ್ದು ಕರುಳು ಕತ್ತರಿಸಿದ ಹಾಗಿದೆ. ಯಾವತ್ತೂ ಯಾರಿಗೂ ತೊಂದರೆ ಕೊಡದ ಮಗು ಅವಳು. ದೇವರಿಗೆ ಒಳ್ಳೆಯವರೇ ತುಂಬ ಇಷ್ಟಆಗ್ತಾರೇನೋ. ಅದಕ್ಕೆ ಅಂಥವರನ್ನು ಬೇಗ ಕರೆಸ್ಕೊಳ್ತಾನೆ.
- ಜಯಮಾಲ, ಹಿರಿಯ ನಟಿ
ಸ್ಪಂದನಾ ಇನ್ನಿಲ್ಲ ಅನ್ನುವ ಸುದ್ದಿ ನಂಬುವುದೇ ಅಸಾಧ್ಯ. ಅವಳು ನನ್ನ ಸ್ವಂತ ಮಗಳಿದ್ದ ಹಾಗೆ. ಕಲಾವಿದರೆಲ್ಲ ಒಂದೇ ಕುಟುಂಬದವರು ಅಂತ ಅಣ್ಣಾವ್ರು ಹೇಳುತ್ತಿದ್ದರು. ವಿಜಯ್ ರಾಘವೇಂದ್ರ ಯಾರಿಗೂ ನೋವು ಕೊಟ್ಟವರಲ್ಲ. ಅವರಿಗೆ ಹೀಗೆ ಆಗುತ್ತೆ ಅಂದರೆ ಇಡೀ ಚಿತ್ರರಂಗಕ್ಕೆ ಆಘಾತವಾದ ಹಾಗೆ.
- ದೊಡ್ಡಣ್ಣ , ಹಿರಿಯ ನಟ
Spandana Death: 'ಜೀವ ಹೂವಾಗಿದೆ' ಹಾಡಿಗೆ ಸ್ಟೆಪ್ ಹಾಕಿದ್ದ ವಿಜಯ- ಸ್ಪಂದನಾ ಜೋಡಿ; ಫ್ಯಾನ್ಸ್ ಕಣ್ಣೀರು
ವಿಷಯ ತಿಳಿದಾಗ ನಾನು ದೆಹಲಿಯಲ್ಲಿದ್ದೆ. ಸುದ್ದಿ ಕೇಳಿ ಆಘಾತವಾಯ್ತು. ಬಾಳಿ ಬದುಕಬೇಕಾದ ಮಕ್ಕಳು ಈ ಥರ ಆಗೋಯ್ತಲ್ಲಾ ಅಂತ. ಆತ್ಮಕ್ಕೆ ಶಾಂತಿ ಸಿಗಲಿ ಅಂತಷ್ಟೇ ಈಗ ಹೇಳಲು ಸಾಧ್ಯ. ನನ್ನ ಮಗ ಮತ್ತು ರಾಘು ಇಬ್ಬರೂ ಸ್ನೇಹಿತರು. ನಮ್ಮ ಕಣ್ಣಮುಂದೆ ಆಡಿ ಬೆಳೆದ ಮಕ್ಕಳಿಗೆ ಹೀಗೆ ಆಗ್ತಿದೆ ಅಂದರೆ ಜೀರ್ಣಿಸಿಕೊಳ್ಳೋದು ಕಷ್ಟ.
- ಜಗ್ಗೇಶ್, ನಟ
ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಸಂತೋಷದ ಜೋಡಿಯಾಗಿದ್ದರು. ಇದೀಗ ಸೃಷ್ಟಿಯಾಗಿರುವ ಶೂನ್ಯವನ್ನು ಎದುರಿಸುವ ಮತ್ತು ಅದನ್ನು ದಾಟಿಬರುವ ಶಕ್ತಿ ವಿಜಯ್ ರಾಘವೇಂದ್ರಗೆ ದಕ್ಕಲಿ ಎಂಬುದೇ ನಮ್ಮ ಪ್ರಾರ್ಥನೆ. ವಿಜಯ್ ರಾಘವೇಂದ್ರ ಕುಟುಂಬಕ್ಕೆ ಸಂತಾಪಗಳು.
- ರಮೇಶ್ ಅರವಿಂದ್