Spandana Vijay Raghavendra No More: ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹದ ಪೋಸ್ಟ್‌ ಮಾರ್ಟಂ ಥಾಯ್ಲೆಂಡ್‌ನಲ್ಲಿ ಮುಕ್ತಾಯವಾಗಿದೆ. ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರುವ ನಿಟ್ಟಿನಲ್ಲಿ ತಯಾರಿ ಆರಂಭವಾಗಿದೆ. 

ಬೆಂಗಳೂರು (ಆ.7): ಸ್ಯಾಂಡಲ್‌ವುಡ್‌ನ ಅಪರೂಪದ, ಅನುರೂಪದ ಜೋಡಿಯಾಗಿದ್ದ ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾರನ್ನು ವಿಧಿ ಬೇರೆ ಮಾಡಿದೆ. ಬ್ಯಾಂಕಾಂಕ್‌ ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ವಿಜಯ್‌ ಅವರಿಗೆ ಮಲಗಿದ್ದಲ್ಲೇ ಹೃದಯಾಘಾತವಾಗಿ ಸಾವು ಕಂಡಿದ್ದಾರೆ. ಅಕಾಲಿಕವಾಗಿ ಸಾವು ಕಂಡ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆಯನ್ನು ಥಾಯ್ಲೆಂಡ್‌ನಲ್ಲಿಯೇ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಆರಂಭವಾಗಿದ್ದ ಮರಣೋತ್ತರ ಪರೀಕ್ಷೆ ಸಂಜೆಯ ವೇಳೆಗೆ ಮುಕ್ತಾಯ ಕಂಡಿದ್ದು, ಮೃತದೇಹವನ್ನು ಬೆಂಗಳೂರಿಗೆ ತರುವ ನಿಟ್ಟಿನಲ್ಲಿ ತಯಾರಿ ನಡೆಸಲಾಗುತ್ತಿದೆ ಎಂದು ಸ್ಪಂದನಾ ಅವರ ದೊಡ್ಡಪ್ಪ ಕಾಂಗ್ರೆಸ್‌ ನಾಯಕ ಬಿಕೆ ಹರಿಪ್ರಸಾದ್‌ ಹೇಳಿದ್ದಾರೆ. ಮಂಗಳವಾರ ಸಂಜೆಯ ವೇಳೆಗೆ ಮೃತದೇಹ ಬೆಂಗಳೂರಿಗೆ ಬರಲಿದ್ದು, ಬುಧವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಂತ್ಯಕ್ರಿಯೆ ಎಲ್ಲಿ ನಡೆಯಬೇಕು ಎನ್ನುವ ಬಗ್ಗೆ ವಿಜಯ್‌ ರಾಘವೇಂದ್ರ ಹಾಗೂ ಅವರ ಕುಟುಂಬ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.

'ಥಾಯ್ಲೆಂಡ್‌ನಲ್ಲಿ ಪೋಸ್ಟ್ ಮಾರ್ಟಂ ಮುಕ್ತಾಯವಾಗಿದೆ. ವಿದೇಶಾಂಗ ಇಲಾಖೆ ಪ್ರಕ್ರಿಯೆ ಮುಗಿದ ನಂತರ ಪಾರ್ಥಿವ ಶರೀರರವನ್ನು ತರುವ ಕೆಲಸ ನಡೆಯಲಿದೆ. ನಾಳೆ ಸಂಜೆ ವೇಳೆ ಮೃತದೇಹವನ್ನು ಬೆಂಗಳೂರಿಗೆ ತರಲಾಗುತ್ತದೆ. ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ. ಎಲ್ಲಿ ಅಂತ್ಯಕ್ರಿಯೆ ಮಾಡಬೇಕು ಅನ್ನೋದನ್ನ ವಿಜಯರಾಘವೇಂದ್ರ ನಿರ್ಧಾರ ಮಾಡಲಿದ್ದಾರೆ. ವಿದೇಶಾಂಗ ಇಲಾಖೆ ಸಂಬಂಧಪಟ್ಟ ದಾಖಲೆಗಳು ಕೂಡ ಕ್ಲಿಯರ್‌ ಆಗಿದೆ. ಕೆಲವೊಂದು ಸಣ್ಣಪುಟ್ಟ ವಿಚಾರಣೆಗಳಿದ್ದು, ಆ ಬಳಿಕ ಮೃತದೇಹ ತರುವ ಪ್ರಕ್ರಿಯೆ ನಡೆಯಲಿದೆ' ಎಂದು ಬಿಕೆ ಹರಿಪ್ರಸಾದ್‌ ತಿಳಿಸಿದ್ದಾರೆ.

ಪೋಸ್ಟ್‌ ಮಾರ್ಟಂ ಹಾಗೂ ವಿದೇಶಾಂಗ ಇಲಾಖೆಯ ಪ್ರಕ್ರಿಯೆ ಬೇಗ ಮುಗಿದಿದ್ದರೆ, ವಿಶೇಷ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ತರಬಹುದಿತ್ತು. ಆದರೆ, ಅಲ್ಲಿನ ವಿಧಿವಿಧಾನ ಮುಗಿಯೋದು ಸ್ವಲ್ಪ ತಡವಾಗಿದೆ. ಕಾರ್ಗೋ ವಿಮಾನ ಇದೆ, ಅದರಲ್ಲಿಯೇ ತರಲು ಚಿಂತನೆ ನಡೆದಿದೆ. ಬೇಗ ಅಲ್ಲಿ ವಿಧಿವಿಧಾನ ಮುಗಿದಿದ್ದರೆ, ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರ ತರುತ್ತಿದ್ದೆವು ಎಂದು ತಿಳಿಸಿದ್ದಾರೆ. ಬೆಂಗಳೂರಿನಿಂದ ಕೆಲವರು ಬ್ಯಾಂಕಾಂಕ್‌ಗೆ ಹೋಗೋಣ ಎಂದುಕೊಂಡಿದ್ದೆವು. ಆದರೆ, ನಾವು ಹೋಗೋ ಅಷ್ಟರಲ್ಲಿ ಸಮಯ ಆಗುತ್ತೆ. ಆ ಕಾರಣದಿಂದ ನಾವ್ಯಾರೂ ಇಲ್ಲಿಂದ ಹೋಗ್ತಾ ಇಲ್ಲ. ನಾಳೆ ರಾತ್ರಿ 11:30ರ ಹೊತ್ತಿಗೆ ಮೃತದೇಹ ಬರಬಹುದು' ಎಂದು ಹೇಳಿದ್ದಾರೆ. ಈಡಿಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ತೀರ್ಮಾನಿಸಲಾಗಿದೆ.

ಅತಿಯಾದ ಒತ್ತಡ, ವ್ಯಾಯಾಮ ನವಯುಗದ ತಂಬಾಕು: ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಮಂಜುನಾಥ್‌

ಬೆಂಗಳೂರಿಗೆ ವಾಪಸಾದ ಶಿವರಾಜ್‌ ಕುಮಾರ್‌: ವಿಜಯ್‌ ರಾಘವೇಂದ್ರ ಅವರ ತಂದೆ ಎಸ್‌ಎ ಚಿನ್ನೇಗೌಡ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಅಕ್ಕ-ತಮ್ಮ. ವಿಜಯ್‌ ರಾಘವೇಂದ್ರ ಪತ್ನಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ನಟ ಶಿವರಾಜ್‌ ಕುಮಾರ್‌ ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಭೈರತಿ ರಣಗಲ್‌ ಸಿನಿಮಾದ ಶೂಟಿಂಗ್‌ನಲ್ಲಿ ಶಿವರಾಜ್‌ಕುಮಾರ್‌ ಭಾಗಿಯಾಗಿದ್ದರು.

RIP Spandana Vijay: ಕೋವಿಡ್‌ ಬಳಿಕ ಹೃದಯಾಘಾತದಲ್ಲಿ ದಿಢೀರ್‌ ಏರಿಕೆ, ಐಸಿಎಂಆರ್‌ ಅಧ್ಯಯನ!