ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿರುವ ನಡುವೆಯೇ, ಅವರ ಹನಿಮೂನ್ ವಿಷ್ಯವನ್ನು ಕೇಳಿರೋ ಆ್ಯಂಕರ್ ಅನುಶ್ರೀ ನಾಚಿ ನೀರಾಗಿರೋ ವಿಡಿಯೋ ವೈರಲ್ ಆಗಿದೆ. ಏನದು?
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್ 11ರಂದು ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದೀಗ ಅವರು ಮದುವೆಯ ಬಳಿಕ ಮಾದೇವ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿ ಅದು ಬಿಡುಗಡೆಯಾಗಲಿದೆ. ನವೀನ್ ರೆಡ್ಡಿ ಬಿ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರವು ಕಳೆದ, ಮೇ 30 ರಂದು ತೆರೆಕಂಡಿದೆ. ಈ ಚಿತ್ರದ ಖುಷಿಯಲ್ಲಿದ್ದಾರೆ ನಟಿ.
ಇದರ ನಡುವೆಯೇ, ಆ್ಯಂಕರ್ ಅನುಶ್ರೀ ಅವರು ಈ ಜೋಡಿಯ ಸಂದರ್ಶನ ಮಾಡಿರುವ ಹಳೆಯ ವಿಡಿಯೋ ಮತ್ತೊಮ್ಮೆ ಇದೀಗ ವೈರಲ್ ಆಗ್ತಿದೆ. ಈ ಜೋಡಿಯ ಜೊತೆ ನೆನಪಿರಲಿ ಪ್ರೇಮ್ ಕೂಡ ಸಂದರ್ಶನದಲ್ಲಿ ಹಾಜರಿದ್ದರು. ಈ ಸಮಯದಲ್ಲಿ ತರುಣ್ ಮತ್ತು ಸೋನಲ್ ಅವರಿಗೆ ಅನುಶ್ರೀ ಹನಿಮೂನ್ ಪ್ರಶ್ನೆ ಕೇಳಿದ್ದಾರೆ. ಇಬ್ಬರಲ್ಲಿ ಹನಿಮೂನ್ ಅರ್ಜೆಂಟ್ ಇರೋದು ಯಾರಿಗೆ ಎಂದು ಪ್ರಶ್ನಿಸಿದಾಗ, ಸೋನಲ್ ಅವರು ತರುಣ್ಗೆ ಎಂದು ಹೇಳಲು ಅವರಿಗೆ ಕಿಸ್ ಮಾಡಿದ್ದಾರೆ. ಇದನ್ನು ನೋಡಿ ಆ್ಯಂಕರ್ ಅನುಶ್ರೀ ಮತ್ತು ಪ್ರೇಮ್ ಇಬ್ಬರೂ ಜೋರಾಗಿ ನಕ್ಕಿದ್ದಾರೆ. ಆಗ ನಮ್ಮ ಕಷ್ಟ ನಮಗೆ ಎಂದು ತರುಣ್ ಚಟಾಕಿ ಹಾರಿಸಿದ್ದಾರೆ. ಇದೇ ವೇಳೆ, ಇನ್ನಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಅನುಶ್ರೀ ಎಲ್ಲರನ್ನೂ ನಕ್ಕು ನಗಿಸಿದ್ದಾರೆ.
ಇಬ್ಬರಲ್ಲಿ ಪಾರ್ಟಿ ಯಾರು ಜಾಸ್ತಿ ಮಾಡೋದು ಎಂದು ಪ್ರಶ್ನಿಸಿದಾಗ ತರುಣ್ ಅವರು ಸೋನಲ್ ಮನೆಯವರು ಎಂದು ಹೇಳಿದ್ದಾರೆ. ಕಾರಣವೇ ಬೇಕೆಂದೇನೂ ಇಲ್ಲ, ಎಲ್ಲದ್ದಕ್ಕೂ ಪಾರ್ಟಿ ಮಾಡ್ತಾರೆ ಇವರ ಮನೆಯಲ್ಲಿ ಎಂದಾಗ, ಅನುಶ್ರೀ ಅವರು ಮಂಗಳೂರಿನ ನಾವು ಹಾಗೇ ಸ್ವಾಮಿ, ಎಲ್ಲದ್ದಕ್ಕೂ ಪಾರ್ಟಿ ಎಂದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಕ್ಯೂಟ್ ಜೋಡಿಗೆ ಅಭಿಮಾನಿಗಳು ಮತ್ತೊಮ್ಮೆ ಶುಭ ಕೋರುತ್ತಿದ್ದಾರೆ. ಇನ್ನು ತರುಣ್ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್ ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್ ಫ್ಯಾಕ್ಟರಿ, ಬನಾರಸ್, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್, ಶಂಭೋ ಶಿವ ಶಂಕರ್ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.
ಸೋನಲ್ ಅವರು ನಟಿಸಿರುವ ಮಾದೇವ ಚಿತ್ರ ಕಳೆದ ಮೇನಲ್ಲಿ ತೆರೆಕಂಡಿದೆ. ಆ್ಯಕ್ಷನ್ ಪ್ರಧಾನ ಪಾತ್ರಗಳಿಂದ ಹೃದಯ ಗೆದ್ದಿರುವ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ ಈ ಚಿತ್ರಕ್ಕೆ ಖಾಕಿ ಚಿತ್ರದ ನಂತರ ನವೀನ್ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕಾಗಿ ತಾವೇ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಈ ಚಿತ್ರಕ್ಕೆ ಪ್ರದ್ಯೋತನ್ ಅವರ ಸಂಗೀತ ಸಂಯೋಜನೆ, ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಅವರ ಸಂಕಲನ, ಗುಣ ಅವರ ಕಲಾ ನಿರ್ದೇಶನ, ಜೊತೆಗೆ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ರಿಯಲ್ ಸತೀಶ್ ಮತ್ತು ವಿಕ್ರಮ್ ಮೋರ್ ಅವರ ಸಾಹಸ ಸಂಯೋಜನೆ ಇದೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಲ್ ಮೊಂತೆರೋ ನಟಿಸಿದ್ದಾರೆ.

