ಸೀರೆ ಮತ್ತು ಲಂಗ-ದಾವಣಿ ಹಾಕಿಕೊಂಡರೆ ದರ್ಶನ್ ಸರ್ ಬೈತಾರೆ ಎನ್ನುವ ಮೂಲಕ ನಟಿ ಸೋನಲ್ ಮೊಂಥೆರೋ ಕುತೂಹಲದ ಕಾರಣವನ್ನು ತೆರೆದಿಟ್ಟಿದ್ದಾರೆ.
ನಟಿ ಸೋನಲ್ ಮೊಂಥೆರೋ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ವೈವಾಹಿಕ ಜೀವನ ಎಂಜಾಯ್ ಮಾಡ್ತಿರೋ ನಡುವೆಯೇ, ಮದುವೆಯ ಬಳಿಕ ಸೋನಲ್ ಅವರ ಮೊದಲ ಚಿತ್ರ ಮಾದೇವ ಬಿಡುಗಡೆಗೆ ಸಜ್ಜಾಗಿದೆ. ಅಷ್ಟಕ್ಕೂ ಸಿನಿ ಪ್ರಿಯರಿಗೆ ಇದಾಗಲೇ ತಿಳಿದಿರುವಂತೆ, ತರುಣ್ ಸುಧೀರ್ ಅವರು ಮೊದಲಿನಿಂದಲೂ ನಟ ದರ್ಶನ್ ಅವರಿಗೆ ಅತ್ಯಾಪ್ತರಾಗಿದ್ದಾರೆ. ಸೋನಲ್ ಮೊಂಥೆರೋ ಕೂಡ ದರ್ಶನ್ ಅವರಿಗೆ ಪ್ರತಿಬಾರಿಯೂ ರಾಖಿ ಕಟ್ಟುತ್ತಾರೆ. ರಾಖಿ ಅಣ್ಣ ಅವರು. ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸೋನಲ್ ಸಹ ನಟಿಸಿದ್ದರು. ಅಂದಿನ ಪರಿಚಯ ಈಗಲೂ ಉತ್ತಮವಾಗಿಯೇ ಇದೆ. ಇವರಿಬ್ಬರ ನಡುವೆ ಅಣ್ಣ-ತಂಗಿ ಸಂಬಂಧವಿದೆ. ಇದೇ ಕಾರಣಕ್ಕೆ ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಜೈಲುಪಾಲಾದಾಗ ಇಬ್ಬರೂ ಬಹಳ ನೊಂದುಕೊಂಡಿದ್ದರು.
ಇದೀಗ ಮಾದೇವ ಚಿತ್ರದ ಬಗ್ಗೆ ನೀಡಿರುವ ಸಂದರ್ಶನದಲ್ಲಿ ನಟಿ ಸೋನಲ್ ಅವರು ಕುತೂಹಲದ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ. ಅದೇನೆಂದರೆ, ಈ ಚಿತ್ರದಲ್ಲಿ ಸೋನಲ್ ಅವರು ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಮಾದೇವ ಶೂಟಿಂಗ್ ಟೈಮಲ್ಲಿ ದರ್ಶನ್ ಸರ್ ಜೊತೆ ಮಾತನಾಡಿದೆ. ಆಗ ಅವರು ಶೂಟಿಂಗ್ ಬಗ್ಗೆ ಎಲ್ಲಾ ಪ್ರಶ್ನಿಸಿದ್ರು. ಈ ಸಿನಿಮಾದಲ್ಲಿ ಲಂಗ ದಾವಣಿ ಹಾಕಿಕೊಳ್ಳುವುದು ತಿಳಿದ ತಕ್ಷಣ, ಥೂ ಸೀರೆ, ಲಂಗ ದಾವಣಿಯೆಲ್ಲಾ ನಿನಗೆ ಸೂಟ್ ಆಗಲ್ಲ. ಅದರಲ್ಲಿ ನಿನ್ನನ್ನು ನೋಡೋಕೆ ಆಗಲ್ಲ ಎಂದು ಹೇಳಿದರು ಎಂದು ನಕ್ಕಿದ್ದಾರೆ. ಅಷ್ಟಕ್ಕೂ ಇದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ದರ್ಶನ್ ಅವರು ಸೋನಲ್ ಅವರನ್ನು ಬ್ರೋ ಬ್ರೋ ಎಂದೇ ಕರೆಯುವುದು.
ಹಿಂದೊಮ್ಮೆ ಸೋನಲ್ ನಟಿಸಿದ್ದ ಗರಡಿ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ದರ್ಶನ್ ಅವರು ಸೋನಲ್ ಕುರಿತು ಮಾತನಾಡುತ್ತಾ, ಅಕ್ಚ್ಯುಲಿ ಸೋನಲ್ (Sonal Monteiro) ಯಾವತ್ತೂ ನಂಗೆ ಹುಡ್ಗಿ ಅಂತ ಅನ್ನಿಸ್ಲೇ ಇಲ್ಲ..ಅನ್ಸೋದೂ ಇಲ್ಲ, ಅವ್ಳು ಒಂಥರಾ ಹುಡಗ್ರ ಥರಾನೇ! ನಮ್ ಗುಂಪಲ್ಲಿ ಬರೀ ಹುಡುಗ್ರೇ ಇರ್ತೀವಿ, ಅದ್ರಲ್ಲಿ ಒಂದ್ ಎಕ್ಸೆಪ್ಶನ್ ಅಂದ್ರೆ ಅದು ಸೋನಲ್ ಒಬ್ರೇನೇ.. ನಮ್ ಜೊತೆ ಹೊರಗಡೆ ಬರುವಾಗ, ಸಾರಿ, ಈ ಥರ ಎಲ್ಲಾ ಡ್ರೆಸ್ ಎಲ್ಲಾ, ಇದೇನಿದು ಹೊಸ ಅವತಾರ ಅನ್ನೋ ತರ.. ಸೋನಲ್ ಅವ್ರು ನಮ್ಗೆಲ್ಲಾ ಒಂಥರಾ ಹುಡುಗ್ರ ಥರಾನೇ.. ಎಂದಿದ್ದರು. ಆದ್ದರಿಂದ ಹುಡುಗಿಯ ರೀತಿಯಲ್ಲಿ ಸೀರೆ- ಲಂಗ-ದಾವಣಿಯಲ್ಲಿ ಅವರನ್ನು ನೋಡಲು ಆಗುವುದಿಲ್ಲ ಎನ್ನುವುದು ದರ್ಶನ್ ಅವರ ಮಾತು. ಇನ್ನೊಂದು ಸಂಗತಿ ಎಂದರೆ, ಸೋನಲ್ ಹಾಗೂ ತರುಣ್ ಲವ್ & ಮದುವೆಯಲ್ಲಿ ನಟ ದರ್ಶನ್ ಅವರದೂ ಮುಖ್ಯ ಪಾತ್ರವಿದೆ ಎನ್ನಲಾಗಿದೆ. ನಟ ದಶ್ನ್ ಅವರು ಮಾಡಿರುವ ತಮಾಷೆಯನ್ನೇ ಸೀರಿಯಸ್ ಆಗಿ ಅವರಿಬ್ಬರೂ ತೆಗೆದುಕೊಂಡು ಬಳಿಕ ಅವರು ಲವ್ವಲ್ಲಿ ಬಿದ್ದು ಈಗ ಮದುವೆ ಆಗಿದ್ದಾರೆ ಎನ್ನಲಾಗಿದೆ. ಸತ್ಯ ಸಂಗತಿ ಅವರವರಿಗೇ ಗೊತ್ತು! ದರ್ಶನ್ ನಟನೆಯ ಕಾಟೇರ ಚಿತ್ರದ ನಿರ್ದೇಶಕರಾಗಿರುವ ತರುಣ್ ಸುಧೀರ್ ಅವರು ದರ್ಶನ್ ಅವರಿಗೆ ಅತ್ಯಾಪ್ತರಂತೂ ಹೌದು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ದರ್ಶನ್ ಅವರು ಸೋನಲ್ ಬಗ್ಗೆ ಹೀಗೆ ಹೇಳಿದ ಬಳಿಕ. ಸೋನಲ್ ಅವರು ದರ್ಶನ್ ಅವರಿಗೆ ಸಿಸ್ಟರ್ ಅಲ್ಲ, 'ಬ್ರದರ್' ಎಂದು ಎಲ್ಲರೂ ತಮಾಷೆ ಮಾಡಿದ್ದುಂಟು.
ಇನ್ನು ಮಾದೇವ ಚಿತ್ರದ ಕುರಿತು ಹೇಳುವುದಾದರೆ, ನವೀನ್ ರೆಡ್ಡಿ ಬಿ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಮೇ 30 ರಂದು ತೆರೆಕಾಣಲಿದೆ. ಆ್ಯಕ್ಷನ್ ಪ್ರಧಾನ ಪಾತ್ರಗಳಿಂದ ಹೃದಯ ಗೆದ್ದಿರುವ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ ಈ ಚಿತ್ರಕ್ಕೆ ಖಾಕಿ ಚಿತ್ರದ ನಂತರ ನವೀನ್ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕಾಗಿ ತಾವೇ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಈ ಚಿತ್ರಕ್ಕೆ ಪ್ರದ್ಯೋತನ್ ಅವರ ಸಂಗೀತ ಸಂಯೋಜನೆ, ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಅವರ ಸಂಕಲನ, ಗುಣ ಅವರ ಕಲಾ ನಿರ್ದೇಶನ, ಜೊತೆಗೆ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ರಿಯಲ್ ಸತೀಶ್ ಮತ್ತು ವಿಕ್ರಮ್ ಮೋರ್ ಅವರ ಸಾಹಸ ಸಂಯೋಜನೆ ಇದೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಲ್ ಮೊಂತೆರೋ ನಟಿಸಿದ್ದಾರೆ.
