Renu Sudhi: ರೇಣು ಸುಧಿ ತಮಗೆ ಕ್ಯಾನ್ಸರ್ ಇರುವುದನ್ನು ಮೊದಲ ಬಾರಿಗೆ ನಿನ್ನೆ ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಈ ಮೂಲಕ ಅವರು ತೆರೆ ಎಳೆದಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್ ರೇಣು ಸುಧಿ ತಮಗೆ ಕ್ಯಾನ್ಸರ್ ಇರುವುದನ್ನು ಮೊದಲ ಬಾರಿಗೆ ನಿನ್ನೆ ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಈ ಮೂಲಕ ಅವರು ತೆರೆ ಎಳೆದಿದ್ದಾರೆ. ಒಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರೇಣು ಈ ಸತ್ಯವನ್ನು ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ, ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ತಮ್ಮ ಫಾಲೋವರ್ಸ್‌ ಬಳಿ ನನಗಾಗಿ ಪ್ರಾರ್ಥಿಸಿ ಎಂದು ಅವರು ಮನವಿ ಮಾಡಿದ್ದಾರೆ. "ನಾನೊಬ್ಬಳು ಹೋರಾಟಗಾರ್ತಿ. ದಯವಿಟ್ಟು ನನಗಾಗಿ ಪ್ರಾರ್ಥಿಸಿ. ನನ್ನ ರಿಥಪ್ಪನ್‌ಗೋಸ್ಕರ, ನನಗಾಗಿ ಪ್ರಾರ್ಥಿಸಿ" ಎಂದು ರೇಣು ಸುಧಿ ಬರೆದುಕೊಂಡಿದ್ದಾರೆ. ರೇಣು ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡ ಬೆನ್ನಲ್ಲೇ, ಅವರ ಸ್ನೇಹಿತರು ಹಾಗೂ ಹಲವು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಅವರಿಗೆ ಬೆಂಬಲ ಮತ್ತು ಧೈರ್ಯ ತುಂಬಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. 15 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಒಂದು ಗಡ್ಡೆಯೇ ನಂತರ ಕ್ಯಾನ್ಸರ್ ಆಗಿ ಬದಲಾಗಿದೆ ಎಂದು ರೇಣು ನಿನ್ನೆ ಹೇಳಿದ್ದರು. ಆಗಲೇ ಸರಿಯಾದ ಚಿಕಿತ್ಸೆ ಪಡೆದಿದ್ದರೆ ಈ ಸ್ಥಿತಿಗೆ ಬರುತ್ತಿರಲಿಲ್ಲ, ಈಗ ರೋಗ ನಾಲ್ಕನೇ ಹಂತಕ್ಕೆ ತಲುಪುತ್ತಿದೆ ಎಂದೂ ಅವರು ನೋವಿನಿಂದ ಹೇಳಿಕೊಂಡಿದ್ದರು.

ರೇಣು ಸುಧಿ ಮಾತುಗಳು

"ನನಗೆ ಕ್ಯಾನ್ಸರ್ ಇದೆ. ಇಷ್ಟು ದಿನ ನನ್ನನ್ನು ಪ್ರೀತಿಸುವವರಿಂದ ಈ ವಿಚಾರ ಮುಚ್ಚಿಟ್ಟಿದ್ದೆ. ಆದರೆ ಈಗ ಹೇಳುವ ಸಮಯ ಬಂದಿದೆ ಅನಿಸುತ್ತಿದೆ. ಅನೇಕರಿಗೆ ತಪ್ಪು ತಿಳುವಳಿಕೆಗಳಿವೆ. ದುಬೈನಲ್ಲಿ ಇದು ಖಚಿತವಾಯ್ತು ಅಂತ ಹಲವರು ಅಂದುಕೊಂಡಿದ್ದಾರೆ. ಆದರೆ ಅದು ನಿಜವಲ್ಲ. ನನಗೆ 15 ವರ್ಷ ಇದ್ದಾಗ ಮೊದಲ ಬಾರಿಗೆ ಸ್ತನದಲ್ಲಿ ಒಂದು ಗಡ್ಡೆ ಕಾಣಿಸಿಕೊಂಡಿತ್ತು. ಅದೇ ಗಡ್ಡೆ ಈಗ ಕ್ಯಾನ್ಸರ್ ಆಗಿದೆ. 15ನೇ ವಯಸ್ಸಲ್ಲಿ ನಾನದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಮನೆಯವರಿಗೂ ಹೇಳಲಿಲ್ಲ. ತುಂಬಾ ದಿನಗಳ ನಂತರ ಡಿಪ್ಲೋಮಾ ಓದುತ್ತಿದ್ದಾಗ ಮನೆಯವರಿಗೆ ಈ ವಿಚಾರ ತಿಳಿಯಿತು. ಅವರು ನನ್ನನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದರು. ಇದು 15-16 ವರ್ಷಗಳ ಹಿಂದಿನ ಮಾತು. ಆಗ ಬಯಾಪ್ಸಿ ಮಾಡಿಸಿದ್ದರು. ಆಗ ಡಾಕ್ಟರ್, 'ಇದನ್ನು ಹೀಗೆ ಇಟ್ಟುಕೊಳ್ಳಬೇಡಿ' ಅಂದಿದ್ದರು. ಈಗ ದೊಡ್ಡ ತೊಂದರೆ ಇಲ್ಲದಿದ್ದರೂ, ಮುಂದೆ ಕ್ಯಾನ್ಸರ್ ಆಗಬಹುದು ಅಂತಾನೂ ಡಾಕ್ಟರ್ ಹೇಳಿದ್ದರು. ಆ ಸಮಯದಲ್ಲಿ ನನಗೆ ಅಪೆಂಡಿಸೈಟಿಸ್ ಆಪರೇಷನ್ ಆಗಿತ್ತು. ಅದು ಸ್ವಲ್ಪ ನೋವು ಕೊಟ್ಟಿತ್ತು. ಆ ಭಯದಿಂದ ನಾನು ಇದನ್ನು ಮನೆಯಲ್ಲಿ ಹೇಳಲಿಲ್ಲ."

"ಸುಧಿಚೇಟ್ಟನ್ ಸಾವಿನ ನಂತರ ಒಮ್ಮೆ ಡಾಕ್ಟರ್ ನೋಡಿದಾಗ ಸ್ಕ್ಯಾನ್ ಮಾಡಲು ಹೇಳಿದರು. ಸ್ಕ್ಯಾನಿಂಗ್ ರಿಸಲ್ಟ್ ನೋಡಿ ಅನುಮಾನ ಬಂದು, ಮ್ಯಾಮೋಗ್ರಾಮ್ ಮಾಡಲು ಹೇಳಿದರು. ಮ್ಯಾಮೋಗ್ರಾಮ್‌ನಲ್ಲೂ ಅನುಮಾನ ಬಂದಾಗ ಬಯಾಪ್ಸಿ ಮಾಡಲು ಸೂಚಿಸಿದರು. ಅದರ ರಿಸಲ್ಟ್ ತರಲು ನಾನೊಬ್ಬಳೇ ಹೋಗಿದ್ದೆ. ಆಗ ಅವರು ಕ್ಯಾನ್ಸರ್ ಅಂತ ಹೇಳಿದರು. ನಾನು ಏನೂ ಮಾತನಾಡಲಿಲ್ಲ. ಆ ರಿಸಲ್ಟ್ ಮನೆಗೆ ತಂದು ಎರಡು ಮೂರು ದಿನ ಯಾರಿಗೂ ಹೇಳದೆ ಇಟ್ಟಿದ್ದೆ. ಮೊದಲು ಖಾಸಗಿ ಆಸ್ಪತ್ರೆಯಲ್ಲಿ, ನಂತರ ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷೆ ಮಾಡಿಸಿದೆ. ಮೆಡಿಕಲ್ ಕಾಲೇಜಿನಲ್ಲೂ ಕ್ಯಾನ್ಸರ್ ಅನ್ನೋದು ಖಚಿತವಾಯ್ತು. ಮೂರನೇ ಹಂತ ಮುಗಿಯುವ ಘಟ್ಟದಲ್ಲಿದೆ ಅಂತ ಡಾಕ್ಟರ್ ಹೇಳಿದ್ದಾರೆ. ಕೀಮೋಥೆರಪಿ ಶುರು ಮಾಡಬೇಕು ಅಂದಿದ್ದಾರೆ. ಸದ್ಯದಲ್ಲೇ ಅದು ಶುರುವಾಗಲಿದೆ."