ಸಿಂಪಲ್ ಸುನಿ ಹಾರಿಸಿದ ಎರಡನೇ ಪಾರಿವಾಳ

Simple Suni new movies shooting complete
Highlights

ಜನ್ರಿಗೊಂದು ಮೆಸೇಜ್ ಕೊಡೋಣ ಅಂತ ‘ಬಹುಪರಾಕ್’ ಮಾಡ್ದೆ. ಆದ್ರೆ, ಜನ್ರೇ ನಂಗೊಂದು ಒಂದು ಮೆಸೇಜ್ ಕೊಟ್ಟು ಬಹುಪರಾಕ್ ಅಂದ್ರು. ಹಾಗಾಗಿ ಬೇರೆ ರೀತಿಯ ಕತೆ ಹೇಳೋಣ ಅಂತ ಎನಿಸಿತು. ಅದಕ್ಕಾಗಿ ಈ ಪಾರಿವಾಳ ಹಿಡ್ಕೊಂಡು ಬಂದೆ! -ಒಂದ್ರೀತಿ ವಿಷಾದ ಭರಿತ ದನಿಯಲ್ಲಿ ತಮಾಷೆ ಮಾಡಿಕೊಂಡು ‘ಬಜಾರ್’ಗೆ ಬಂದು ನಿಂತರು ನಿರ್ದೇಶಕ ಸಿಂಪಲ್ ಸುನಿ.

‘ಬಜಾರ್’ ಚಿತ್ರದ ಶೂಟಿಂಗ್ ಮುಗಿದಿದೆ. ಈಗ ಮತ್ತೊಂದು ಟೀಸರ್ ಮೂಲಕ ಸುದ್ದಿ ಮಾಡಿದ್ದಾರೆ. ಆ ಟೀಸರ್ ಲಾಂಚ್‌ಗೆ ಅಂತ ಅವರು ಇತ್ತೀಚೆಗೆ ಚಿತ್ರತಂಡದೊಂದಿಗೆ ಮಾಧ್ಯಮ ಮುಂದೆ ಬಂದಿದ್ದರು. ಮಾತಿಗೆ ಮೊದಲು ಅಲ್ಲಿ ನಡೆದಿದ್ದು ಟೀಸರ್ ಲಾಂಚ್. ಒಂದೂವರೆ ನಿಮಿಷದ ಟೀಸರ್ಗೆ ಪಕ್ಕಾ ಮಾಸ್ ಲುಕ್ ಇದೆ. ಬೆಳ್ಳಿ ಪರದೆ ಮೇಲೆ ಟೀಸರ್ ನೋಡಿದ ಮೇಲೆ ಶುರುವಾಗಿದ್ದು ಅಲ್ಲಿ ಮಾತಿನ ಸರದಿ.

ಸುನಿ ಸ್ಪೀಕಿಂಗ್

‘ಬಜಾರ್ ಮೂಲಕ ನಾನಿಲ್ಲಿ ಹೇಳಹೊರಟಿದ್ದು ಪಾರಿವಾಳದ ರೇಸ್ ಕತೆ. ಇಡೀ ಕತೆ ಪಾರಿವಾಳದ ಅಡ್ಡದಲ್ಲೇ ನಡೆಯುತ್ತದೆ. ಬೆಂಗಳೂರಿನ ಪ್ರಕಾಶನಗರದ ಪಾರಿವಾಳದ ಒಂದು ಅಡ್ಡದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಡಾಬಸ್ಪೇಟೆ, ಹೆಸರಘಟ್ಟ ಸೇರಿದಂತೆ ಒಂದಷ್ಟು ಹೊರವಲಯದಲ್ಲೂ ಶೂಟಿಂಗ್ ನಡೆದಿದೆ. ಒಂದು ಹಾಡಿಗಾಗಿ ಬ್ಯಾಂಕಾಕ್ ಹೋಗಬೇಕಾಗಿ ಬಂತು. ಅಲ್ಲೂ ನಾವು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡಿದ್ದ ಲೊಕೇಷನ್ ಇದುವರೆಗೂ ಯಾವುದೇ ಕನ್ನಡ ಸಿನಿಮಾದಲ್ಲಿ ಕಂಡಿಲ್ಲ. ತುಂಬಾ ಸುಂದರವಾದ ತಾಣ. ೭೫ ದಿನಗಳ ಶೆಡ್ಯೂಲ್. ಅಂದುಕೊಂಡಂತೆ ಎಲ್ಲವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದೇವೆ’ ಎಂದರು ನಿರ್ದೇಶಕ ಸುನಿ.

ತಿಮ್ಮೇಗೌಡ್ರು ಮಾತನಾಡಿದ್ರು

ನಿರ್ಮಾಪಕ ತಿಮ್ಮೇಗೌಡ, ರಿಯಲ್ ಎಸ್ಟೇಟ್ ಉದ್ಯಮದ ಜತೆಗೆ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಕ್ಕಿದ್ದ ಕಾರಣ ಹೇಳಿಕೊಂಡರು. ‘ಮಗನಿಗೆ ನಟನೆ ಮೇಲೆ ಆಸಕ್ತಿಯಿತ್ತು. ಸ್ಕೂಲ್ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತಾ, ತನ್ನೊಳಗೆ ಒಬ್ಬ ಕಲಾವಿದ ಇದ್ದಾನೆನ್ನುವುದನ್ನು ತೋರಿಸಿದ್ದ. ಕೊನೆಗೊಂದು ದಿನ ಸಿನಿಮಾ ಮಾಡ್ಬೇಕು ಅಂದ. ಆತನ ಆಸೆ ಈಡೇರಿಸುವ ನಿಟ್ಟಿನಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ಬಂದೆ’ ಎಂದರು ತಿಮ್ಮೇಗೌಡ.

ಸಿಕ್ಸ್ ಪ್ಯಾಕ್ ಹೀರೋ ಧನ್ವೀರ್ ಗೌಡ ಮಾತನಾಡಿ, ‘ಚಿತ್ರದಲ್ಲಿ ನಾನೇನೇ ಮಾಡಿದ್ದರೂ ಅದಕ್ಕೆ ಕಾರಣ ನಿರ್ದೇಶಕರು. ಅ್ಯಕ್ಷನ್, ರೊಮಾನ್ಸ್ ಎರಡು ನನಗಿಲ್ಲಿ ಸವಾಲಾಗಿದ್ದವು. ಅದನ್ನು ಸಮನಾಗಿ ಸ್ವೀಕರಿಸಿ, ಅಭಿನಯಿಸಿದ್ದೇನೆ. ಕತೆಗೆ ಅಗತ್ಯವಿಲ್ಲದಿದ್ದರೂ, ಹಾಡಿನ ಸನ್ನಿವೇಶಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡೆ. ಆ ಜರ್ನಿಯೇ ಚೆನ್ನಾಗಿತ್ತು’ ಎಂದರು. 

ನಾಯಕಿ ಅದಿತಿ ಪ್ರಭುದೇವ್, ನಾನಿಲ್ಲಿ ಒಬ್ಬಳು ಮಧ್ಯಮ ವರ್ಗದ ಹುಡುಗಿ. ಆಕೆಯ ಜೀವನದಲ್ಲಿ ಏನೆಲ್ಲ ಆಗುತ್ತೆ ಅನ್ನೋದು ನನ್ನ ಪಾತ್ರ ಎನ್ನುವ ಮೂಲಕ ಪಾರಿಜಾತಳ ವೃತ್ತಾಂತ ತೆರೆದಿಟ್ಟರು. ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ರವಿಬಸ್ರೂರು, ಕಾರ್ಯಕಾರಿ ನಿರ್ಮಾಪಕ ಶಿವಧ್ವಜ್ ಚಿತ್ರೀಕರಣದ ಅನುಭವ ಹಂಚಿಕೊಂಡರು. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ತಿಮ್ಮೇಗೌಡ ಪ್ರಕಟಿಸಿದರು. ?

 

 

#Bazaar #teaser2

A post shared by Su Ni (@simplesuni) on

 

#Bazaar #shootingcompleted

A post shared by Su Ni (@simplesuni) on

loader