ಕಾಂತಾರದ 'ಪಂಜುರ್ಲಿ' ದೈವದ ರೀಲ್ಸ್: ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಯುವತಿ ತಪ್ಪು ಕಾಣಿಕೆ..!
ತನ್ನ ತಪ್ಪಿನ ಅರಿವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಯಾಚಿಸಿದ ಶ್ವೇತಾ ರೆಡ್ಡಿ
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ನ.04): ಕಾಂತಾರ ಸಿನಿಮಾದಲ್ಲಿ ಬರುವಂತೆ 'ಪಂಜುರ್ಲಿ' ದೈವದ ಹಾಡಿನ ತುಣುಕನ್ನು ರೀಲ್ಸ್ ಮಾಡಿ ಹುಚ್ಚಾಟ ಮಾಡಿದ್ದ ಯುವತಿ ಕೊನೆಗೂ ಪಾಠ ಕಲಿತಿದ್ದಾಳೆ. ತನ್ನ ತಪ್ಪಿನ ಅರಿವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಯಾಚಿಸಿದ್ದಾಳೆ.
ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮಾಡಿದ್ದ ಯುವತಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ. ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ತಪ್ಪು ಕಾಣಿಕೆ ಹಾಕಿದ ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನ ಭೇಟಿಯಾಗಿ ಕ್ಷಮೆ ಯಾಚನೆ ಮಾಡಿದ್ದಾರೆ.
ಕಾಂತಾರದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಸಾಮಾಜಿಕ ತಾಣಗಳಲ್ಲಿ ರೀಲ್ಸ್ ಹರಿ ಬಿಟ್ಟಿದ್ದ ಶ್ವೇತಾ ರೆಡ್ಡಿ, ಪಂಜುರ್ಲಿ ದೈವದಂತೆ ಹಣ್ಣ ಹಚ್ಚಿ ವೇಷ ಧರಿಸಿ ರೀಲ್ಸ್ ಮಾಡಿದ್ದರು. ಶ್ವೇತಾ ರೆಡ್ಡಿ ಎಂಬ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಮಾಡಿದ್ದ ಈಕೆ, ಮೇಕಪ್ ಅರ್ಟಿಸ್ಟ್ ಆಗಿದ್ದಾರೆ. ಈಕೆಯ ರೀಲ್ಸ್ ಬಳಿಕ ಸಾಮಾಜಿಕ ತಾಣಗಳಲ್ಲಿ ಯುವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ದೈವಾರಾಧನೆ ರೀಲ್ಸ್ ಮಾಡಿ ಹುಚ್ಚಾಟ ಮಾಡಿದ್ದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾದ ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿದ್ದಾಳೆ ಅಂತ ಯುವತಿ ವಿರುದ್ಧ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ರಿಷಬ್ ಮಾಡಿದ ಪಾತ್ರವನ್ನೇ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಳು.
ನೆಟ್ಟಿಗರು 'ಹರಕೆ' ಮಾತಿಗೆ ಬೆಚ್ಚಿದ ಶ್ವೇತಾ!
ಇನ್ನು ಶ್ವೇತಾ ರೆಡ್ಡಿ ತನ್ನ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಕಿಡಿ ಕಾರಿದ್ದರು. ಅಲ್ಲದೇ ಹಲವರು ಶ್ವೇತಾ ರೆಡ್ಡಿ ವಿರುದ್ಧ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ ಅಂತ ಹೇಳಿದ್ದರು. ಅಲ್ಲದೇ ದೈವಗಳು ನೋಡಿಕೊಳ್ಳಲಿ ಅಂತ ಹರಕೆ ಮಾದರಿ ಎಚ್ಚರಿಕೆ ಸಂದೇಶ ಹಾಕಿದ್ದರು. ಇದಾದ ಬಳಿಕ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದ ಶ್ವೇತಾ ರೆಡ್ಡಿ, ದಯವಿಟ್ಟು ಹರಕೆ ಇಡಬೇಡಿ, ಕ್ಷಮೆ ಕೋರುತ್ತೇನೆ ಎಂದಿದ್ದರು. ದೈವಕ್ಕೆ ಮತ್ತು ಸಂಸ್ಕೃತಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಯಾಚಿಸ್ತೇನೆ, ಸಂಸ್ಕೃತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತೇನೆ ಅಂತ ಪೋಸ್ಟ್ ಮಾಡಿದ್ದಳು. ಅದರಂತೆ ಇಂದು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಲು ಶ್ವೇತಾ ರೆಡ್ಡಿ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ.