ಕಾಂತಾರದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
Kantara Movie Reels Controversy: ಯುವತಿಯೋರ್ವಳು ಇನ್ಸ್ಟಾಗ್ರಾಮ್‌ನಲ್ಲಿ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು (ಅ. 27): ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ (Kantara Movie) ಸದ್ಯ ಸಿನಿ ಜಗತ್ತಿನಲ್ಲಿ ಹವಾ ಸೃಷ್ಟಿಸಿದ್ದು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾಗೆ ದೇಶ ವಿದೇಶಗಳಿಂದ ಮೆಚ್ಚುಗೆಗಳು ಬರುತ್ತಿದ್ದು, ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಕಾಂತಾರ ಕುರಿತ ಪೋಸ್ಟ್, ರೀಲ್ಸ್ ಹಾಗೂ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ಯುವತಿಯೋರ್ವಳು ಇನ್ಸ್ಟಾಗ್ರಾಮ್‌ನಲ್ಲಿ (Instagram) ಮಾಡಿರುವ ರೀಲ್ಸ್ ಈಗ ವಿವಾದಕ್ಕೆ ಕಾರಣವಾಗಿದೆ. ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ.
ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ, ವೇಷ ಧರಿಸಿ ಯುವತಿ ರೀಲ್ಸ್ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ಯುವತಿ ವಿರುದ್ದ ಆಕ್ರೋಶ ಕೇಳಿಬಂದಿದೆ. ಮೇಕಪ್ ಅರ್ಟಿಸ್ಟ್ ಆಗಿರೋ ಶ್ವೇತಾ ರೆಡ್ಡಿಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿರುವ ಯುವತಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ದೈವಾರಾಧನೆಯು ತುಳುನಾಡಿನ ಧಾರ್ಮಿಕ ನಂಬಿಕೆಯ ಭಾಗವಗಿದೆ. ಹೀಗಾಗಿ ತುಳುನಾಡಿನ ನಂಬಿಕೆಗೆ ಇದರಿಂದ ಧಕ್ಕೆಯಾಗಿದೆ, ರೀಲ್ಸ್‌ನ್ನು ತಕ್ಷಣ ಡಿಲೀಟ್ ಮಾಡಿ ಕ್ಷಮೆ ಕೇಳುವಂತೆ ಹಲವರು ಕಾಮೆಂಟ್ ಮಾಡಿದ್ದಾರೆ. ಆಕ್ರೋಶದ ಬಳಿಕ ಇನ್‌ಸ್ಟಾಗ್ರಾಮ್ ಖಾತೆಯಿಂದ ಯುವತಿ ರೀಲ್ಸ್ ಡಿಲೀಟ್ ಮಾಡಿದ್ದಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: "ತುಳುನಾಡಿನ ದೈವ ದೇವರುಗಳು ಎಂದರೆ ನಿಮಗೆ ಮನರಂಜನೆ ವಸ್ತು ಅನ್ಕೋಂಡ್ರ ಅವಿವೇಕಿಗಳೆ, ನಿಮ್ಮ ಲೈಕ್ ಕಮೆಂಟ್ ಫಾಲೋವರ್ಸ್ ಗಾಗಿ ನಮ್ಮ ನಂಬಿಕೆಗಳ ಜೊತೆಗೆ ಆಟವಾಡಬೇಡಿ ಮರ್ಯಾದೆಯಲ್ಲಿ ಪೋಸ್ಟ್ ಡಿಲೀಟ್ ಮಾಡಿ. ನಿಮ್ಮ ತೀಟೆಗೆ ನಮ್ಮ ನಂಬಿಕೆ ಬಳಸಿಕೊಳ್ಳಬೇಡಿ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
'ಭಾರತೀಯ ಸಿನಿಮಾದ ಮಾಸ್ಟರ್ ಪೀಸ್' ಕಾಂತಾರದ ಬಗ್ಗೆ ಸೂಪರ್‌ಸ್ಟಾರ್ ರಜನಿಕಾಂತ್ ಮಾತು!
ಇನ್ನು ಫಾಲೋವರ್ಸ್ ಲೈಕ್ ಗೋಸ್ಕರ ನಮ್ಮ ದೈವ ದೇವರನ್ನು ಅವಮಾನ ಮಾಡಿದರೇ ಕಂಡಿತವಾಗಿಯು ನಾವು ಸುಮ್ಮನೆ ಇರಲ್ಲ, ಮರ್ಯಾದಿಯಿಂದ ಪೊಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದರೆ ಸರಿ…! ಇಲ್ಲದಿದ್ದರೆ ಮುಂದೆ ಆಗುವ ಎಲ್ಲ ಪರಿಣಾಮಕೇ ನೀವೇ ಹೊಣೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಬಳಿಕ ಯುವತಿ ಇನ್‌ಸ್ಟಾಗ್ರಾಮ್ ಖಾತೆಯಿಂದ ರೀಲ್ಸ್‌ಗಳನ್ನು ಡಿಲೀಟ್ ಮಾಡಿದ್ದಾಳೆ.
ಓ.. ಎಂದು ಕೂಗ್ಬೇಡಿ: ಇನ್ನು ಇತ್ತೀಚೆಗೆ ಕಾಂತಾರ ಸಿನಿಮಾದಲ್ಲಿ ತೋರಿಸಿರುವಂತೆ ಸಿನಿಮಾ ನೋಡುತ್ತಾ ಓ.. ಎಂದು ಕೂಗುಬೇಡಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ದೈವ ಆವಾಹಿಸಿದ ವೇಳೆ ಪಾತ್ರಧಾರಿಗಳು ಓ.. ಎಂದು ಕೂಗುತ್ತಾರೆ. ಈ ಸಂದರ್ಭದಲ್ಲಿ ಪ್ರೇಕ್ಷಕರು ಕೂಡ ಓ...ಎಂದು ಕೂಗುವ ಹಾಗೂ ಚಿತ್ರಮಂದಿರದಿಂದ ಹೊರಬಂದ ಬಳಿಕ ಓ... ಎಂದು ಕೂಗುವ ಹಲವು ಘಟನಗಳ ನಡೆದಿವೆ. ಪ್ರೇಕ್ಷಕರು ಕೂಗುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ. ಆದರೆ ಯಾರೂ ಕೂಡ ಈ ಸಿನಿಮಾದಲ್ಲಿ ಉಪಯೋಗಿಸಿದ ಶಬ್ಧವನ್ನು ಅನುಕರಿಸಬೇಡಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಇದೊಂದು ಸೂಕ್ಷ್ಮವಾದ ಧಾರ್ಮಿಕ ವಿಚಾರ, ಆಧ್ಯಾತ್ಮಿಕ ನಂಬಿಕೆ, ಇದು ಸಂಪ್ರದಾಯಕ್ಕೆ ಧಕ್ಕೆ ಉಂಟು ಮಾಡಬಹುದು, ಹೀಗಾಗಿ ಕೂಗವುದನ್ನು ನಿಲ್ಲಿಸುವಂತೆ ರಿಷಬ್ ಮನವಿ ಮಾಡಿಕೊಂಡಿದ್ದಾರೆ.
ಕಾಂತಾರದ 'ಕೆರಾಡಿ ಫಿಲ್ಮ್ ಸಿಟಿ'ಗೆ ಪ್ರವಾಸಿಗರ ಲಗ್ಗೆ: ಕುತೂಹಲಕಾರಿ ಸ್ಥಳದಲ್ಲಿ ಅಂತದ್ದೇನಿದೆ?
‘ಕೆಜಿಎಫ್’ ಮೀರಿಸಿದ ‘ಕಾಂತಾರ’: ‘ಕಾಂತಾರ’ ಇದೀಗ ರಾಜ್ಯದಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ‘ಕೆಜಿಎಫ್’ ಸರಣಿಯ ಎರಡೂ ಚಿತ್ರಗಳ ದಾಖಲೆಯನ್ನೂ ಮುರಿದು ಮುನ್ನುಗ್ಗುತ್ತಿದೆ. ರಾಜ್ಯದಲ್ಲಿ 25 ದಿನಗಳಲ್ಲಿ 77 ಲಕ್ಷಕ್ಕೂ ಅಧಿಕ ಮಂದಿ ಚಿತ್ರ ವೀಕ್ಷಣೆ ಮಾಡಿದ್ದಾರೆ ಎಂದು ಹೊಂಬಾಳೆ ಫಿಲಂಸ್ ಹೇಳಿದೆ. ಕೆಜಿಎಫ್ ಚಾಪ್ಟರ್ 1 ಸುಮಾರು 75 ಲಕ್ಷ ಜನ ರಾಜ್ಯದಲ್ಲಿ ವೀಕ್ಷಿಸಿದ್ದರು. ‘ಕೆಜಿಎಫ್ 2’ ಚಿತ್ರವನ್ನು ರಾಜ್ಯದಲ್ಲಿ 72 ಲಕ್ಷ ಮಂದಿ ವೀಕ್ಷಣೆ ಮಾಡಿದ್ದರು. ಇದೇ ವೇಳೆ, ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಿಸಿರುವ ಚಿತ್ರಗಳ ಪೈಕಿ ರಾಜ್ಯದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ.