"ಇದು ಅಪ್ಪಾಜಿ ಸಿನಿಮಾನಾ ಅಥವಾ ಅಪ್ಪು ಸಿನಿಮಾನಾ ಅಂತ ಹೇಗೆ ಹೇಳೋದು?" - ಇದು 'ರಾಜಕುಮಾರ' ಚಿತ್ರ ನೋಡಿಕೊಂಡು ಹೊರಬಂದ ಬಳಿಕ ಮಾಧ್ಯಮದವರಿಗೆ ಶಿವರಾಜಕುಮಾರ್ ಕೊಟ್ಟ ರಿಯಾಕ್ಷನ್.
ಬೆಂಗಳೂರು(ಏ. 02): ಕಳೆದ ವಾರ ಬಿಡುಗಡೆಯಾದ 'ರಾಜಕುಮಾರ' ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದೆ. ಪುನೀತ್ ಅಭಿನಯದ ಈ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರ ಬಾಯಲ್ಲೂ ವಾಹ್ ಎಂಬ ಉದ್ಗಾರ ಬರುತ್ತಿದೆ. ಪುನೀತ್ ಅಣ್ಣ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೂಡ ಈ ಸಿನಿಮಾ ವೀಕ್ಷಿಸಿ ಭಾವೋದ್ವೇಗಗೊಂಡರು. ಯಶವಂತಪುರ ಬಳಿಯ ಒರಾಯನ್ ಮಾಲ್'ನಲ್ಲಿರುವ ಮಲ್ಟಿಪ್ಲೆಕ್ಸ್'ನಲ್ಲಿ "ರಾಜಕುಮಾರ" ಚಿತ್ರ ವೀಕ್ಷಿಸಿ ಹೊರಬಂದ ಶಿವಣ್ಣ ಅಕ್ಷರಶಃ ಗದ್ಗದಿತರಾದರು. ಚಿತ್ರದ ನಿರ್ದೇಶದ ಸಂತೋಷ್ ಆನಂದರಾಮ್ ಅವರನ್ನು ತಬ್ಬಿಕೊಂಡ ಶಿವಣ್ಣನ ಕಣ್ಣಂಚಲ್ಲಿ ನೀರು ಜಿನುಗಿತು.
ಅಪ್ಪಾಜಿಯಾ, ಅಪ್ಪುವಾ?
"ಇದು ಅಪ್ಪಾಜಿ ಸಿನಿಮಾನಾ ಅಥವಾ ಅಪ್ಪು ಸಿನಿಮಾನಾ ಅಂತ ಹೇಗೆ ಹೇಳೋದು?" - ಇದು 'ರಾಜಕುಮಾರ' ಚಿತ್ರ ನೋಡಿಕೊಂಡು ಹೊರಬಂದ ಬಳಿಕ ಮಾಧ್ಯಮದವರಿಗೆ ಶಿವರಾಜಕುಮಾರ್ ಕೊಟ್ಟ ರಿಯಾಕ್ಷನ್.
ಒಬ್ಬ ಮನುಷ್ಯ ಎಷ್ಟು ಸಿಂಪಲ್ ಆಗಿರಬೇಕು ಎಂಬುದು ಚಿತ್ರದಲ್ಲಿದೆ. ಪ್ರತಿಯೊಬ್ಬರಲ್ಲೂ ರಾಜಕುಮಾರನಿರುತ್ತಾನೆ. ಈ ಚಿತ್ರ ಸಿಂಪ್ಲಿ ಸೂಪರ್ಬ್. ಬೇರೇನೂ ಹೇಳೋಕ್ಕಾಗಲ್ಲ ಎಂದು ಶಿವಣ್ಣ ವರ್ಣಿಸಿದರು.
ಅಪ್ಪುವಿಗೆ ಪ್ರಶಂಸೆ:
"ಅಪ್ಪು ನನಗೆ inspiration. ಇಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಈ ಏಜಲ್ಲಿ ಇಂಥ performance ಅದ್ಭುತ. ಈಗ ಎಲ್ಲರೂ Fastness ಕೇಳ್ತಾರೆ. ಆದರೆ, ಅಪ್ಪುವಿನಲ್ಲಿ Fastness ಜೊತೆಗೆ vigour ಇದೆ. ಅಷ್ಟೇ ಅಲ್ಲ, ಅದ್ಭುತವಾದ expressions ಇದೆ. ನಮಗೆ ಟಚ್ ಆಗುವಂತಿದೆ. ಎಕ್ಸ್'ಪ್ರೆಷೆನ್ಸ್ ತೋರಿಸಲು ಜೋರಾಗಿ ಅಳಬೇಕಿಲ್ಲ. ಅಳದೆಯೇ ಎಮೋಷನ್ಸ್ ತೋರಿಸ್ತಾರೆ ಅಪ್ಪು..." ಎಂದು ಶಿವಣ್ಣ ತನ್ನ ಸೋದರನಿಗೆ ಮನದುಂಬ ಪ್ರಶಂಸಿಸಿದರು.
ನಿರ್ದೇಶಕ ಸಂತೋಷ್ ಆನಂದರಾಮ್ ಪ್ರತಿಕ್ರಿಯೆ:
"ರಾಜಕುಮಾರ" ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಇಂದು ಮಹತ್ವದ ದಿನವಾಗಿತ್ತು. ಚಿತ್ರ ನೋಡಿ ಆಚೆ ಬಂದ ಶಿವಣ್ಣ ತಮ್ಮನ್ನು ತಬ್ಬಿಕೊಂಡದ್ದನ್ನು ತಮ್ಮ ಜೀವನದ ಅವಿಸ್ಮರಣೀಯ ಕ್ಷಣವೆಂದು ಸಂತೋಷ್ ಆನಂದರಾಮ್ ವರ್ಣಿಸಿದ್ದಾರೆ. "ಅದೊಂದು ಅಮೂಲ್ಯ ಕ್ಷಣ.. ಇದಕ್ಕಿಂತ ಹೆಚ್ಚಿನದ್ದನ್ನು ನಾನು ಕೇಳೋದಕ್ಕಾಗಲ್ಲ. ಅದು ನನ್ನ ಅದೃಷ್ಟ" ಎಂದು ಸಂತೋಷ್ ಪ್ರತಿಕ್ರಿಯಿಸಿದರು.
ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ 'ರಾಜಕುಮಾರ' ನಿರ್ದೇಶಕರು, "ಸದುದ್ದೇಶ, ಮುಗ್ಧತೆ, ನಂಬಿಕೆಯಲ್ಲಿ ಕೆಲಸ ಮಾಡಿರುತ್ತೇವೆ. ಒಳ್ಳೆಯತನಕ್ಕೆ ಸಾವಿಲ್ಲ ಎಂಬುದು ಮೊತ್ತೊಮ್ಮೆ ಪ್ರೂವ್ ಆಗಿದೆ" ಎಂದು ಹೇಳಿದರು.
ಶಿವರಾಜಕುಮಾರ್ ಅವರ ಭಾವೋದ್ವೇಗದ ಕ್ಷಣವನ್ನು ಮೆಲುಕು ಹಾಕಿದ ಸಂತೋಷ್ ಆನಂದ್'ರಾಮ್, "ಶಿವಣ್ಣನಿಗೆ ಒಟ್ಟಾರೆ ಸಿನಿಮಾ ಇಷ್ಟವಾಗಿದೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂಬ ಸಂದೇಶ ಇಷ್ಟವಾಗಿದೆ. ಚಿತ್ರದ ಮಧ್ಯೆ ಒಂದೆರಡು ಬಾರಿ ಶಿವಣ್ಣ ಭಾವುಕರಾಗಿದ್ದುಂಟು. ಕೊನೆಯಲ್ಲಿ ಬಂದ ಟೈಟಲ್ ಕಾರ್ಡ್ ನೋಡಿ ಅವರಿಗೆ ತಡೆದುಕೊಳ್ಳಲಾಗಲಿಲ್ಲ ಎಂದನಿಸುತ್ತೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
