Asianet Suvarna News Asianet Suvarna News

ಶಿವಣ್ಣ ಕಾಲ್ ಶೀಟ್ ಬೇಕು ಅಂದ್ರೆ 10 ವರ್ಷ ಕಾಯಲೇಬೇಕು!

ನಟ ಶಿವರಾಜ್ ಕುಮಾರ್’ಗೆ ಫುಲ್ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಇನ್ನು 10 ವರ್ಷ ಅವರ ಕಾಲ್ ಶೀಟ್ ಸಿಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹೌದಾ? ಶಿವಣ್ಣ ಅಷ್ಟೊಂದು ಬ್ಯುಸಿ ಆಗಿದಾರಾ? ಏನ್ ವಿಷಯ? 

Shivarajkumar engaged with 20 cinemas and it will be complete in 10 years

ಶಿವರಾಜ್‌ಕುಮಾರ್ ಇನ್ನು ಬರೋಬ್ಬರಿ ಹತ್ತು ವರ್ಷ ಯಾರಿಗೂ ಸಿಗಲ್ಲ. ಅವರ ಕಾಲ್‌ಶೀಟ್ ಬೇಕು ಅಂದ್ರೆ ಹತ್ತು ವರ್ಷಗಳ ನಂತರವೇ ಅವರ ಮನೆಯ ಬಾಗಿಲು ತಟ್ಟಬೇಕು. ಹಾಗಂತ ನಾವು ಹೇಳುತ್ತಿಲ್ಲ.

ಅವರು ಹೆಸರಿನಲ್ಲಿ ಈಗಾಗಲೇ ಘೋಷಣೆಯಾಗಿರುವ ಹಾಗೂ ಚಿತ್ರೀಕರಣದಲ್ಲಿರುವ ಚಿತ್ರಗಳ ಸಂಖ್ಯೆಯೇ ಹೀಗೆನ್ನುತ್ತಿದೆ. ಹಾಗಾದರೆ ಶಿವಣ್ಣ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಎನ್ನುವ ಕುತೂಹಲ ಇದ್ದವರು ಇಲ್ಲಿ ಕೇಳಿ. ಈಗಷ್ಟೇ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ಹೊಸದಾಗಿ ಕನಿಷ್ಠ ಹತ್ತು ಚಿತ್ರಗಳಾದರೂ ಘೋಷಣೆ ಆಗುತ್ತವೆ. ಹೊಸ ಚಿತ್ರಗಳಿಗೆ ಹಳೆಯವು ಸೇರಿಕೊಂಡರೆ  ಬಹುಶಃ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಚಿತ್ರಗಳಿಗೆ ಬುಕ್ ಆಗಿರುವ ಏಕೈಕ ನಟ ಎನ್ನುವ ಹೆಗ್ಗಳಿಕೆ ಶಿವಣ್ಣನ ಪಾಲಾಗುತ್ತದೆ.

ಅಂದಹಾಗೆ ಈ ಬಾರಿ ಅವರ ಹುಟ್ಟು ಹಬ್ಬಕ್ಕೆ  ಪ್ರಕಟಣೆಯಾದ ಮತ್ತು ಚಿತ್ರೀಕರಣದಲ್ಲಿರುವ ಒಟ್ಟು ಚಿತ್ರಗಳ ಸಂಖ್ಯೆ 20. ಪ್ರಕಟಣೆಯಾಗದ ಚಿತ್ರಗಳ ಸಂಖ್ಯೆ ದೇವರಿಗೇ ಗೊತ್ತು! 20 ಸಿನಿಮಾಗಳಿಗೆ ಶಿವಣ್ಣ ಬುಕ್ ಆಗಿದ್ದು, ಇವೆಲ್ಲ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯಾಗುವುದಕ್ಕೆ ಕನಿಷ್ಠ ಹತ್ತು ವರ್ಷವಾದರೂ ಬೇಕು. ಹೀಗಾಗಿ ಸೆಂಚುರಿ ಸ್ಟಾರ್ ಹತ್ತು ವರ್ಷ ನಾಟ್ ರೀಚೆಬಲ್!

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಬಿಡುಗಡೆಗೆ ಸಿದ್ಧವಾಗಿದೆ. ಇದರ ಹೊರತಾಗಿ ರುಸ್ತುಂ, ಕವಚ, ದ್ರೋಣ ಚಿತ್ರೀಕರಣದಲ್ಲಿವೆ. ಎಸ್‌ಆರ್‌ಕೆ, ಖದರ್, ವೈರಮುಡಿ, ಯಾರ್ ಆದ್ರೆ ನನಗೇನು, ಕನ್ವರ್ ಲಾಲ್, ದಂಗೆ ಅಧಿಕೃತವಾಗಿ ಹೆಸರುಗಳ ಮೂಲಕ ಸೆಟ್ಟೇರಿವೆ. ಇವುಗಳ ಜತೆಗೆ ಪಿ ವಾಸು, ಎಪಿ ಅರ್ಜುನ್, ಮಂಜು ಸ್ವರಾಜ್, ನಾಗತಿಹಳ್ಳಿ ಚಂದ್ರಶೇಖರ್, ಟಿಎಸ್ ನಾಗಾಭರಣ, ಯೋಗರಾಜ್ ಭಟ್ ನಿರ್ದೇಶನದಲ್ಲಿ ತಲಾ ಒಂದೊಂದು ಸಿನಿಮಾ ಘೋಷಣೆ ಆಗಿವೆ. ಇದರ ಹೊರತಾಗಿ ನಿರ್ಮಾಣ ಸಂಸ್ಥೆಗಳ ಹೆಸರಿನಲ್ಲಿ ನಾಲ್ಕು ಸಿನಿಮಾಗಳು ಹೊಸದಾಗಿ ಸೇರಿಕೊಂಡಿವೆ.

ಅಲ್ಲಿಗೆ ಶಿವಣ್ಣ ಕೈಯಲ್ಲಿ 20 ಸಿನಿಮಾಗಳು ಇವೆ. ಒಂದು ವರ್ಷಕ್ಕೆ ಎರಡು ಸಿನಿಮಾ ಅಂದರೆ 20  ಸಿನಿಮಾಗಳನ್ನು ಮುಗಿಸುವುದಕ್ಕೆ 10 ವರ್ಷ ಬೇಕು. ಅಲ್ಲಿಗೆ ೫೦ ಪ್ಲಸ್ ನಟನೊಬ್ಬನ ಕಾಲ್ ಶೀಟ್ ಮುಂಗಡವಾಗಿ ಹತ್ತು ವರ್ಷ ಬುಕ್ ಆಗಿರುವುದು ಭಾರತೀಯ ಚಿತ್ರೀಕರಂಗದಲ್ಲೇ ದೊಡ್ಡ ದಾಖಲೆ.

ಜತೆಗೆ ಎಲ್ಲವೂ ಅಂದುಕೊಂಡಂತೆ ಈ ಪಟ್ಟಿಯ ಪ್ರಕಾರ ನಡೆದರೆ ಇನ್ನೂ ಹತ್ತು ವರ್ಷ ಶಿವಣ್ಣ ಯಾರಿಗೂ ಸಿಗಲ್ಲ ಎಂಬುದು ಖರೆ. 

Follow Us:
Download App:
  • android
  • ios