ನಟ ನೀನಾಸಂ ಸತೀಶ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಮಂಡ್ಯದ ಬಳಿಯ ಹಳ್ಳಿಯೊಂದನ್ನು ದತ್ತು ಪಡೆದಿರುವ ಅವರು ಉತ್ತರ ಕರ್ನಾಟಕದ ಗ್ರಾಮವೊಂದನ್ನು ದತ್ತು ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಧಾರವಾಡ/ಹುಬ್ಬಳ್ಳಿ: ಈಗಾಗಲೇ ಮಂಡ್ಯ ಜಿಲ್ಲೆಯ ಪುಲ್ಯೆಗಾಡ ಗ್ರಾಮವನ್ನು ದತ್ತು ಪಡೆದಿರುವ ಚಿತ್ರನಟ ನೀನಾಸಂ ಸತೀಶ್ ಇದೀಗ ಉತ್ತರ ಕನ್ನಡದ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಅಯೋಗ್ಯ ಚಿತ್ರದ ಪ್ರಚಾರಾರ್ಥ ಶನಿವಾರ ಮಹಾನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ಯೆಗಾಡ ಗ್ರಾಮ ಅಭಿವೃದ್ಧಿಗೊಂಡ ಆನಂತರ ಉತ್ತರ ಕರ್ನಾಟಕದಲ್ಲಿ ಒಂದು ಗ್ರಾಮ ಆಯ್ದಕೊಳ್ಳಲಾಗುವುದು ಎಂದು ತಿಳಿಸಿದರು.
ನಾನು ಈಗಾಗಲೇ ದತ್ತು ಪಡೆದ ಮಂಡ್ಯದ ಗ್ರಾಮದಲ್ಲಿ ಉತ್ತರ ಕರ್ನಾಟಕದಷ್ಟು ಕೆಟ್ಟ ಪರಿಸ್ಥಿತಿ ಇಲ್ಲ. ಇಲ್ಲಿನ ಯಾವ ಹಳ್ಳಿ ತೀರಾ ಕಷ್ಟದ ಪರಿಸ್ಥಿತಿಯಲ್ಲಿದೆ ಎಂದು ಜನರೇ ತಿಳಿಸಲಿ.
ಮುಂದಿನ ವರ್ಷ ನಾನೇ ಖುದ್ದು ಬಂದು ಹಳ್ಳಿ ನೋಡಿ ದತ್ತು ಪಡೆಯುತ್ತೇನೆ. ನಾನು ದತ್ತು ತೆಗೆದುಕೊಂಡ ಬಳಿಕವಾದರೂ ಉಳ್ಳವರಿಗೆ, ಕೋಟ್ಯಾಧೀಶರಿಗೆ ಪ್ರಜ್ಞೆ ಬರುತ್ತೋ ನೋಡೋಣ ಎಂದು ಹೇಳಿದರು.
