ಹಣೆಗೆ ಗಾಯವಾದ ರೀಲ್ಸ್ ಶೇರ್ ಮಾಡಿದ್ದಕ್ಕೆ, ಗಂಡ ಕ್ರಿಸ್ ವೇಣುಗೋಪಾಲ್ ಹೊಡೆದಿದ್ದಾರೆ, ಇಬ್ಬರೂ ಬೇರೆಯಾಗಿದ್ದಾರೆ ಅಂತ ಹಬ್ಬಿದ್ದ ಸುಳ್ಳು ಸುದ್ದಿಗೆ ನಟಿ ದಿವ್ಯಾ ಶ್ರೀಧರ್ ತಿರುಗೇಟು ಕೊಟ್ಟಿದ್ದಾರೆ. ನಮ್ಮ ದಾಂಪತ್ಯ ಜೀವನ ಚೆನ್ನಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟ ಕ್ರಿಸ್ ವೇಣುಗೋಪಾಲ್ ಮತ್ತು ನಟಿ ದಿವ್ಯಾ ಶ್ರೀಧರ್ ಅವರ ಮದುವೆ ದೊಡ್ಡ ಸಂಭ್ರಮವನ್ನೇ ಸೃಷ್ಟಿಸಿತ್ತು. 'ಪತ್ತರಮಾಟ್' ಅನ್ನೋ ಸೀರಿಯಲ್‌ನಲ್ಲಿ ಶುರುವಾದ ಇವರ ಪರಿಚಯ ಮದುವೆಯ ತನಕ ತಲುಪಿತ್ತು. ಆದರೆ, ಮದುವೆಯಾದಾಗಿನಿಂದ ಈ ಜೋಡಿ ದೊಡ್ಡ ಮಟ್ಟದ ಸೈಬರ್ ಬುಲ್ಲಿಯಿಂಗ್ ಕೂಡ ಎದುರಿಸುತ್ತಿತ್ತು. ಇದೀಗ ತಮ್ಮ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ದಿವ್ಯಾ ಶ್ರೀಧರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮುಖಕ್ಕೆ ಗಾಯವಾದಂತೆ ಕಾಣುವ ಒಂದು ರೀಲ್ಸ್ ಮಾಡಿದ ಬೆನ್ನಲ್ಲೇ ಈ ಸುದ್ದಿಗಳು ಹಬ್ಬಿದ್ದವು. ಕೆಲವರು, ಕ್ರಿಸ್ ಮತ್ತು ದಿವ್ಯಾ ಬೇರೆ ಬೇರೆಯಾಗಿದ್ದಾರೆ, ದಿವ್ಯಾ ಮುಖದಲ್ಲಿರುವುದು ಕ್ರಿಸ್ ಹೊಡೆದ ಗಾಯ ಅಂತ ಸುದ್ದಿ ಹಬ್ಬಿಸಿದ್ದರು.

ನನ್ನ ಜೀವನದ ಬಗ್ಗೆ ಯಾಕೆ ಮಾತಾಡ್ತೀಯಾ?

ಈ ಬಗ್ಗೆ ಮಾತನಾಡಿರುವ ದಿವ್ಯಾ, "ಒಂದು ಮದುವೆ ಆಗಿದ್ದಕ್ಕೆ ಈಗ ಏನೂ ಮಾಡಕ್ಕಾಗದ ಸ್ಥಿತಿ ಬಂದಿದೆ. ಏನಾದ್ರೂ ಕಂಟೆಂಟ್ ಹಾಕಿದ್ರೆ ಸಾಕು, ವಿವಾದ ಮಾಡ್ತಾರೆ. ಹಣೆಗೆ ಗಾಯವಾದ ಒಂದು ವಿಡಿಯೋ ಮಾಡಿದ್ದೆ. ನನ್ನ ಹಣೆಗೆ ಏನೂ ಆಗಿಲ್ಲ. ಈ ಯೂಟ್ಯೂಬರ್‌ಗಳಿಗೆ ಬೇರೆ ಕೆಲಸ ಇಲ್ವಾ? ನಾಚಿಕೆ ಆಗಲ್ವಾ ಇನ್ನೊಬ್ಬರ ಜೀವನದಲ್ಲಿ ಮೂಗು ತೂರಿಸೋಕೆ? ನನ್ನ ಮುಖಕ್ಕಾಗಲಿ, ದೇಹಕ್ಕಾಗಲಿ ಏನೂ ಆಗಿಲ್ಲ. ಕ್ರಿಸ್ ನನಗೆ ಹೊಡೆಯೋದನ್ನ ನೀವು ನೋಡಿದ್ರಾ?" ಎಂದು ಪ್ರಶ್ನಿಸಿದ್ದಾರೆ.

"ಅದು ನಾನು ಟಿವಿಯಲ್ಲಿ ಪ್ರಸಾರವಾಗುವ ವೆಬ್ ಸೀರೀಸ್‌ಗಾಗಿ ಮಾಡಿಕೊಂಡಿದ್ದ ಮೇಕಪ್. ಈ ರೀಲ್ಸ್ ಶೂಟ್ ಮಾಡಿ ತಿಂಗಳುಗಳೇ ಆಗಿವೆ. ಒಂದು ವೇಳೆ ನಿನ್ನೆ ಮಾಡಿದ್ದಾಗಿದ್ರೆ, ನನ್ನ ಹಣೆಯ ಗಾಯ ಇಷ್ಟು ಬೇಗ ಮಾಯವಾಗುತ್ತಿತ್ತಾ? ರೇಖಾ ರತೀಶ್, ನಾನು, ರೇಣು ಸುಧಿ... ನಾವೇನಾ ನಿಮ್ಮ ಟಾರ್ಗೆಟ್‌ಗಳು? ನನ್ನ ಮತ್ತು ಕ್ರಿಸ್ ಜೀವನ ತುಂಬಾ ಚೆನ್ನಾಗಿ ನಡೀತಿದೆ. ನಮ್ಮ ಲೈಫ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಂದು ಮದುವೆ ಆದೆ ಅಂತ ವಿಡಿಯೋ ಹಾಕೋಕೆ ಆಗಲ್ಲ. ಯಾವಾಗ್ಲೂ ನಗ್ತಾ ಇರೋ ವಿಡಿಯೋನೇ ಹಾಕ್ಬೇಕಾ? ನಮಗೆ ಇಷ್ಟವಾದ ಥೀಮ್‌ನಲ್ಲಿ ವಿಡಿಯೋ ಮಾಡೋಕೆ ಆಗಲ್ವಾ? ಒಬ್ಬರ ಜೀವನ ಇಟ್ಕೊಂಡು ಆಟ ಆಡೋಕೆ ನಾಚಿಕೆ ಆಗಲ್ವಾ? ನಮ್ಮ ಮನೆ ಪಕ್ಕದವರೊಬ್ಬರು, ‘ನಿಮ್ಮಿಬ್ಬರ ಮಧ್ಯೆ ಏನಾದ್ರೂ ಆಗಿದ್ಯಾ ಅಂತ ಕೇಳಿದ್ರು. ಆಗಲೇ ನನಗೆ ಈ ವಿಷಯ ಗೊತ್ತಾಗಿದ್ದು. ನಿಮಗೆ ಏನು ಸಮಸ್ಯೆ?" ಎಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.