ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಎ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 30 ದಿನಕ್ಕಿಂತ ಮೊದಲೇ ಅಮೇಜಾನ್‌ ಪ್ರೈಮ್‌ ಒಟಿಟಿಯಲ್ಲಿಯೂ ಬಿಡುಗಡೆ ಮಾಡಲಾಗಿದೆ. 

ಬೆಂಗಳೂರು (ಸೆ.29): ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಚಲನಚಿತ್ರ ಈಗ ಅಮೇಜಾನ್‌ ಪ್ರೈಮ್‌ನಲ್ಲಿಯೂ ವೀಕ್ಷಿಸಬಹುದು. ಹೌದು, ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಬಿ ಬಿಡುಗಡೆಗೂ ಮುನ್ನವೇ ಸಿನಿಮಾ ವೀಕ್ಷಕರಿಗೆ ಸೈಡ್‌-ಎ ತೋರಿಸುವುದು ಮುಖ್ಯವಾಗಿದೆ ಎನ್ನುವ ನಿಟ್ಟಿನಲ್ಲಿ ಈ ಚಿತ್ರವನ್ನು ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ರಾಜ್ಯಾದ್ಯಂತ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಸಪ್ತಸಾಗರದಾಚೆ ಎಲ್ಲೋ ಸೈಡ್‌-ಎ ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ ಅಮೇಜಾನ್‌ ಪ್ರೈಮ್‌ ಒಟಿಟಿಗೆ ಬಂದಿದೆ. ಇಂದಿನಿಂದಲೇ ಸಿನಿಮಾ ವೀಕ್ಷಣೆಗೆ ಲಭ್ಯವಿದ್ದು, ಇದರ ಹಿಂದಿನ ಉದ್ದೇಶವೇನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇನ್ನು ಸೈಡ್‌-ಎ ನಲ್ಲಿ ಅಡಗಿಸಿರುವ ಗೌಪ್ಯತೆಯನ್ನು ತಿಳಿದುಕೊಳ್ಳಲು ಎಲ್ಲರಿಗೂ ಕೌತುಕ ಹೆಚ್ಚಾಗಲಿದೆ. ಇದರಿಂದ ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡಿದ ಕೂಡಲೇ ಹೆಚ್ಚಿನ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ಮಾಡಲಿದ್ದಾರೆ ಎಂಬುದು ಇದರ ಉದ್ದೇಶವಾಗಿದೆ ಎಂದು ಮಾತನಾಡುತ್ತಿದ್ದಾರೆ. ಅದೇನೇ ಇರಲು ಸ್ಟಾರ್‌ ನಟನ ಸಿನಿಮಾವೊಂದು ಒಟಿಟಿಗೆ ಬೇಗನೇ ಬಂದಿರುವುದು ಪ್ರೇಕ್ಷಕರಲ್ಲಿ ಸಂತಸವನ್ನು ತಂದಿದೆ.

ತಮಿಳು ನಟ ಸಿದ್ಧಾರ್ಥನಿಗೆ ಕಾವೇರಿ ಹೋರಾಟದ ವೇದಿಕೆಯಲ್ಲಿಯೇ ಕ್ಷಮೆ ಕೇಳಿದ ನಟ ಶಿವರಾಜ್‌ ಕುಮಾರ್‌!

ಇನ್ನು 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡದವರು ಜೀ5 ಅಥವಾ ಅಮೇಜಾನ್‌ ಪ್ರೈಮ್‌ ಒಟಿಟಿಯಲ್ಲಿ ರಿಲೀಸ್‌ ಆಗುವುದಕ್ಕೆ ಕಾಯುತ್ತಿದ್ದರು. ಆದರೆ, ಇನ್ನು ಕೆಲವರು ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಎ ಮತ್ತು ಸೈಡ್‌-ಬಿ ಎರಡೂ ಭಾಗಗಳು ಒಂದೇ ಬಾರಿಗೆ ಒಟಿಟಿಯಲ್ಲಿ ಲಭ್ಯವಾಗಲಿವೆ ಎಂದು ಕೇಳಿಬಂದಿತ್ತು. ಆದರೆ, ಸೈಡ್‌-ಬಿ ಸಿನಿಮಾ ವೀಕ್ಷಣೆಗೆ ಹೆಚ್ಚಿನ ಕುತೂಹಲವನ್ನು ಉಂಟುಮಾಡುವುದು ಸಿನಿಮಾ ನಾಯಕ ಹಾಗೂ ನಿರ್ದೇಶಕರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸೆ.23ರಿಂದಲೇ (ರಾತ್ರಿ 12 ಗಂಟೆ) 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಇನ್ನು ಪ್ರೈಮ್‌ನಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನೋಡಲು ಲಭ್ಯವಾಗಿದೆ.

ಮತ್ತೊಂದೆಡೆ ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಸಿನಿಮಾ ಸೆಪ್ಟೆಂಬರ್ 1 ರಾಜ್ಯದಾದ್ಯಂತ ಬಿಡುಗಡೆಯಾಗಿತ್ತು. ಆದರೆ, ಇದೇ ವೇಳೆ ಸೈಡ್‌-ಬಿ ದಿನಾಂಕವನ್ನೂ ಘೋಷಣೆ ಮಾಡಲಾಗಿತ್ತು. ಅಂದರೆ, ಮೊದಲ ಭಾಗದ ಸಿನಿಮಾ ಮುಗಿದ ಕೂಡಲೇ ಚಿತ್ರದ ಎರಡನೇ ಭಾಗವನ್ನು ಅಕ್ಟೋಬರ್ 20ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ನೋಡುಗರಿಗೆ ಪರದೆ ಮೇಲೆಯೇ ತೋರಿಸುವ ಮೂಲಕ ಕೌತುಕವನ್ನು ಹುಟ್ಟಿ ಹಾಕಿತ್ತು. ಆದರೆ, ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸೈಡ್‌-ಬಿ ಬಿಡುಗಡೆ ದಿನಾಂಕವನ್ನು ಒಂದು ವಾರ ಮುಂದೂಡಿಕೆ ಮಾಡಿದ್ದು, ಅ.27ಕ್ಕೆ ರಿಲೀಸ್‌ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್‌ ಎಂ.ರಾವ್‌ ಅವರು ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ಅಕ್ಟೋಬರ್ 27 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಸೈಡ್‌-ಬಿನಲ್ಲಿ ರಕ್ಷಿತ್ ಜೊತೆಗೆ ನಟಿ ಚೈತ್ರಾ ಜೆ.ಆಚಾರ್ ಅವರೂ ಕೂಡ ಪೋಸ್ಟರ್‌ ಮೇಲೆ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್‌ನಲ್ಲೂ ಅನ್ಯಾಯ, ಈಗ ಸೀತಾರಾಮದಲ್ಲೂ ಅವಮಾನ! ಅಶೋಕ ಶರ್ಮಾ ಬೆಂಬಲಕ್ಕೆ ನಿಂತ ಫ್ಯಾನ್ಸ್‌

ಇನ್ನು ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಿರುವುದರ ಹಿಂದೆಯೂ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಿನಿಮಾದಿಂದ ಲಾಭವನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಮುಂದೂಡಲಾಗಿದೆ. ಅಂದರೆ, ಅ.20ರಂದು ಶಿವರಾಜಕುಮಾರ್ ಅಭಿನಯದ ಘೋಸ್ಟ್, ತಮಿಳಿನ ದಳಪತಿ ವಿಜಯ್ ಅಭಿನಯದ ಲಿಯೋ, ತೆಲುಗು ರವಿತೇಜ ಅವರ ಟೈಗರ್ ನಾಗೇಶ್ವರ ರಾವ್, ನಂದಮೂರಿ ಬಾಲಕೃಷ್ಣ ಅವರ ಭಗವಂತ ಕೇಸರಿ, ಟೈಗರ್ ಶ್ರಾಫ್ ಅವರ ಗಣಪತ್ ಸೇರಿ ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆ ಆಗಲಿದ್ದು, ಭಾರಿ ಪೈಪೋಟಿ ನೀಡಲಿವೆ. ಆದ್ದರಿಂದಲೇ ಸಪ್ತ ಸಾಗರದಾಚೆ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.

ಈ ಸಿನಿಮಾವನ್ನು ಹೇಮಂತ್ ಎಂ ರಾವ್ ನಿರ್ದೇಶನ ಮಾಡಿದ್ದು, ರಕ್ಷಿತ್‌ ಶೆಟ್ಟಿ ನಾಯಕ, ರುಕ್ಮಿಣಿ ವಸಂತ್ ನಾಯಕಿ, ಅಚ್ಯುತ್ ಕುಮಾರ್, ಅವಿನಾಶ್, ಚೈತ್ರ ಜೆ ಆಚಾರ್ ಸೇರಿದಂತೆ ಹಲವರ ತಾರಾಗಣವಿದೆ. ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.