ನಟ ದರ್ಶನ್ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದು, ಪ್ರತಿವರ್ಷ ಸಂಕ್ರಾಂತಿಯಂದು ವಿಶೇಷ ಪೂಜೆ ಸಲ್ಲಿಸಿ ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಈ ಬಾರಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವುದರಿಂದ, ದರ್ಶನ್‌ಗೆ ಜೈಲಿನಲ್ಲೇ ಸಂಕ್ರಾಂತಿ ಆಚರಿಸುವ ಸ್ಥಿತಿ ಬಂದಿದೆ.

ಸಂಕ್ರಾಂತಿ ಹಬ್ಬ ಅಂದ್ರೆ ಅಯ್ಯಪ್ಪ ಸ್ವಾಮಿ ಭಕ್ತರಿಗೆಲ್ಲಾ ಬಹಳಾನೇ ವಿಶೇಷವಾಗಿದ್ದು. ಲಕ್ಷಾಂತರ ಭಕ್ತರು ಇರುಮುಡಿ ಹೊತ್ತು ಸಂಕ್ರಾಂತಿಯಂದು ಅಯ್ಯಪ್ಪನ ದರ್ಶನ ಪಡೀತಾರೆ. ಅದ್ರಲ್ಲೂ ಈ ದಿನ ಮಕರ ಜ್ಯೋತಿ ರೂಪದಲ್ಲಿ ಅಯ್ಯಪ್ಪ ದರ್ಶನ ಕೊಡ್ತಾನೆ ಅನ್ನೋದು ನಂಬಿಕೆ. ನಟ ದರ್ಶನ್ ಕೂಡ ಅಯ್ಯಪ್ಪನ ಸ್ವಾಮಿಯ ಪರಮ ಭಕ್ತ. ಅಯ್ಯಪ್ಪ ಮಾಲೆ ಧರಿಸಿ, ಮನೆಯಲ್ಲೇ ಸ್ವಾಮಿ ಪೂಜೆ ಮಾಡ್ತಾ ಇದ್ದ ದರ್ಶನ್​ಗೆ ಈ ಸಾರಿ ಜೈಲಲ್ಲೇ ಸಂಕ್ರಾಂತಿ.

ಇಂದು ಸಂಜೆ ಮಕರ ಜ್ಯೋತಿಯ ದರ್ಶನ

ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ದಿನ ಮಕರ ಜ್ಯೋತಿಯನ್ನ ಅಥವಾ ಮಕರ ವಿಳಕ್ಕುವನ್ನ ಆಚರಿಸಲಾಗುತ್ತದೆ. 2026ರ ಮಕರ ಜ್ಯೋತಿ ಶಬರಿಮಲೆ ದೇವಸ್ಥಾನದಲ್ಲಿ ಈ ದಿನ ಸಂಜೆ ಗೋಚರಿಸಲಿದೆ. ಲಕ್ಷಾಂತರ ಭಕ್ತರು ಜ್ಯೋತಿರೂಪದಲ್ಲಿ ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ.

ಹಲವು ಚಿತ್ರನಟರು ಅಯ್ಯಪ್ಪಸ್ವಾಮಿ ಭಕ್ತರು

ದಕ್ಷಿಣ ಭಾರತದಲ್ಲಿ ಅಯ್ಯಪ್ಪ ಸ್ವಾಮಿಗೆ ಕೊಟ್ಯಂತರ ಭಕ್ತರಿದ್ದಾರೆ. ಅಯ್ಯಪ್ಪ ವೃತ ಪಾಲನೆ ಮಾಡಿ ಶಬರಿಮಲೆ ಏರಿ ಅಯ್ಯಪ್ಪನ ದರ್ಶನ ಪಡೆದು ಪಾವನರಾಗ್ತಾರೆ. ದಕ್ಷಿಣದ ಹಲವು ನಟರು ಕೂಡ ಅಯ್ಯಪ್ಪನ ಭಕ್ತರು. ಡಾ.ರಾಜ್‌ಕುಮಾರ್ ಬಹಳಷ್ಟು ಬಾರಿ ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನಕ್ಕೆ ಹೋಗ್ತಾ ಇದ್ರು. ಶಿವಣ್ಣ, ಪುನೀತ್ ಕೂಡ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ್ರು. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಅಯ್ಯಪ್ಪ ಭಕ್ತರೇ.

ದರ್ಶನ್ ಕೂಡ ಅಯ್ಯಪ್ಪ ಸ್ವಾಮಿ ಪರಮಭಕ್ತ

ಹೌದು, ದರ್ಶನ್ ಕೂಡ ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ಅನ್ನೋದು ಅವರ ಆಪ್ತರಿಗೆಲ್ಲಾ ಗೊತ್ತು. ತನ್ನ ಸ್ನೇಹಿತರ ಒಡಗೂಡಿ ಅಯ್ಯಪ್ಪ ಮಾಲೆ ಹಾಕ್ತಿದ್ದ ದರ್ಶನ್, ಮನೆಯಲ್ಲೇ ದೊಡ್ಡದಾಗಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿಸ್ತಾ ಇದ್ರು. ಅಲ್ಲಿಂದಲೇ ಶಬರಿಮಲೆಗೆ ಯಾತ್ರೆ ಹೊರಡುತ್ತಾ ಇತ್ತು. ಬುಲ್ ಬುಲ್ ಸಿನಿಮಾ ಟೈಂನಲ್ಲಿ ಮಗ ವಿನೀಶ್, ಅಕ್ಕನ ಮಗ ಚಂದನ್, ಸೋದರ ದಿನಕರ್ ಮತ್ತೊಂದಿಷ್ಟು ಸಹನಟರು ಎಲ್ಲರನ್ನೂ ದರ್ಶನ್​ ಶಬರಿಮಲೆಗೆ ಕರೆದೊಯ್ದಿದ್ರು. ಆ ವರ್ಷ ಮಗನಿಗೂ ಮಾಲೆ ಹಾಕಿಸಿದ್ರು. ಕೊನೆಯದಾಗಿ ಕೋವಿಡ್​ ಬರುವ ಮುನ್ನ ದರ್ಶನ್ ಇರುಮುಡಿ ಹೊತ್ತು ಶಬರಿಮಲೆಗೆ ಹೋಗಿ ಬಂದಿದ್ರು. ಆ ವರ್ಷ ಅಯ್ಯಪ್ಪನ ದರ್ಶನದ ನಂತರ ಬಂದ ರಾಬರ್ಟ್ ಸಿನಿಮಾ ದೊಡ್ಡ ಹಿಟ್ ಆಗಿತ್ತು.

ದಾಸನ ಮನೆಯಲ್ಲಿ ನಡೆಯುತ್ತಿತ್ತು ಅಯ್ಯಪ್ಪ ಪೂಜೆ

ಹೌದು ಪ್ರತಿ ವರ್ಷ ದರ್ಶನ್ ಮನೆಯಲ್ಲಿ ನಡೀತಾ ಇದ್ದ ಅಯ್ಯಪ್ಪ ಪೂಜೆ ತುಂಬಾನೇ ವಿಶೇಷವಾಗಿರ್ತಾ ಇತ್ತು. ಹಿರಿ ಸ್ವಾಮಿಗಳನ್ನ ಕರೆಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡಿಸ್ತಾ ಇದ್ರು ದರ್ಶನ್. ಮನೆಯಲ್ಲಿ ನಡೀತಾ ಇದ್ದ ಅಯ್ಯಪ್ಪನ ಭಜನೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಳ್ತಾ ಇದ್ರು ದರ್ಶನ್. ದರ್ಶನ್ ಮೈಸೂರಿನಲ್ಲಿ ಇದ್ದ ದಿನಗಳಿಂದಲೂ ಅಯ್ಯಪ್ಪ ಮಾಲೆ ಹಾಕಿ ವೃತ ಮಾಡ್ತಾ ಬಂದಿದ್ರು. ತನ್ನ ಯಶಸ್ಸಿಗೆ ಸ್ವಾಮಿ ಅಯ್ಯಪ್ಪನ ದಯೆಯೇ ಕಾರಣ ಅಂತಿದ್ರು.

ಜೈಲಲ್ಲೇ ದಾಸನ ಸಂಕ್ರಾಂತಿ, ಯಾವಾಗ ಮುಕ್ತಿ..?

ಹೌದು ಈ ಸಾರಿ ಮಾತ್ರ ದರ್ಶನ್‌ಗೆ ಜೈಲಿನಲ್ಲೇ ಸಂಕ್ರಾಂತಿ ಆಚರಿಸೋ ಸ್ಥಿತಿ ಬಂದಿದೆ. ದರ್ಶನ್ 2024ರ ಜೂನ್​ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿಯಾಗಿದ್ದು ಗೊತ್ತೇ ಇದೆ. ಆದ್ರೆ ಕಳೆದ ವರ್ಷ ಸಂಕ್ರಾಂತಿ ವೇಳೆಗೆ ದರ್ಶನ್​ಗೆ ಬೇಲ್ ಸಿಕ್ಕಿತ್ತು. ಕುಟುಂಬದ ಜೊತೆ ಹಬ್ಬ ಆಚರಿಸುವ ಅವಕಾಶ ಸಿಕ್ಕಿತ್ತು. ಆದ್ರೆ ಈ ಸಾರಿ ದರ್ಶನ್‌ಗೆ ಜೈಲಲ್ಲೇ ಸಂಕ್ರಾಂತಿ. ಸದ್ಯ ದರ್ಶನ್ ಎ2 ಆಗಿರೋ ಕೊಲೆ ಕೇಸ್‌ನ ಟ್ರಯಲ್ ಆರಂಭಗೊಂಡಿದೆ. ಕೋರ್ಟ್​ನಲ್ಲಿ ವಿಚಾರಣೆ ನಡೀತಾ ಇದೆ. ಮುಂದೆ ದಾಸನ ಭವಿಷ್ಯ ಏನಾಗುತ್ತೆ ಗೊತ್ತಿಲ್ಲ.. ಮತ್ತೆಂದು ದರ್ಶನ್‌ಗೆ ಅಯ್ಯಪ್ಪನ ದರ್ಶನ ಸಿಗುತ್ತೋ. ಅದು ಆ ಸ್ವಾಮಿ ಅಯ್ಯಪ್ಪನಿಗೆ ಮಾತ್ರ ಗೊತ್ತು.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.