ತುಳು ಸಿನಿಮಾದಲ್ಲಿ ಅವಕಾಶ ಸಿಕ್ಕಿದರೆ ಪರಿಪೂರ್ಣ ಅಭಿನಯ: ಹಿರಿಯ ನಟ ಅನಂತನಾಗ್
'ನನ್ನ ಕರ್ಮಭೂಮಿ ಕರ್ನಾಟಕ ಕರಾವಳಿ. ಕರಾವಳಿಯ ಸೊಗಡು ಆಗಿರುವ ತುಳು ಭಾಷೆಯಲ್ಲಿ ಅವಕಾಶ ಸಿಕ್ಕಿದರೆ ಪೂರ್ಣಪ್ರಮಾಣದಲ್ಲಿ ನಟಿಸಲು ಸಿದ್ಧನಿದ್ದೇನೆ.' ಇದು ತುಳು ಭಾಷೆಯ ಸಿನಿಮಾದಲ್ಲಿ ನಟಿಸುವ ಕುರಿತಂತೆ ಹಿರಿಯ ನಟ ಅನಂತನಾಗ್ ಹೇಳಿದ ಅಭಿಮಾನದ ಮಾತು.
ಮಂಗಳೂರು (ಸೆ.04): 'ನನ್ನ ಕರ್ಮಭೂಮಿ ಕರ್ನಾಟಕ ಕರಾವಳಿ. ಕರಾವಳಿಯ ಸೊಗಡು ಆಗಿರುವ ತುಳು ಭಾಷೆಯಲ್ಲಿ ಅವಕಾಶ ಸಿಕ್ಕಿದರೆ ಪೂರ್ಣಪ್ರಮಾಣದಲ್ಲಿ ನಟಿಸಲು ಸಿದ್ಧನಿದ್ದೇನೆ.' ಇದು ತುಳು ಭಾಷೆಯ ಸಿನಿಮಾದಲ್ಲಿ ನಟಿಸುವ ಕುರಿತಂತೆ ಹಿರಿಯ ನಟ ಅನಂತನಾಗ್ ಹೇಳಿದ ಅಭಿಮಾನದ ಮಾತು. ಮಂಗಳೂರಿನ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಭಾನುವಾರ ಮಂಗಳೂರಿನ ಅನಂತನಾಗ್-75 ಅಭಿನಂದನಾ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡ 'ಅನಂತನಾಗ್-75' ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಂವಾದದಲ್ಲಿ ಈ ಕುರಿತು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಅನಂತನಾಗ್, ಆಳವಾದ ಪಾತ್ರವಿದ್ದರೆ, ಅನುಭವ ಉತ್ತಮವಾಗಿರುತ್ತದೆ. ಅನುಭವಕ್ಕೆ ತಕ್ಕಂತೆ ನಟನೆಗೆ ನಾನು ಯಾವತ್ತೂ ಸಿದ್ಧನಿದ್ದೇನೆ ಎಂದರು. ಕೊಂಕಣಿ ಸಿನಿಮಾದಲ್ಲೂ ನಟನೆ ಮಾಡಬಹುದು. ಕೊಂಕಣಿ ಭಾಷೆಯಲ್ಲಿ ಸಿನಿಮಾ ಮಾಡಿದರೆ ನಿರ್ಮಾಪಕರಿಗೆ ಹಾಕಿದ ಮೊತ್ತ ವಾಪಸ್ ಬರುವಂತಾಗಬೇಕು. ಇಲ್ಲದಿದ್ದರೆ ನಷ್ಟದಲ್ಲಿ ಸಿನಿಮಾ ಮಾಡಿದಂತಾಗುತ್ತದೆ.
ಪಿಎಂ, ಸಿಎಂಗೆ ಭದ್ರತೆ ನೀಡಿದ್ದ ಸ್ಫೋಟಕ ಪತ್ತೆದಾರಿ ದಾವಣಗೆರೆ ಪೊಲೀಸ್ ಶ್ವಾನ ಸೌಮ್ಯ ಇನ್ನಿಲ್ಲ!
ಯಾಕೆಂದರೆ ಕೊಂಕಣಿ ಸಮುದಾಯ ಸೀಮಿತ ಸಂಖ್ಯೆಯಲ್ಲಿದೆ. ಕನ್ನಡದಲ್ಲಿ ಸಿನಿಮಾ ಮಾಡಿದರೆ ಆರೂವರೆ ಕೋಟಿ ಕನ್ನಡಿಗರಲ್ಲಿ ಶೇ.10ರಷ್ಟು ಅಂದರೆ 75 ಲಕ್ಷ ಮಂದಿಯಾದರೂ ನೋಡುತ್ತಾರೆ, ನಾನು ಕೊಂಕಣಿ ನಾಟಕದಿಂದಲೇ ನಟನಾಗಿ ಬೆಳೆದ ಕಾರಣ, ನನ್ನ ಮಾತೃಭಾಷೆಯೂ ಕೊಂಕಣಿ ಆಗಿದೆ. ಕೊಂಕಣಿಯಲ್ಲಿ ಸ್ವಪ್ನ ಸಾರಸ್ವತ ಸಿನಿಮಾದಲ್ಲಿ ನಟಿಸುವಂತೆ ಕೋರಿಕೊಂಡಿದ್ದರು. ಸ್ವಪ್ನ ಸಾರಸ್ವತ ಕಾದಂಬರಿಯ ಹೂರಣವನ್ನು ಕೇವಲ ಎರಡು ಗಂಟೆಗಳಲ್ಲಿ ಪ್ರೇಕ್ಷಕರಿಗೆ ಕಟ್ಟಿಕೊಡಲು ಸಾಧ್ಯವಿಲ್ಲ, ಹಾಗಾಗಿ ನಿರಾಕರಿಸಿದೆ ಎಂದರು.
ರಂಗಭೂಮಿ ಅನುಭವನ ನಟನೆಗೆ ಪೂರಕ: ರಂಗಭೂಮಿ ಅನುಭವ ಸಿನಿಮಾ ನಟನೆಗೆ ಪೂರಕವಾಗಿದೆ. ನಟ ಯಾವಾಗಲೂ ಪಾತ್ರಕ್ಕೆ ತನ್ನನ್ನು ಒಪ್ಪಿಸಿಕೊಂಡು ಬಿಡುತ್ತಾನೆ. ಅಲ್ಲಿ ನಿಜವಾದ ನಟನ ಬದಲು ಪಾತ್ರವೇ ಕಾಣಿಸಬೇಕು. ಸಿನಿಮಾದಲ್ಲಿ ನಟ, ನಿರ್ದೇಶಕರದ್ದು ಬೇರೆ ಬೇರೆ ಹೊಣೆಗಾರಿಕೆ. ನಾನು ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರೂ ಅದು ಕನ್ನಡ ಚಿತ್ರ ರಂಗದ ರಾಯಭಾರಿಯಂತೆ ಮಾತ್ರ ಎಂದರು ಅನಂತನಾಗ್. ನನ್ನ ಚಿತ್ರಗಳಲ್ಲಿ ಈ ಕರಾವಳಿಯ ಸೊಗಸನ್ನು ಎಲ್ಲೆಡೆಗೆ ಪಸರಿಸುವಂತೆ ಮಾಡಿದ್ದೇನೆ. ರಾಜಕಾರಣದಲ್ಲಿ ಕೆಲವು ವರ್ಷ ಇದ್ದರೂ ನನ್ನದು ಕನಿಷ್ಠ ಸಂಖ್ಯೆಯ ಸಮುದಾಯವಾದ್ದರಿಂದ ರಾಜಕೀಯದಲ್ಲಿ ಮುಂದುವರಿಯುವುದು ಕಷ್ಟ ಎಂಬ ನೆಲೆಯಲ್ಲಿ ಬಿಟ್ಟುಬಿಟ್ಟೆ ಎಂದರು. ಅನಂತನಾಗ್ ಪತ್ನಿ ಗಾಯತ್ರಿ ನಾಗ್, ಹಿರಿಯ ನಿರ್ದೇಶಕರಾದ ಗುಲ್ವಾಡಿ ರಾಮದಾಸ್, ಕಾಸರಗೋಡು ಚಿನ್ನಾ, ದಿನೇಶ್ ಮಂಗಳೂರು, ಲಕ್ಷ್ಮಣ ಕುಮಾರ್ ಮಲ್ಲೂರು, ಹಿರಿಯ ಪತ್ರಕರ್ತ ಸದಾಶಿವ ಶೆಣೈ ಸಂವಾದ ನಡೆಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಸಂವಾದ ನಡೆಸಿಕೊಟ್ಟರು.
ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ
ಅನಂತನಾಗ್ ದಂಪತಿ ಸಾರೋಟು ಮೆರವಣಿಗೆ: ಕೆನರಾ ಹೈಸ್ಕೂಲಿನ ಮುಂಭಾಗದಲ್ಲಿ ವಿಶೇಷವಾಗಿ ಸಿಂಗರಿಸಿದ ಸಾರೋಟಿನಲ್ಲಿ ಅನಂತನಾಗ್ ದಂಪತಿಗಳನ್ನು ಕುಳ್ಳಿರಿಸಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಟಿ ವಿ ರಮಣ್ ಪೈ ಸಭಾಂಗಣಕ್ಕೆ ಕರೆದುಕೊಂಡು ಬರಲಾಯಿತು. ದಾರಿಯುದ್ದಕ್ಕೂ ಹುಲಿವೇಷ ಕುಣಿತ, ಸ್ಯಾ್ಕ್ಸೋಫೋನ್, ಬೊಂಬೆಗಳು, ಮಕ್ಕಳಿಂದ ಅನಂತನಾಗ್ ಸಿನೆಮಾ ಪಾತ್ರಗಳ ವೇಷಭೂಷಣ, ಬಾಜಾ ಭಜಂತ್ರಿಗಳ ಅಬ್ಬರದಲ್ಲಿ ಅನಂತನಾಗ್ ಅಭಿಮಾನಿಗಳು ಸಂಭ್ರಮಿಸಿದರು. ಇದಕ್ಕೂ ಮುನ್ನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಪುತ್ಥಳಿಗೆ ಅನಂತನಾಗ್ ಅವರು ಹಾರಾರ್ಪಣೆ ಮಾಡಿ ಶ್ರೇಷ್ಠ ಶಿಕ್ಷಣ ಮತ್ತು ಬ್ಯಾಂಕಿಂಗ್ ತಜ್ಞನಿಗೆ ಗೌರವ ಸಲ್ಲಿಸಿದರು. ಉದ್ಘಾಟನೆ, ಸಂವಾದ ಬಳಿಕ ಅನಂತನಾಗ್ ಅಭಿನಯದ ಚಿತ್ರಗಳ ಸಂಗೀತ ರಸಮಂಜರಿ, ನೃತ್ಯ ವೈವಿಧ್ಯ ನಡೆಯಿತು.