ದೆಹಲಿ ಬಾಂಬ್ ಸ್ಪೋಟಕ್ಕೂ ನಿಮಗೂ ಸಂಬಂಧವಿರುವುದು ಪತ್ತೆಯಾಗಿದೆ ಎಂದು ಸುಳ್ಳು ಬೆದರಿಕೆ ಹಾಕಿ, ಕನ್ನಡ ಪ್ರಸಿದ್ಧ ನಟರೊಬ್ಬರ ಅಭಿಮಾನಿಗೆ ಸೈಬರ್ ಕಳ್ಳರು 5.53 ಲಕ್ಷ ರೂಪಾಯಿ ವಂಚಿಸಿದ್ದಾರೆ. ದಕ್ಷಿಣ ಸಿಇಎನ್ ಠಾಣೆಯಲ್ಲಿ ದೂರು ದಾಖಲು ಆಗಿದೆ.

ಬೆಂಗಳೂರು (ಡಿ.22): ದೇಶದ ಭದ್ರತಾ ಏಜೆನ್ಸಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ಭಯಭೀತಿಗೊಳಿಸಿ ಹಣ ದೋಚುವ ಜಾಲವೊಂದು ಈಗ ಸ್ಯಾಂಡಲ್‌ವುಡ್ ನಟರೊಬ್ಬರ ಅಭಿಮಾನಿಗೆ ವಂಚನೆ ಮಾಡಲಾಗಿದೆ. ದೆಹಲಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ನಿಮ್ಮ ಕೈವಾಡವಿದೆ ಎಂದು ಬೆದರಿಸಿದ ವಂಚಕರು, ಯುವಕನಿಂದ ಬರೋಬ್ಬರಿ 5.53 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ.

ಘಟನೆಯ ಹಿನ್ನೆಲೆ: 

ದೂರುದಾರರಾದ ಶರಣ್ ಆರ್. ಮುಕುಂದ್ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ‘ನಾವು ಎಟಿಎಸ್ (ATS) ನಿಂದ ಮಾತನಾಡುತ್ತಿದ್ದೇವೆ. ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ನಿಮ್ಮ ಕೈವಾಡವಿರುವುದು ಪತ್ತೆಯಾಗಿದೆ. ನಿಮ್ಮ ಮೊಬೈಲ್ ಸಂಖ್ಯೆ ಈ ಕೃತ್ಯಕ್ಕೆ ಬಳಕೆಯಾಗಿದೆ’ ಎಂದು ಗಂಭೀರವಾಗಿ ಬೆದರಿಸಿದ್ದಾನೆ. ಇದರಿಂದ ಶರಣ್ ಗಾಬರಿಗೊಂಡಿದ್ದಾರೆ.

ವಂಚನೆಯ ಜಾಲ: 

ಮೊದಲು ಎಟಿಎಸ್ ಅಧಿಕಾರಿ ಎಂದು ಮಾತನಾಡಿದ ವ್ಯಕ್ತಿ, ನಂತರ ‘ನಮ್ಮ ಎನ್ ಐ ಎ (NIA) ತಂಡ ನಿಮಗೆ ಕರೆ ಮಾಡಲಿದೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ತಕ್ಷಣವೇ +91 9620122894 ಮತ್ತು +91 6262656645 ಸಂಖ್ಯೆಗಳಿಂದ ವೀಡಿಯೋ ಕರೆ ಬಂದಿದೆ. ಕರೆಯಲ್ಲಿ ಇದ್ದ ವ್ಯಕ್ತಿ ತನ್ನನ್ನು 'ಗೌರವ್' ಎಂಬ ಎನ್ ಐ ಎ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.

‘ನಿಮ್ಮ ವೀಡಿಯೋ ಸ್ಟೇಟ್‌ಮೆಂಟ್ ದಾಖಲಿಸಿಕೊಳ್ಳುತ್ತಿದ್ದೇವೆ, ನೀವು ಕರೆಯಿಂದ ಹೊರಹೋಗಬಾರದು’ ಎಂದು ಹೇಳಿ ಶರಣ್ ಅವರ ವೈಯಕ್ತಿಕ ವಿವರ ಮತ್ತು ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆದುಕೊಂಡಿದ್ದಾನೆ. ನಂತರ ವಂಚಕರು ಸಾಫ್ಟ್ ಆಗಿ ಮಾತನಾಡಿ, 'ನಿಮ್ಮನ್ನು ಈ ಕೇಸ್‌ನಿಂದ ಬಚಾವ್ ಮಾಡುತ್ತೇವೆ. ಅಮಾಯಕರೆಂದು ಸಾಬೀತುಪಡಿಸಲು 'Certificate of Innocence' ಬೇಕೆಂದರೆ ನೀವು ಸರ್ಕಾರದ ಫೀಸ್ ಪಾವತಿಸಬೇಕು. ಕೇಸ್ ಮುಗಿದ ಮೇಲೆ ಈ ಹಣ ವಾಪಸ್ ಬರುತ್ತದೆ' ಎಂದು ನಂಬಿಸಿದ್ದಾರೆ.

ಲಕ್ಷಾಂತರ ಹಣ ವರ್ಗಾವಣೆ

ಕಿಚ್ಚ ಸುದೀಪ್ ಅವರ ಅಭಿಮಾನಿಯೂ ಆಗಿರುವ ಶರಣ್ ಅವರು, ವಂಚಕರ ಮಾತನ್ನು ನಂಬಿಕೊಂಡು ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 5,53,000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ನಂತರ ವಂಚಕರ ನಂಬರ್ ಸ್ವಿಚ್ ಆಫ್ ಆಗಿದೆ. ಇದು ಸೈಬರ್ ವಂಚನೆ ಎಂದು ಮನವರಿಕೆಯಾದ ತಕ್ಷಣ ಶರಣ್ ಅವರು 1930 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸದ್ಯ ಈ ಕುರಿತು ಬೆಂಗಳೂರಿನ ದಕ್ಷಿಣ ವಿಭಾಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೇಶದ ಸೂಕ್ಷ್ಮ ಪ್ರಕರಣಗಳನ್ನು ಬಳಸಿಕೊಂಡು ವಂಚಿಸುತ್ತಿರುವ ಈ ಜಾಲದ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಸೈಬರ್ ಸುರಕ್ಷತೆಗಾಗಿ ಗಮನಿಸಿ: ಯಾವುದೇ ತನಿಖಾ ಸಂಸ್ಥೆಗಳು ಫೋನ್ ಕರೆ ಅಥವಾ ವೀಡಿಯೋ ಕರೆ ಮೂಲಕ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ತಕ್ಷಣ 1930ಗೆ ಕರೆ ಮಾಡಿ.