ಕನ್ನಡ ಚಿತ್ರರಂಗದ ಮೇರು ನಟ, ಚಿರಯೌವ್ವನಿಗ ಅನಂತ್ ನಾಗ್ ಗೆ ತುಂಬು 71 ವರ್ಷದ ಸಂಭ್ರಮ. ಇಂದು 71 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಸಹಜವಾದ ನಟನೆ, ಸ್ಪಷ್ಟವಾದ ಕನ್ನಡ, ಸುಲಲಿತವಾಗಿ ಹೇಳುವ ಡೈಲಾಗ್, ವಿಭಿನ್ನವಾದ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಹತ್ತಿರವಾದ ನಾಯಕ ನಟ. 

ಅನಂತ್ ನಾಗ್ ಸೆಪ್ಟೆಂಬರ್ 4, 1948 ರಲ್ಲಿ ಜನಿಸಿದರು. ತಾಯಿ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಮುಂಬೈನಲ್ಲಿ ಓದು ಪೂರೈಸಿದರು. ಕಾಲೇಜಿನ ದಿನಗಳಿಂದಲೇ ಕನ್ನಡ, ಕೊಂಕಣಿ, ಮರಾಠಿ ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ಶ್ಯಾಂ ಬೆನೆಗಲ್ ಅವರ ‘ಅಂಕುರ್’ ಚಿತ್ರದಿಂದ ಚಿತ್ರರಂಗಕ್ಕೆ ಬಂದವರು. ಹಿಂದಿಯಲ್ಲಿ ನಿಶಾಂತ್, ಕಲಿಯುಗ್, ಗೆಹ್ರಾಯಿ ಸೇರಿದಂತೆ ನಟಿಸುವ ಮೂಲಕ ಭರವಸೆ ಮೂಡಿಸುತ್ತಾರೆ. 

ಅನಂತ್ ನಾಗ್ ಬಗ್ಗೆ ನೀವು ತಿಳಿಯಬೇಕಾದ ಇಂಟರೆಸ್ಟಿಂಗ್ ವಿಚಾರಗಳಿವು!

ಆಗೆಲ್ಲ ಕಾಶ್ಮೀರ ಕಣಿವೆಯಲ್ಲಿ ಶ್ರೀನಗರದಿಂದ 53 ಕಿಲೋಮೀಟರ್‌ ದೂರದಲ್ಲಿರುವ ಅನಂತ್‌ನಾಗ್‌ ಎಂಬ ಊರಿಗೂ, ಶಿರಸಿ ಸಮೀಪದ ನಾಗರಕಟ್ಟೆಯಿಂದ ಬಂದ ಅನಂತ್‌ ನಾಗರಕಟ್ಟೆ ಎಂಬ ನಟರಿಗೂ ಏನಕೇನ ಸಂಬಂಧವೂ ಇಲ್ಲವೆಂದು ಚಿತ್ರರಂಗ ನಂಬಿತ್ತು. ಅನಂತ್‌ ನಾಗರಕಟ್ಟೆ ಹೆಸರಿನಲ್ಲಿರುವ ನಾಗರಕಟ್ಟೆಯನ್ನು ಮೊಟಕುಗೊಳಿಸಿದ್ದರಿಂದ ಅವರು ಅನಂತ ನಾಗ್‌ ಆದರು ಅನ್ನುವುದನ್ನು ಬಿಟ್ಟರೆ ಆ ಊರಿಗೂ ಇವರಿಗೂ ಸಂಬಂಧವೇ ಇಲ್ಲ ಅಂತ ಇಲ್ಲಿಯ ತನಕ ಎಲ್ಲರೂ ಅಂದುಕೊಂಡಿದ್ದರು. ಆದರೆ ಅನಂತ್‌ನಾಗ್‌ ಹೆಸರಿಗೂ ಅನಂತ್‌ನಾಗ್‌ ಎಂಬ ಊರಿಗೂ ಹತ್ತಿರದ ಸಂಬಂಧವಿದೆ ಅನ್ನುವುದನ್ನು ಅನಂತ್‌ನಾಗ್‌ ಅವರೇ ಹೇಳಿಕೊಂಡಿದ್ದಾರೆ.

ಶಾಮ್‌ ಬೆನಗಲ್‌ ಕಾಶ್ಮೀರ ನೆನಪೂ ಇರಲಿ ಎಂಬ ಕಾರಣಕ್ಕೆ ಅನಂತ್‌ ನಾಗರಕಟ್ಟೆಎಂಬ ಹೆಸರನ್ನು ಅನಂತ್‌ನಾಗ್‌ ಎಂದು ಬದಲಾಯಿಸುತ್ತಾರೆ. ಕಾಶ್ಮೀರದ ಮೂಲ ಊರಿನ ಹೆಸರು, ನಾಗರಕಟ್ಟೆಯ ಹೆಸರೂ ಸೇರಿಕೊಂಡು ಅವರು ಅನಂತ್‌ನಾಗ್‌ ಆಗುತ್ತಾರೆ. ಹೀಗೆ ಅನಂತ್‌ನಾಗ್‌ ಹೆಸರಲ್ಲಿ ಕರ್ನಾಟಕವೂ ಇದೆ, ಕಾಶ್ಮೀರವೂ ಇದೆ.

ಕಡೆ ನಾಟಕ ಬರೆದು ಸಾವಿನ ಸುಳಿವು ನೀಡಿದ್ದ ಕಾರ್ನಾಡ್ !

ಇನ್ನು ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1973 ರಲ್ಲಿ ನಟರಾಜ್ ಅರಸ್ ಅವರ ಸಂಕಲ್ಪ ಚಿತ್ರದಿಂದ. ಅಲ್ಲಿಂದ ಮುಂದೆ ಅವರನ್ನು ಅವರನ್ನು ಕನ್ನಡ ಚಿತ್ರರಂಗ ಬರಸೆಳೆದು ಅಪ್ಪಿಕೊಂಡಿತು. ಮಾಡಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್. ಆ ನಂತರ ಬಯಲುದಾರಿ ಸಿನಿಮಾ ಮಾಡ್ತಾರೆ. ಅದು ಇವರನ್ನು ಇನ್ನಷ್ಟು ಫೇಮಸ್ ಮಾಡಿತು. ಕಲ್ಪನಾ ಜೊತೆ ‘ಬಾನಲ್ಲೂ ನೀನೇ... ಭುವಿಯಲ್ಲೂ ನೀನೇ’ ಹಾಡು ಪ್ರೇಮಿಗಳ ಪಾಲಿನ ರಾಷ್ಟ್ರಗೀತೆಯಾಯಿತು. 

ಎಲ್ಲಾ ರೀತಿಯ ಸಿನಿಮಾದಲ್ಲೂ ನಟಿಸಿದ್ದಾರೆ. ‘ನಾನಿನ್ನ ಬಿಡಲಾರೆ’ ಇವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಯಿತು. ಆ ಕಾಲದಲ್ಲಿ ಲಕ್ಷ್ಮೀ ಅನಂತ್ ನಾಗ್ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಯಿತು. ಬೆಂಕಿಯ ಬಲೆ, ಚಂದನದ ಗೊಂಬೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಬಿಡುಗಡೆಯ ಬೇಡಿ ಯಾರೂ ಮರೆಯದ ಸಿನಿಮಾಗಳು. ಹಾಡುಗಳು ಅಷ್ಟೇ ಇಂದಿಗೂ ಎಲ್ಲರ ಬಾಯಲ್ಲಿ ಗುನುಗುನಿಸುತ್ತದೆ. 

ಹಾಸ್ಯ ಪ್ರಧಾನ ಪಾತ್ರಗಳಿಗೂ ಹೇಳಿ ಮಾಡಿಸಿದಂತಿದ್ಧಾರೆ ಅನಂತ್ ನಾಗ್. ಚಾಲೆಂಜ್ ಗೋಪಾಲಕೃಷ್ಣ, ಗೋಲ್ ಮಾಲ್ ರಾಧಾಕೃಷ್ಣ, ಸಮಯಕ್ಕೊಂದು ಸುಳ್ಳು, ಯಾರಿಗೂ ಹೇಳ್ಬೇಡಿ, ಗಣೇಶ-ಸುಬ್ರಹ್ಮಣ್ಯ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತಾನು ಒಂದೇ ರೀತಿಯ ಪಾತ್ರಗಳಿಗೆ ಸೀಮಿತ ಅಲ್ಲ ಎಂಬುದನ್ನು ನಿರೂಪಿಸಿದರು. ಇತ್ತೀಚಿಗೆ ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಸರ್ಕರಿ ಹಿರಿಯ ಪ್ರಾಥಮಿಕ ಶಾಲೆ, ಕೆಜಿಎಫ್, ಕವಲುದಾರಿ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಇದು ಸಿನಿಮಾದಲ್ಲಿ ಹೈಲೈಟ್ ಆಯಿತು.  

ಅನಂತ್ ನಾಗ್ ಅನ್‌ಲಿಮಿಟೆಡ್! ಎವರ್‌ಗ್ರೀನ್ ನಟನೊಂದಿಗೆ Exclusive ಸಂದರ್ಶನ

ಸಹೋದರ ಶಂಕರ್ ನಾಗ್ ನಿರ್ದೇಶನದ ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ  ’ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಜೊತೆಗೆ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲೂ ನಟಿಸಿದ್ದಾರೆ. 

ಎಂತಹದೇ ಪಾತ್ರವಾದರೂ, ಚಿಕ್ಕದು, ದೊಡ್ಡದು ಎಂದು ತಾರತಮ್ಯ ಮಾಡದೇ ಆ ಪಾತ್ರಗಳಿಗೆ ನ್ಯಾಯ ಒದಗಿಸುವ ಅಪ್ರತಿಮ ಕಲಾವಿದ, ಎವರ್ ಗ್ರೀನ್ ವ್ಯಕ್ತಿತ್ವದ, ಹೃದಯ ಶ್ರೀಮಂತ ನಟನಿಗೆ ಸುವರ್ಣ ನ್ಯೂಸ್. ಕಾಂನಿಂದ ಹುಟ್ಟುಹಬ್ಬದ ಶುಭಾಶಯಗಳು.