ಕಡೆ ನಾಟಕ ಬರೆದು ಸಾವಿನ ಸುಳಿವು ನೀಡಿದ್ದ ಕಾರ್ನಾಡ್ !

ಹಿರಿಯ ನಟ ಅನಂತ್ ನಾಗ್ ತಮ್ಮ ಸ್ನೇಹಿತರಾಗಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಬಗ್ಗೆ ನೆನಪು ಬಿಚ್ಚಿಟ್ಟಿದ್ದಾರೆ. ಗಿರೀಶ್‌ ಕಾರ್ನಾಡರ ಕುರಿತು ಯೋಚನೆ ಮಾಡಿದಾಗೆಲ್ಲ ಹಲವಾರು ಸಂಗತಿಗಳು ಮನಸ್ಸಿನಲ್ಲಿ ಮೂಡುತ್ತವೆ ಅನಂತ್ ನಾಗ್ ಹೇಳಿಕೊಂಡಿದ್ದಾರೆ. ಹಾಗಾದ್ರೆ ಅವರು ಹಂಚಿಕೊಂಡ ವಿಚಾರಗಳೇನು..?

Actor Ananth Nag Pays Literary Tribute To Girish Karnad

ಅನಂತನಾಗ್‌, ಹಿರಿಯ ನಟ

ಗಿರೀಶ್‌ ಕಾರ್ನಾಡರ ಕುರಿತು ಯೋಚನೆ ಮಾಡಿದಾಗೆಲ್ಲ ಹಲವಾರು ಸಂಗತಿಗಳು ಮನಸ್ಸಿನಲ್ಲಿ ಮೂಡುತ್ತವೆ. ಗಿರೀಶ್‌ ಕಾರ್ನಾಡರು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದರೋ ಅಥವಾ ಅವರ ಜೀವನದಲ್ಲಿ ನಾನು ಮತ್ತು ಶಂಕರ್‌ನಾಗ್‌ ಹಾಸು ಹೊಕ್ಕಾಗಿದ್ದೆವೋ ನನಗೆ ಗೊತ್ತಾಗುತ್ತಿಲ್ಲ. ಅಂಥ ಅವಿನಾಭಾವ ಅನುಸಂಧಾನ ನಮ್ಮ ಮಧ್ಯೆ ಇತ್ತು. ಅದು ಹಲವಾರು ವರ್ಷಗಳ ಸಂಬಂಧ ಕೂಡ. ನಾನು ಮುಂಬೈನಲ್ಲಿ ಇದ್ದಾಗ ಗಿರೀಶ್‌ ಕಾರ್ನಾಡರು ಬರೆದ ಯಯಾತಿ ನಾಟಕದಲ್ಲಿ ಪುರುವಿನ ಪಾತ್ರ ಮಾಡಿದ್ದೆ. ಆಮೇಲೆ ನಾನು ಬೆಂಗಳೂರಿಗೆ ಬಂದಾಗ ವೈಯನ್ಕೆ, ಗಿರೀಶ್‌ ಕಾರ್ನಾಡ್‌ ಮತ್ತು ಜಿ.ವಿ.ಅಯ್ಯರ್‌ ಸಾಂಗತ್ಯವೂ ಇದ್ದ ಸಂಕಲ್ಪ ಚಿತ್ರದಲ್ಲಿ ನಟಿಸಿದೆ. ಶಂಕರ್‌ನಾಗ್‌ ಕೂಡ ಚಿತ್ರರಂಗಕ್ಕೆ ಬಂದದ್ದು ಗಿರೀಶ್‌ ಕಾರ್ನಾಡರೇ ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ.

ನಿಶಾಂತ್‌ ಮತ್ತು ಮಂಥನ್‌ ಚಿತ್ರದಲ್ಲಿ ಅವರ ಜೊತೆ ನಟಿಸಿದೆ. ಶಂಕರ್‌ ನಾಗ್‌ ನಟಿಸಿದ ಒಂದಾನೊಂದು ಕಾಲದಲ್ಲಿ ಚಿತ್ರದ ನಂತರ ಗಿರೀಶ್‌ ಕಾರ್ನಾಡರು ಬರೆದ ಅಂಜುಮಲ್ಲಿಗೆ ನಾಟಕವನ್ನು ನಾವು ರಂಗಕ್ಕೆ ತಂದಿದ್ದೆವು. ಅದನ್ನು ಶಂಕರ್‌ನಾಗ್‌ ನಿರ್ದೇಶನ ಮಾಡಿದ್ದ. ನಾನೂ ಶಂಕರ್‌ ಇಬ್ಬರೂ ಅದರಲ್ಲಿ ನಟಿಸಿದ್ದೆವು. ಆ ನಂತರ ಮಾಲ್ಗುಡಿ ಡೇಸ್‌ ಶುರುವಾದಾಗ ಅದರಲ್ಲಿ ನಟಿಸಲಿಕ್ಕೆ ಗಿರೀಶ್‌ ಕಾರ್ನಾಡರನ್ನು ಶಂಕರ್‌ ಕರೆದ. ಆಗ ಶಂಕರ್‌ ನಿರ್ದೇಶನದಲ್ಲಿ ಗಿರೀಶ್‌ ನಟಿಸಿದ್ದರು. ಮುಂದೆ ನಮ್ಮದೇ ನಿರ್ಮಾಣದಲ್ಲಿ ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕವನ್ನು ಸಿನಿಮಾ ಮಾಡಲು ನಿರ್ಧರಿಸಿದೆವು. ಅದರಲ್ಲಿ ಶಂಕರ್‌ ನಟಿಸಬೇಕಾಗಿತ್ತು, ಗಿರೀಶ್‌ ನಿರ್ದೇಶಿಸಬೇಕಾಗಿತ್ತು. ಲೋಕಾಪುರದಲ್ಲಿ ಚಿತ್ರೀಕರಣ ಎಂದು ನಿರ್ಧಾರವಾಗಿತ್ತು. ಅಲ್ಲಿಗೆ ಚಿತ್ರೀಕರಣಕ್ಕೆಂದು ತೆರಳುವ ಹೊತ್ತಿಗೇ ಶಂಕರ್‌ನಾಗ್‌ ಅಪಘಾತದಲ್ಲಿ ಹೋಗಿಬಿಟ್ಟ.

ಅದು 1990. ಆಗ ಮೊಬೈಲ್‌ಗಳಿನ್ನೂ ಬಂದಿರಲಿಲ್ಲ. ಗಿರೀಶ್‌ ಅಲ್ಲಿಂದಲೇ ಫೋನ್‌ ಮಾಡಿ ನಾನು ಸಂಜೆಯ ಹೊತ್ತಿಗೆ ಬರುತ್ತೇನೆ. ನನಗೋಸ್ಕರ ಕಾಯಬೇಕು. ಅಂತ್ಯಕ್ರಿಯೆ ಮುಗಿಸಬೇಡ ಅಂತ ದಾರಿಯಲ್ಲಿ ಬರುವಾಗ ಅಲ್ಲಲ್ಲಿ ಕಾರು ನಿಲ್ಲಿಸಿ, ಫೋನು ಮಾಡಿ ಹೇಳುತ್ತಲೇ ಬಂದರು. ಅವರು ಬಂದು ತಲುಪಿದಾಗ ರಾತ್ರಿ ಒಂದು ಗಂಟೆ. ಇವತ್ತು ಅವರಿಲ್ಲ.

ನಾನು ಮಂತ್ರಿಯಾಗಿದ್ದಾಗ ಒಮ್ಮೆ ವಿಧಾನಸೌಧಕ್ಕೆ ಬಂದಿದ್ದರು. ಟಿಪ್ಪು ಸುಲ್ತಾನ್‌ ಧಾರಾವಾಹಿಯಲ್ಲಿ ನೀನೊಂದು ಪಾತ್ರ ಮಾಡಬೇಕು ಅಂದರು. ಆಗ ನಾನು ಸಚಿವನಾಗಿದ್ದರಿಂದ ಸಾಧ್ಯವಿಲ್ಲ ಅಂತ ಹೇಳಿದೆ. ಜೆ.ಎಚ್‌.ಪಟೇಲರು ಆಗ ಮುಖ್ಯಮಂತ್ರಿಯಾಗಿದ್ದರು. ಸಚಿವನಾಗಿರುವಾಗ ನೀನು ನಟಿಸಬಾರದು ಅಂತ ಅವರು ಹೇಳಿದ್ದರು. ಅದರ ಚಿಂತೆ ಮಾಡಬೇಡ. ನಾನು ನೋಡ್ಕೋತೀನಿ ಅಂತ ಹೇಳಿ ನನ್ನ ಚೇಂಬರಿನಿಂದ ಸೀದಾ ಮುಖ್ಯಮಂತ್ರಿಗಳ ಚೇಂಬರಿಗೆ ಹೋಗಿ ಅವರನ್ನು ಒಪ್ಪಿಸಿದ್ದರು. ಆವತ್ತೇ ಸಂಜೆ ಶೂಟಿಂಗು ಶುರು ಮಾಡೋಣ ಅಂದಿದ್ದರು. ಟಿಪ್ಪು ಸುಲ್ತಾನನ ಪಾತ್ರದಲ್ಲಿ ನಾನು ನಟಿಸಿದೆ.

ಹೀಗೆ ಅವರ ಜೊತೆಗೆ ನಿರಂತರವಾಗಿ ನನ್ನ ಒಡನಾಟ ಇತ್ತು. ಅದಕ್ಕೇ ನಾನು, ಅವರ ಜೀವನದಲ್ಲಿ ನಾವು ಹಾಸು ಹೊಕ್ಕಾಗಿದ್ದೆವೋ ಅಥವಾ ನನ್ನ ಮತ್ತು ಶಂಕರ್‌ ಜೀವನದಲ್ಲಿ ಅವರು ಹಾಸುಹೊಕ್ಕಾಗಿದ್ದರೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದು. ಆಗಸ್ಟ್‌ 15, 2018ರಂದು ಗಿರೀಶ್‌ ಇದ್ದಕ್ಕಿದ್ದ ಹಾಗೆ ನನಗೆ ಫೋನ್‌ ಮಾಡಿದ್ದರು. ಒಂದು ಪುಸ್ತಕ ಕಳಿಸಿದ್ದೀನಿ. ಓದಿ ಹೇಗಿದೆ ಅಂತ ಹೇಳು ಅಂದರು. ಮಾರನೆಯ ದಿನವೇ ಪೋಸ್ಟ್‌ನಲ್ಲಿ ಪುಸ್ತಕ ಬಂತು. ಅದು ಅವರ ಹೊಸ ನಾಟಕ ರಾಕ್ಷಸ-ತಂಗಡಿ. ಅವರು ಬರೆದ ಕೊನೆಯ ನಾಟಕವೂ ಹೌದು.

ಆ ನಾಟಕದ ಮೊದಲ ಪುಟದಲ್ಲಿ ಅವರು ತಮ್ಮದೇ ಹಸ್ತಾಕ್ಷರದಲ್ಲಿ ಸಹಿ ಮಾಡಿ ಹೀಗೆ ಬರೆದಿದ್ದರು: ಯಯಾತಿಯಿಂದ ರಾಕ್ಷಸ-ತಂಗಡಿಯ ತನಕ ಜೊತೆಗಿದ್ದ ಅನಂತನಿಗೆ ಪ್ರೀತಿಯೊಂದಿಗೆ!

ಅದನ್ನು ಓದಿದವನೇ ಅವರಿಗೆ ಫೋನ್‌ ಮಾಡಿದೆ. ಗಿರೀಶ್‌, ಇದು ಅದ್ಭುತವಾದ ನಾಟಕ. ನಿಮಗೆ ಹುಷಾರಿಲ್ಲ ಅಂತ ಕೇಳಿದೆ. ಹಾಗಿದ್ದರೂ ಇಂಥ ಶ್ರೇಷ್ಠವಾದ ನಾಟಕ ಬರೆದಿದ್ದೀರಲ್ಲ ಅಂತ ಕೇಳಿದೆ. ಆರೋಗ್ಯದ ಮಾತು ಬಿಡು, ನಾಟಕ ಹೇಗಿದೆ ಹೇಳು ಅಂದರು. ನಾನೇನೂ ಹೇಳಬೇಕಾಗಿಲ್ಲ. ಅದ್ಭುತವಾಗಿ ಬರೆದಿದ್ದೀರಿ. ಶೇಕ್ಸ್‌ಪಿಯರ್‌ ನಾಟಕಗಳನ್ನು ಓದದೇ ಇದ್ದವರೂ ಅವನೊಬ್ಬ ಮಹಾನ್‌ ದುರಂತ ನಾಟಕಕಾರ ಅನ್ನುತ್ತಾರೆ. ನೀವು ಕೂಡ ದುರಂತ ನಾಟಕವನ್ನೇ ಬರೆದಿದ್ದೀರಿ. ವಿಜಯನಗರದ ಕೊನೆಯ ದಿನಗಳ ದುರಂತ ಕತೆಯನ್ನು ಅಳಿಯ ರಾಮರಾಯನ ದುರಂತವನ್ನು ದಾಖಲಿಸಿದ್ದೀರಿ. ಬಹಳ ಒಳ್ಳೆಯ ನಾಟಕ ಇದು ಎಂದು ಹೇಳಿದೆ. ಈ ನಾಟಕವನ್ನು ರಂಗಕ್ಕೆ ತಂದರೆ ನೀನು ನಟಿಸುತ್ತೀಯಾ ಅಂತ ಕೇಳಿದರು. ಅಳಿಯ ರಾಮರಾಯನ ಪಾತ್ರ ಮಾಡುತ್ತೀಯಾ ಅಂದರು. ನನಗೀಗ ಎಪ್ಪತ್ತು ವರ್ಷ. ಮೂರು ನಾಲ್ಕು ಅಂಕಗಳ ನಾಟಕ ಬರೆದಿದ್ದೀರಿ. ಉದ್ದುದ್ದ ಮಾತುಗಳಿವೆ. ಅವನ್ನೆಲ್ಲ ಉರುಹೊಡೆದು, ರಿಹರ್ಸಲ್‌ ಮಾಡಿ, ರಂಗದ ಮೇಲೆ ನಿಂತು ಅಭಿನಯಿಸಬೇಕು ಅಂದರೆ ಎಷ್ಟುರಿಹರ್ಸಲ್‌ ಮಾಡಬೇಕೋ ಗೊತ್ತಿಲ್ಲ. ನೀವಿದನ್ನು ಸಿನಿಮಾ ಮಾಡೋಹಾಗಿದ್ರೆ ಹೇಳಿ, ನಾನು ನಟಿಸುತ್ತೇನೆ ಅಂದೆ.

ನನಗೆ ಅವರ ತಲೆದಂಡ ನಾಟಕವನ್ನೂ ಸಿನಿಮಾ ಮಾಡಬೇಕು ಅಂತ ಆಸೆಯಿತ್ತು. ಹಾಗಂತ ವಿಷ್ಣುವರ್ಧನ್‌ ಮತ್ತು ಶಂಕರ್‌ಗೆ ಹೇಳಿಯೂ ಇದ್ದೆ. ಬೇರೆ ಬೇರೆ ಕಾರಣಗಳಿಂದಾಗಿ ಅದು ಆಗಲಿಲ್ಲ ಅನ್ನೋದು ಬೇರೆ ಮಾತು.

ಗಿರೀಶ್‌ ಮಾತಾಡುತ್ತಿರುವಾಗ ಅದರ ಧ್ವನಿ ಕೊಂಚ ಅದುರಿದ ಹಾಗೆ ಕೇಳಿಸುತ್ತಿತ್ತು. ಮಾತು ಪ್ರತಿಧ್ವನಿಸುತ್ತಿತ್ತು. ಯಾಕೆ ಹೀಗೆ ಅಂತ ಕೇಳಿದೆ. ಅದಕ್ಕೆ ಅವರು ನಾನು ಆಕ್ಸಿಜನ್‌ ಪೈಪ್‌ ಹಾಕಿಕೊಂಡಿದ್ದೇನೆ. ಅದನ್ನು ತೆಗೆದಿಟ್ಟು ಮಾತಾಡ್ತೀನಿ ತಡಿ ಅಂತ ಹೇಳಿ ಪೈಪ್‌ ತೆಗೆದಿಟ್ಟು ಸ್ವಲ್ಪ ಹೊತ್ತು ಮಾತಾಡಿದರು. ಇದಾದ ನಂತರ ಅವರನ್ನು ಭೇಟಿ ಮಾಡಬೇಕು, ಅವರ ಮನೆಗೆ ಹೋಗಬೇಕು ಅಂದುಕೊಂಡೆ. ಅವರು ಮನೆ ಬದಲಾಯಿಸಿದ್ದಾರೆ ಅಂತ ಆಮೇಲೆ ಗೊತ್ತಾಯಿತು. ಅಲ್ಲದೇ ಅವರಿಗೆ ಹುಷಾರಿಲ್ಲ ಅನ್ನುವ ಕಾರಣಕ್ಕೆ ಅವರ ಮನೆಗೆ ಹೋಗುವುದು ಅವರಿಗೆ ಇಷ್ಟವಾಗುವುದಿಲ್ಲ ಅಂತ ನನಗೆ ಗೊತ್ತಿತ್ತು.

ಹಲವಾರು ವರ್ಷಗಳ ಹಿಂದೆ ಅವರೊಮ್ಮೆ ಕಾಯಿಲೆ ಬಿದ್ದು ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿದ್ದರು. ಅದು ಗೊತ್ತಾಗಿ ವೈಯನ್ಕೆ ನೋಡಿಕೊಂಡು ಬರೋಣ ಅಂದರು. ನಾನೂ ವೈಯನ್ಕೆಯೂ ಅವರನ್ನು ನೋಡಲಿಕ್ಕೆಂದು ಹೋದೆವು. ಅದು ಅವರಿಗೆ ಇಷ್ಟವಾಗಿರಲಿಲ್ಲ. ಹೀಗಾಗಿ ಅವರ ಮನೆಗೆ ಹೋಗಲು ನಾನು ಹಿಂಜರಿದೆ.

ಅವರು ಬರೆದ ನಾಟಕಗಳ ವೈವಿಧ್ಯ ನೋಡಿ. ಹಿಟ್ಟಿನ ಹುಂಜ ನಾಟಕದಲ್ಲಿ ಹಿಂಸೆಯ ಬಗ್ಗೆ ಹೇಳಿದ್ದಾರೆ. ಯಯಾತಿ, ಹಯವದನ, ತುಘಲಕ್‌, ತಲೆದಂಡ- ಹೀಗೆ ಬೇರೆ ಬೇರೆ ಥರದ ನಾಟಕ ಬರೆದಿದ್ದಾರೆ. ಅಬ್ಸರ್ಡ್‌, ಅಬ್‌ಸ್ಟ್ರಾಕ್ಟ್, ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಕತೆಗಳನ್ನೆಲ್ಲ ನಾಟಕವಾಗಿಸಿದ್ದಾರೆ. ಅವರು ಈ ಶತಮಾನದ ಶ್ರೇಷ್ಠ ನಾಟಕಕಾರ. ಇಂಡಿಯಾದ ಬಹುದೊಡ್ಡ ನಾಟಕಕಾರರೂ ಹೌದು. ಅವರು ಸೊಗಸಾಗಿ ಇಂಗ್ಲಿಷ್‌ ಬರೆಯಬಲ್ಲವರಾಗಿದ್ದರು. ಮರಾಠಿಯಲ್ಲೂ ಪರಿಣತಿ ಇತ್ತು. ಆದರೆ ಕನ್ನಡದಲ್ಲೇ ನಾಟಕ ಬರೆದರು.

ಅವರ ಕೆಲವು ನಿಲುವುಗಳು ಅನೇಕರಿಗೆ ಒಪ್ಪಿಗೆಯಾಗಿರಬಹುದು, ಕೆಲವರು ಒಪ್ಪದೇ ಇರಬಹುದು. ಆದರೆ ಅವರು ಮಹಾನ್‌ ನಾಟಕಕಾರ ಅನ್ನುವುದರಲ್ಲಿ ಮಾತ್ರ ಯಾವ ಅನುಮಾನವೂ ಇಲ್ಲ.

ಅವರು ನನಗೆ ಕಳುಹಿಸಿದ ನಾಟಕ ಪುಸ್ತಕದ ಆರಂಭದಲ್ಲಿ ಬರೆದ ಮಾತುಗಳು ಈಗಲೂ ನನ್ನನ್ನು ಕಾಡುತ್ತಲೇ ಇವೆ. ಯಯಾತಿಯಿಂದ ರಾಕ್ಷಸ-ತಂಗಡಿಯ ತನಕ ಜೊತೆಗಿದ್ದ ಅನಂತನಿಗೆ ಪ್ರೀತಿಯೊಂದಿಗೆ ಗಿರೀಶ ಎಂದು ಬರೆದಿದ್ದರಲ್ಲ, ಅದರಲ್ಲಿ ಅವರ ಸಾವಿನ ಒಂದು ಸೂಚನೆ ಇತ್ತಾ? ಯಯಾತಿಯಿಂದ ರಾಕ್ಷಸ-ತಂಗಡಿಯ ತನಕ ಅಂತ ಯಾಕೆ ಬರೆದರು? ಅದೇ ತನ್ನ ಕೊನೆಯ ನಾಟಕವಾಗುತ್ತದೆ ಎಂಬುದು ಅವರಿಗೆ ಗೊತ್ತಿತ್ತಾ? ಯೋಚಿಸುತ್ತಿದ್ದೇನೆ.

ಅವರು ಎಂಥಾ ಘನತೆಯುಳ್ಳ ವ್ಯಕ್ತಿತ್ವ ಅನ್ನುವುದನ್ನು ಅವರ ಸಾವಿನಲ್ಲೂ ಅವರು ತೋರಿಸಿಕೊಟ್ಟಿದ್ದಾರೆ. ನನಗೆ ಸರ್ಕಾರಿ ಅಂತ್ಯಕ್ರಿಯೆ ಬೇಡ, ಯಾರೂ ಮನೆಗೆ ಬರಬೇಕಾಗಿಲ್ಲ. ಸಾರ್ವಜನಿಕ ದರ್ಶನ ಬೇಕಾಗಿಲ್ಲ. ಬರುವವರು ಸ್ಮಶಾನಕ್ಕೆ ಬಂದರೆ ಸಾಕು ಅಂತ ಮೊದಲೇ ಹೇಳಿಟ್ಟಿದ್ದರು.

ಅವರಿಗೆ ನನ್ನ ಗೌರವಪೂರ್ವಕ ಅಂತಿಮ ನಮನಗಳು. ನೀವೇ ಹೇಳಿದ ಹಾಗೆ ಯಯಾತಿಯಿಂದ ರಾಕ್ಷಸತಂಗಡಿಯ ತನಕವೂ ನಾನು ಜೊತೆಗಿದ್ದೆ. ಅದು ನನ್ನ ಸೌಭಾಗ್ಯ.

Latest Videos
Follow Us:
Download App:
  • android
  • ios