ಹೀಗೆ ಶತಾವತಾರಗಳಲ್ಲಿ ಕಾಣಿಸಿಕೊಂಡ ಕನ್ನಡಿಗರ ಪ್ರೀತಿಯ ಅನಂತ್ ಸರ್, ಅನಂತ್‌ನಾಗ್, ಅನಂತ ನಾಗರಕಟ್ಟೆ ಅವರಿಗೀಗ 71. ಇಂದು ಅವರ ಹುಟ್ಟುಹಬ್ಬ. ಜನ್ಮದಿನವನ್ನು ಸದ್ದಿಲ್ಲದೇ ಖಾಸಗಿಯಾಗಿ ಆಚರಿಸಿಕೊಳ್ಳಬೇಕು ಅನ್ನುವ ಪರಮ ಸಂಕೋಚದ ಅನಂತ್‌ನಾಗ್, ರಾಜಕಾರಣದ ಸಂಭ್ರಮ-ಸಂಕಟಗಳನ್ನು ಕಂಡವರು, ಚಿತ್ರರಂಗದ ಏಳುಬೀಳುಗಳ ಹಾದಿಯಲ್ಲಿ ನಡೆದವರು, ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದವರು, ಭಾರತದ ಅತ್ಯುತ್ತಮ ನಟ ಎಂದು ಹಲವರಿಂದ ಕರೆಸಿಕೊಂಡವರು. ಅವರ ಜೊತೆ ಆಡಿದ ಮಾತುಗಳ ಸಾರಾಂಶ ಇಷ್ಟು:

71ನೇ ಹುಟ್ಟುಹಬ್ಬಕ್ಕೆ ಅನಂತ್‌ನಾಗ್ ಏನು ಮಾಡುತ್ತಿದ್ದಾರೆ?

ಓಗರ ಎಂಬ ಸಂಸ್ಥೆಯ ರಾಯಭಾರಿ ಆಗುತ್ತಿದ್ದೇನೆ. ಅದೇ ಈ ಸಲದ ವಿಶೇಷ. ಹಿಂದೆ ಒಂದೆರಡು ಕಂಪೆನಿಗಳಿಗೆ ಮಾಡೆಲ್ ಆಗಿದ್ದೆ. ನಂತರ ಅದೆಲ್ಲ ಸರಿಹೋಗೋಲ್ಲ ಅಂತ ಬಿಟ್ಟೆ. ಈಗ ಹೆಬ್ಬುಲಿ ನಿರ್ಮಾಪಕ ರಘುನಾಥ್ ಬಂದು ನಮ್ಮ ಸಂಸ್ಥೆಯ ರಾಯಭಾರಿ ಆಗಬೇಕು ಅಂದರು. ಒಪ್ಪಿಕೊಂಡಿದ್ದೇನೆ. ರಘುನಾಥ್ ಅವರ ಪ್ರಾಮಾಣಿಕತೆ, ಅವರ ಕಂಪೆನಿಯ ಪ್ರಾಡಕ್ಟುಗಳ ಗುಣಮಟ್ಟ ಇಷ್ಟವಾಯಿತು. ಒಂದು ವರ್ಷದ ಮಟ್ಟಿಗೆ ನಾನು ಓಗರದ ರಾಯಭಾರಿ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟ!

ಸಿನಿಮಾಗಳು?

ದ್ವಾರಕೀಶ್ ಮಗ ಯೋಗಿ ನಿರ್ಮಾಣದ ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಚಿತ್ರದಲ್ಲೊಂದು ಒಳ್ಳೆಯ ಪಾತ್ರವಿದೆ. ಹೊಸ ಹುಡುಗ ಪ್ರದೀಪ್ ಶಾಸ್ತ್ರಿ ನಿರ್ದೇಶನದ ಮೇಡ್ ಇನ್ ಬೆಂಗಳೂರು, ಯೋಗರಾಜ ಭಟ್ಟರ ಗಾಳಿಪಟ-೨, ರಿಷಭ್ ಶೆಟ್ಟಿಯ ರುದ್ರಪ್ರಯಾಗ
- ಮುಂದಿನ ಚಿತ್ರಗಳು. ಕೆಜಿಎಫ್ ಭಾಗ 2ಕ್ಕೆ ಕೇಳಿ ಹೋಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನಗ ಇಂಡಿಯಾ ವರ್ಸಸ್ ಇಂಗ್ಲೆಂಡ್‌ನಲ್ಲಿ ಒಂದೊಳ್ಳೇ ಪಾತ್ರವಿದೆ. ಆ ಸಿನಿಮಾ ಚೆನ್ನಾಗಿದೆ ಅನ್ನಿಸುತ್ತಿದೆ.

ಅನಂತ್‌ ನಾಗ್ ರಾಜಕಾರಣದ ಹೆಜ್ಜೆಗುರುತು, ಸಚಿವರಾಗಿಯೂ ಕೆಲಸ ಮಾಡಿದ್ರು!

ಪರಭಾಷೆಯಿಂದ ಆಫರ್?

ತಮಿಳು, ತೆಲುಗಿನ ನಿರ್ಮಾಪಕರು, ನಿರ್ದೇಶಕರು ಕರೆಯುತ್ತಿದ್ದಾರೆ. ಹೋಗಬೇಕೋ ಬೇಡವೋ ನಿರ್ಧರಿಸಿಲ್ಲ. ನನಗೀಗ ಎಪ್ಪತ್ತೊಂದು. ಉತ್ಸಾಹ ಮೊದಲಿನಷ್ಟಿಲ್ಲ. ನನ್ನನ್ನು ಸೆಳೆಯುವಂಥ ಕತೆ, ಪಾತ್ರ ಸಿಕ್ಕರೆ ಮಾತ್ರ ಹುರುಪು ಹುರಿಗಟ್ಟುತ್ತದೆ.

ಹುಟ್ಟುಹಬ್ಬದ ಆಚರಣೆ ಹೇಗೆ?

ಅಂಥದ್ದೇನಿಲ್ಲ. 71 ಅಂದ್ರೆ 17 ಅಲ್ಲವಲ್ಲ. ಸದ್ಯಕ್ಕೆ ಓಗರದ್ದೇ ಸಡಗರ.