ಸಹಜ ನಟನೆ, ಸ್ಪಷ್ಟವಾದ ಕನ್ನಡ, ಸುಲಲಿತ ಡೈಲಾಗ್‌ನಿಂದಲೇ ಹತ್ತಿರವಾಗುವ ನಟ ಅನಂತ್‌ ನಾಗ್.  ಒಂದು ಕಾಲದಲ್ಲಿ ಹೆಂಗಳೆಯರ ಹೃದಯಕ್ಕೆ ಲಗ್ಗೆಇಟ್ಟಿದ್ದ ಕಲಾವಿದ.  ಅನಂತ್ ನಾಗ್ 1980 ರ ದಶಕದಲ್ಲಿ ರಾಜಕಾರಣದಲ್ಲಿಯೂ ಗುರುತಿಸಿಕೊಂಡರು.

ತಮ್ಮ ಶಂಕರ್‌ ನಾಗ್ ಬೆಂಗಳೂರು ಮೆಟ್ರೋ, ಪರಿಸರ ಕಾಪಾಡುವ ಹಲವು ಕನಸುಗಳನ್ನು ಕಾಣುತ್ತಿದ್ದರೆ ಇತ್ತ ಅನಂತ್ ನಾಗ್ ಜನಸೇವೆಗಾಗಿ ರಾಜಕಾರಣಕ್ಕೆ ಪ್ರವೇಶ ಮಾಡಿದರು. 

ಜನತಾ ಪಾರ್ಟಿ ನಂಟು:  1983ರ ವಿಧಾನಸಭೆ  ಚುನಾವಣೆ ವೇಳೆ ಅನಂತ್ ನಾಗ್ ಜನತಾ ಪಾರ್ಟಿಯ ಸ್ಟಾರ್ ಪ್ರಚಾರಕರಾಗಿ  ರಾಜಕಾರಣದ ಅಖಾಡಕ್ಕೆ ಧುಮಿಕಿದರು. 1985 ಮತ್ತು 1989 ರ ಚುನಾವಣೆ ವೇಳೆಯೂ ಅನಂತ್ ನಾಗ್ ವೇದಿಕೆಯಲ್ಲಿ ಕಾಣಿಸಿಕೊಂಡರು. 1983ರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಜ್ಞಾನಪೀಠ ಕವಿ ಶಿವರಾಮ ಕಾರಂತ  ವಿರುದ್ಧ ಅನಂತ್ ನಾಗ್ ಸ್ಪರ್ಧೆ ಮಾಡಿದ್ದರು. ಆದರೆ ಈ ಚುನಾವಣೆಯಲ್ಲಿ  ಕಾರಂತರು ಮತ್ತು ಅನಂತ್ ನಾಗ್ ಇಬ್ಬರು ಸೋಲು ಕಾಣುತ್ತಾರೆ.

ಶಾಸಕರಾಗಿ ವಿಧಾನಸೌಧ  ಪ್ರವೇಶ: ಈಗ ಡಿಸಿಎಂ ಡಾ. ಅಶ್ವಥ್ ನಾರಾಯಣ ಪ್ರತಿನಿಧಿಸುತ್ತಿರುವ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಗೆದ್ದ ಅನಂತ್ ನಾಗ್ ವಿಧಾನಸೌಧ ಪ್ರವೇಶ ಮಾಡಿದರು. ಅದು 1994, ಚುನಾವಣೆಯಲ್ಲಿ ಗೆದ್ದ ನಟನಿಗೆ ಜೆ.ಎಚ್.ಪಟೇಲ್ ಸಂಪುಟದಲ್ಲಿ ಬಿಡಿಎ ಸಚಿವ ಸ್ಥಾನವೂ ದೊರಕಿತು. 

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟ!

ರಾಮಕೃಷ್ಣ ಹೆಗಡೆ ಮತ್ತು ಅನಂತ್ ನಾಗ್: ಮುತ್ಸದ್ಧಿ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರೊಂದಿಗೆ ಅನಂತ್ ನಾಗ್ ಅತ್ಯುತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಕೊನೆಯವರೆಗೂ ಇಬ್ಬರ ನಡುವಿನ ಸಂಬಂಧ ಹಾಗೇ ಇತ್ತು. ನಂತರ ಜನತಾದಳ  ಪಕ್ಷ ಒಡೆದು ಚೂರಾಗುವವರೆಗೂ ಅನಂತ್ ನಾಗ್ ಪಕ್ಷದಲ್ಲಿಯೇ ಇದ್ದರು.

2004ರಲ್ಲಿ ಮತ್ತೆ ಸ್ಪರ್ಧೆ: 2004ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಅನಂತ್ ನಾಗ್ ಜೆಡಿಎಸ್ ನಿಂದ ಕಣಕ್ಕೆ ಇಳಿದರು. ಕಾಂಗ್ರೆಸ್ ನಿಂದ ನಂತರ ಸಿಎಂ ಪಟ್ಟ ಏರಿದ ಎಸ್‌.ಎಂ ಕೃಷ್ಣ, ಬಿಜೆಪಿಯಿಂದ ಕಲಾವಿದ ಮುಖ್ಯಮಂತ್ರಿ ಚಂದ್ರು ಸ್ಪರ್ಧೆ ಮಾಡಿದ್ದರು. ಇಲ್ಲಿ ಕೃಷ್ಣ ಅವರಿಗೆ ಗೆಲುವಾಯಿತು. ಇತಿಹಾಸಗಳು ಏನೇ ಇರಲಿ ಹೃದಯ ಶ್ರೀಮಂತ ನಟನಿಗೆ ಸುವರ್ಣ ನ್ಯೂಸ್. ಕಾಂನಿಂದ ಹುಟ್ಟುಹಬ್ಬದ ಶುಭಾಶಯಗಳು.